

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಖಾರ್ವಿ ಸಮಾಜ ಮತ್ತು ಕೊಂಕಣಿ ಖಾರ್ವಿ ಕಲಾಮಾಂಡ್, ಭಟ್ಕಳ ಇವರ ಜಂಟಿ ಸಹಯೋಗದಲ್ಲಿ ಫೆಬ್ರವರಿ 28, 2026 ರಂದು ಭಟ್ಕಳ ಬಂದರಿನಲ್ಲಿ “ಸಿಗ್ಮೆ ಪೊರಬ್- 2026” ಎಂಬ ಕೊಂಕಣಿ ಜಾನಪದ ಕಾರ್ಯಕ್ರಮವು ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ʼಮೀನುಗಾರಿಕೆ ಕೊಂಕಣಿ ಖಾರ್ವಿ ಸಮುದಾಯದ ವೃತ್ತಿ ಮಾತ್ರವಲ್ಲದೇ, ಪ್ರವೃತ್ತಿ, ಕಲೆ, ಸಂಸ್ಕೃತಿ ಮತ್ತು ಜೀವನವೇ ಆಗಿದೆ. ಹಾಗಾಗಿ ಸಮುದಾಯದ ಒಗ್ಗಟ್ಟೇ ಅವರ ತಾಕತ್ತು. ಕೊಂಕಣಿ ಭಾಷೆಯ ಸೊಗಡು ನೆಲ-ಜಲದ ಗಡಿಯನ್ನು ದಾಟಿ ಪಸರುತ್ತಿದೆʼ ಎಂದು ಶುಭ ಹಾರೈಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಎಲ್ಲರನ್ನು ಸ್ವಾಗತಿಸಿ, ʼಕೊಂಕಣಿಯು ಯಾವುದೇ ಒಂದು ಪ್ರತ್ಯೇಕ ಧರ್ಮ ಅಥವಾ ಪ್ರದೇಶದ ಭಾಷೆಯಾಗಿ ಉಳಿಯದೇ, ಜಾತಿ-ಧರ್ಮ, ಸಮುದಾಯ, ವೃತ್ತಿ, ಪ್ರದೇಶದ ಎಲ್ಲೆಯನ್ನು ಮೀರಿ ಬೆಳೆದಿದೆ. ಅದನ್ನು ಗುರುತಿಸಿ, ಬೆಳೆಸಿ ಪ್ರೋತ್ಸಾಹಿಸುವಂತಹ ಮಹತ್ಕಾರ್ಯವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಡುತ್ತಿದೆ ಹಾಗೂ ಮುಂದೆಯೂ ಮಾಡುತ್ತಿರುತ್ತದೆ. ಅದರಲ್ಲೂ ಪ್ರತ್ಯೇಕವಾಗಿ ಕೊಂಕಣಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಅಕಾಡೆಮಿಯು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತದೆʼ ಎಂದು ಹೇಳಿದರು. ಕೊಂಕಣಿ ಭವನದ ಕೆಲಸವು ಅನುದಾನ ಕೊರತೆಯಿಂದ ಅರ್ಧದಲ್ಲೇ ನಿಂತಿದೆ. ಅದನ್ನು ಸಂಪೂರ್ಣಗೊಳಿಸಲು ಮೂರು ಕೋಟಿ ರೂಪಾಯಿಗಳ ಅಗತ್ಯತೆ ಇದೆ. ಮಂಕಾಳ ವೈದ್ಯರವರು ಈ ಹಿಂದೆ ಕೊಂಕಣಿ ಅಧ್ಯಯನ ಪೀಠವನ್ನು ರಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೊಂಕಣಿ ಭವನಕ್ಕೂ ಕೂಡ ಅನುದಾನ ಒದಗಿಸಿಕೊಡಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಬೇಕೆಂದು ಸಚಿವರಿಗೆ ಮನವಿಯನ್ನು ನೀಡಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತಲಿನೊರವರು ಮಾತನಾಡಿ, ಮಂಕಾಳ ವೈದ್ಯರವರು ಹಾಗೂ ಕೊಂಕಣಿ ಜನರ ಒಡನಾಟವನ್ನು ಕೊಂಡಾಡಿದರು.
ಮೀನುಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಮೀನುಗಾರರ ಕುಟುಂಬಕ್ಕೆ, ಸಚಿವರು ಸರಕಾರದಿಂದ ಲಭಿಸಿದ ಸುಮಾರು 50 ಲಕ್ಷಕ್ಕೂ ಮಿಕ್ಕಿ ಧನಸಹಾಯದ ಚೆಕ್ಕನ್ನು ವಿತರಿಸಿದರು.
ಖಾರ್ವಿ ಸಮುದಾಯದ ಮುಖಂಡರಾದ ಶ್ರೀ ಸುಬ್ರಾಯ ಬಿ ಖಾರ್ವಿ, ಶ್ರೀ ರವಿ ಟಿ. ನಾಯಕ್, ಶ್ರೀ ರತ್ನಾಕರ ಎಂ. ಖಾರ್ವಿ, ಹಾಗೂ ನವಾಯತಿ ಸಮುದಾಯದ ಮುಖಂಡರಾದ ಶ್ರೀ ಇನಾಯಿತುಲ್ಲ ಶಾಬಾಂದ್ರಿ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕೊಂಕಣಿ ಖಾರ್ವಿ ಕಲಾಮಾಂಡ್ ಇದರ ಸಂಚಾಲಕರಾದ ಶ್ರೀ ಶ್ರೀಧರ ಎಂ. ಖಾರ್ವಿ ಧನ್ಯವಾದ ಸಮರ್ಪಿಸಿದರು. ಶ್ರೀ ಕೇಶವ್ ಗಣೇಶ್ ತಾಂಡೆಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ನವೀನ್ ಲೋಬೊ, ಶ್ರೀ ದಯಾನಂದ ಮಡ್ಕೇಕರ್, ಶ್ರೀ ಜೇಮ್ಸ್ ಲೋಪಿಸ್ ಹಾಗೂ ಶ್ರೀ ಮಾಮ್ದು ಇಬ್ರಾಹಿಂರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

