

ಶ್ರೀನಿವಾಸಪುರ : ಜಿಲ್ಲಾ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಮಹೇಶ್ ಅವರು ಮೊದಲಿನಿಂದಲೂ ಸಂಘಟನೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅನುಭವ ಹೊಂದಿದ್ದಾರೆ ಎಂದು ತಾಲೂಕು ಪಂಚಾಯಿತಿ ಇಒ ಕೆ. ಸರ್ವೇಶ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಖಜಾಂಚಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ಹಲವು ಸವಾಲುಗಳು ಎದುರಾಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಮಹೇಶ್ ಅವರಲ್ಲಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರಿಗೆ ಶಕ್ತಿ ಸಿಗಲಿ ಎಂದು ಶುಭ ಹಾರೈಸಿದರು.
ನೂತನ ಜಿಲ್ಲಾ ಅಧ್ಯಕ್ಷ ಕೆ. ಮಹೇಶ್ ಮಾತನಾಡಿ, ಶ್ರೀನಿವಾಸಪುರ ತಾಲೂಕಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುವುದು ಕಷ್ಟ ಎಂಬ ಮಾತು ಕೇಳಿಬರುತ್ತದೆ. ಆದರೆ ನಾವು ಮಾಡುವ ಕೆಲಸಗಳು ಪ್ರಾಮಾಣಿಕವಾಗಿದ್ದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
2023ರಲ್ಲಿ ಈ ತಾಲೂಕಿಗೆ ಬಂದಾಗ ವಿಭಿನ್ನ ಅನುಭವ ಎದುರಾದುದು. ಸಾರ್ವಜನಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹೇಗೆ ಸಮನ್ವಯದಿಂದ ನಡೆಸಬೇಕು ಎಂಬುದು ಅರ್ಥವಾಯಿತು.
ಜಿಲ್ಲೆಯಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಹಿಂದೆ ಕೊನೆಯ ಸ್ಥಾನದಲ್ಲಿದ್ದ ತಾಲೂಕು, ಇಂದು ಮೊದಲ ಸ್ಥಾನಕ್ಕೇರಿರುವುದು ಹಾಗೂ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿರುವುದು ಎಲ್ಲರ ಶ್ರಮದ ಫಲ ಎಂದು ಹೇಳಿದರು.
ತಾಲೂಕಿನಲ್ಲಿ ಕೆಲವರು ನಕಲಿ ಅರ್ಜಿಗಳ ಮೂಲಕ ಅಧಿಕಾರಿಗಳಿಗೆ ಮಾನಸಿಕ ಒತ್ತಡ ತರುತ್ತಿದ್ದು, ಈ ಬಗ್ಗೆ ಸಂಘಟಿತವಾಗಿ ಹೋರಾಡಬೇಕಾಗಿದೆ ಎಂದು ಅವರು ಹೇಳಿದರು. ಎಲ್ಲ ಪಿಡಿಒಗಳು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ತಾನು ಅವರೊಂದಿಗೆ ಇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಮಂಗಳಾಂಬ ಮಾತನಾಡಿ, ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಬದಲಾವಣೆ ತರಲು ಶ್ರಮಿಸುವುದಾಗಿ ತಿಳಿಸಿದರು. ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಇಒ ಅವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಖಜಾಂಚಿ ಸಂಪರಾಜು, ವಾಟರ್ ಬೋರ್ಡ್ ಸಹಾಯಕ ನಿರ್ದೇಶಕ ಸುರೇಶ್, ತಾಲೂಕು ಪಿಡಿಒ ಸಂಘದ ಅಧ್ಯಕ್ಷ ಚಿನ್ನಪ್ಪ, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಗಣಕಯಂತ್ರ ನಿರ್ವಾಹಕ ಕೆ.ಎಂ. ಶ್ರೀನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

