

ಕುಂದಾಪುರ; “ಸಾಹಿತಿ, ವಾಗ್ಮಿ, ವಿಮರ್ಶಕ, ಅಂಕಣಗಾರರಾಗಿ ಸಾಹಿತ್ಯ ಲೋಕಕ್ಕೆ ಬಹು ದೊಡ್ಡ ಕೊಡುಗೆ ನೀಡಿದವರು ಕೋಣಿ ಶಿವಾನಂದ ಕಾರಂತರು. ಅಧ್ಯಯನಶೀಲರಾಗಿ ತಮ್ಮ ಪಾಂಡಿತ್ಯದಿಂದ ಯುವ ಬರಹಗಾರರಿಗೆ ಪ್ರೇರಣೆ ತುಂಬುತ್ತಿದ್ದ ಕಾರಂತರು ಹಲವಾರು ಲೇಖಕರ ಕೃತಿಗಳ ವಿಮರ್ಶೆ ಮಾಡಿ ತಿದ್ದಿ ಪ್ರೋತ್ಸಾಹಿಸುವ ಮೂಲಕ ಸ್ಫೂರ್ತಿ ತುಂಬುತ್ತಿದ್ದರು. ಅವರ ಪ್ರಕಟಿತ ಕೃತಿಗಳು ಅಮೂಲ್ಯವಾಗಿದ್ದವು. ಗಂಗೊಳ್ಳಿಯಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ “ಗಂಗಾವಳಿ” ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೋ. ಶಿವಾನಂದ ಕಾರಂತರ ಕುರಿತು ಪುಸ್ತಕ ಪ್ರಕಟಣೆ ಮಾಡಿದ್ದೆವು. ಅವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ದೊಡ್ಡ ನಷ್ಟ. ಅವರ ಅಮೂಲ್ಯ ಮಾರ್ಗದರ್ಶನ ಸ್ಮರಿಸೋಣ” ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋಣಿ ಶಿವಾನಂದ ಕಾರಂತರಿಗೆ ಸಾರ್ವಜನಿಕ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಕಾರಂತರ ಸಾಧನೆ ಬಣ್ಣಿಸಿದರು.
ಕಮಲಾಕರ ಚಿಕ್ಕಮಗಳೂರು ಇವರು ಭಾವಗೀತೆ ಮೂಲಕ ಕಾರಂತರಿಗೆ ನುಡಿ ನಮನ ಸಲ್ಲಿಸಿದರು.
ಗಂಗೊಳ್ಳಿ ಎಸ್. ವಿ. ಶಾಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಕಾಶೀನಾಥ ಪೈ ಮಾತನಾಡಿ, “ನಾಲ್ಕು ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಕಾರಂತರು ಸಂಸ್ಥೆಗೆ ಕೀರ್ತಿ ತರುವಂತಹ ಸೇವೆ ಸಲ್ಲಿಸಿದ್ದರು” ಎಂದರು.
ಉಡುಪಿಯ ಸಾಹಿತಿ ಸಂಧ್ಯಾ ಶೆಣೈ ಮಾತನಾಡಿ, “ಶಿವಾನಂದ ಕಾರಂತರು ನಮ್ಮಂತಹ ಉದಯೋನ್ಮುಖ ಸಾಹಿತಿಗಳಿಗೆ ತಮ್ಮ ಪ್ರೀತಿ, ವಿಶ್ವಾಸ, ಮಾರ್ಗದರ್ಶನ ನೀಡಿ ಸ್ಫೂರ್ತಿ ತುಂಬಿದವರು” ಎಂದು ನಮನ ಸಲ್ಲಿಸಿದರು.
ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಕಿ ರೇಖಾ ಬನ್ನಾಡಿ ಮಾತನಾಡಿ, “ನಮ್ಮನ್ನೆಲ್ಲ ತಮ್ಮ ಕುಟುಂಬ ಸದಸ್ಯರು ಎಂಬ ಭಾವನೆಯಿಂದ ಅವರು ಗೌರವಿಸುತ್ತಿದ್ದರು. ಭಂಡಾರ್ಕರ್ಸ್ ಕಾಲೇಜಿನ ಸಾಹಿತ್ಯ, ರಂಗ ಚಟುವಟಿಕೆಗಳಿಗೆ ಪ್ರೇರಕರಾಗಿದ್ದರು. ಅವರೊಬ್ಬ ಪ್ರತಿಭಾವಂತ ಶಿಕ್ಷಕರು” ಎಂದರು.
ನಿವೃತ್ತ ಪ್ರಾಂಶುಪಾಲ ನಾರಾಯಣ ಹೆಬ್ಬಾರ್ ಮಾತನಾಡಿ, “ಭಂಡಾರ್ಕರ್ಸ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಕಾರಂತರು ವಿದ್ಯಾರ್ಥಿ ಜೀವನದಿಂದ ಕೊನೆ ತನಕ ನಿರಂತರ ಬಾಂಧವ್ಯ ಇರಿಸಿಕೊಂಡು ಖುಷಿ ನೀಡಿದವರು. ಅವರೊಂದಿಗೆ ಯಾವುದೇ ವಿಷಯದಲ್ಲಿ ವಿಚಾರ ವಿಮರ್ಶೆ ಮಾಡುವುದೇ ಖುಷಿಯ ವಿಷಯವಾಗಿತ್ತು” ಎಂದರು.
ಚಲನಚಿತ್ರ ನಿರ್ದೇಶಕ ರಾಜ್ ಬಲ್ಲಾಳ್ ಮಾತನಾಡಿ, “ನಾಟಕ, ಚಲನಚಿತ್ರ ಎಲ್ಲಾ ವಿಷಯದಲ್ಲೂ ಐದು ದಶಕಗಳ ಬಾಂಧವ್ಯ ನಮ್ಮದು. ವಿಮರ್ಶಾತ್ಮಕವಾಗಿ ವಿವರಿಸಿ ಅರಿವು ಮೂಡಿಸುತ್ತಿದ್ದರು” ಎಂದರು.
ಮೈಲಾರೇಶ್ವರ ಯುವಕ ಮಂಡಲದ ಪರವಾಗಿ ಮಾತನಾಡಿದ ವರದರಾಜ್ ಪೈ “ಕಾರಂತರ ತಿಳುವಳಿಕೆಯ ಮಾತುಗಳು ಸದಾ ಮನಸ್ಸಿನಲ್ಲಿ ಮೂಡುತ್ತಾ ಇರುತ್ತದೆ” ಎಂದರು.
ಎಸ್. ವಿ. ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್. ಎನ್. ರೇವಣ್ಕರ್ ಮಾತನಾಡಿ, “ಯಾರನ್ನೂ ದ್ವೇಷಿಸದ, ಯಾರ ಬಗ್ಗೆಯೂ ಕೆಟ್ಟ ಮಾತನಾಡದ ಅಪೂರ್ವ ವ್ಯಕ್ತಿತ್ವ ಕಾರಂತರದ್ದು. ಅತ್ಯಂತ ಪ್ರೀತಿಯಿಂದÀ ಕರೆಯುತ್ತಿದ್ದ ಅವರು ನಮ್ಮೊಂದಿಗೆ ಆತ್ಮೀಯತೆ ಹೊಂದಿದ್ದವರು” ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಂದ ಕುಂದ ಸೋಮಶೇಖರ ಶೆಟ್ಟಿ ಮಾತನಾಡಿ, “ಕಾರಂತರು ಓರ್ವ ಆದರ್ಶ ಶಿಕ್ಷಕ, ಅನುಕರಣೀಯ ಪಂಡಿತ” ಎಂದು ಬಣ್ಣಿಸಿದರು.
ಕೋ. ರಮಾನಂದ ಕಾರಂತ ಸ್ವಾಗತಿಸಿದರು. “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ನಿರೂಪಿಸಿದರು. ವಿವಿಧ ಸಂಘ ಸಂಸ್ಥೆಗಳ ನೂರಾರು ಗಣ್ಯರು ಭಾಗವಹಿಸಿ ಕಾರಂತರಿಗೆ ನಮನ ಸಲ್ಲಿಸಿದರು. ವಿದ್ಯಾ ಕಾದಂಬರಿ ವಂದಿಸಿದರು.



