

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಆತಂಕ ನಿವಾರಣೆಗೆ ವಿಶೇಷ ಕಾರ್ಯಗಾರ ಕರ್ನಾಟಕ ರಾಜ್ಯ ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಿಲ್ಲತ್ ವೆಲ್ಫೇರ್ ಟ್ರಸ್ಟ್ನಿಂದ ಮಾರ್ಗದರ್ಶನ
ಕೋಲಾರ : ಕರ್ನಾಟಕ ರಾಜ್ಯ ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಸಮಿತಿ ಹಾಗೂ ಮಿಲ್ಲತ್ ವೆಲ್ಫೇರ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ, ಮಿಲ್ಲತ್ ಶಾಲೆಯ ಅಪ್ನ ಘರ್ ಸಭಾಂಗಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರೀಕ್ಷಾ ಆತಂಕ ನಿರ್ವಹಣಾ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಶಿರೀನ್ ತಾಜ್ ಅವರು, ಪರೀಕ್ಷಾ ಆತಂಕವು ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾದರೂ ಪೂರ್ವಸಿದ್ಧತೆಯ ಕೊರತೆಯಿಂದ ನಕಾರಾತ್ಮಕ ಆಲೋಚನೆಗಳು, ಭಯ ಹಾಗೂ ಒತ್ತಡ ಹೆಚ್ಚಾಗುತ್ತವೆ ಎಂದು ಹೇಳಿದರು.
ಉತ್ತಮ ಯೋಜನೆ, ಸಮರ್ಪಕ ಅಭ್ಯಾಸ ಮತ್ತು ದೃಢ ಮನೋಬಲದಿಂದ ಆತಂಕವನ್ನು ಗೆಲ್ಲಬಹುದು ಎಂದರು. ಸಾಕಷ್ಟು ನಿದ್ರೆ, ಆರೋಗ್ಯಕರ ಆಹಾರ, ಪ್ರಾರ್ಥನೆ ಹಾಗೂ ಸಕಾರಾತ್ಮಕ ಮನೋಭಾವ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುತ್ತದೆ. ನನಗೆ ಏನೂ ನೆನಪಿಲ್ಲ ಕಡಿಮೆ ಅಂಕ ಬರುತ್ತದೆ ಎಂಬ ಚಿಂತನೆಗಳನ್ನು ದೂರವಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಸಲಹೆ ನೀಡಿದರು. ಪೋಷಕರು ಹಾಗೂ ಶಿಕ್ಷಕರ ಬೆಂಬಲವೂ ಅತ್ಯಗತ್ಯವೆಂದು ಹೇಳಿದರು.
ಪರೀಕ್ಷಾ ಆತಂಕ ನಿರ್ವಹಣೆಗೆ ಸಲಹೆಗಳು:
ನಕಾರಾತ್ಮಕತೆ ದೂರವಿಟ್ಟು ಆತ್ಮವಿಶ್ವಾಸ ಬೆಳೆಸಿಕೊಳ್ಳಿ
ಆರೋಗ್ಯದ ಕಡೆ ಗಮನ ಸಾಕಷ್ಟು ನಿದ್ರೆ, ಪೌಷ್ಟಿಕ ಆಹಾರ , ನಿರಂತರ ಓದಿನ ನಡುವೆ ಪ್ರಾರ್ಥನೆ , ಸಣ್ಣ ವಿರಾಮ, ಸಂಗೀತ, ಕುಟುಂಬದವರೊಂದಿಗೆ ಸಂವಾದ
ಸಕಾರಾತ್ಮಕ ದೃಷ್ಟಿಕೋನ ನಿಮ್ಮ ಸಿದ್ಧತೆಯ ಮೇಲೆ ನಂಬಿಕೆ.
ಜಿಲ್ಲಾ ಗೌರವಾಧ್ಯಕ್ಷ ಅಬ್ದುಲ್ ನವೀನ್ ಎ. ಅವರು ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವ ಸರಳ ಮಾರ್ಗಗಳನ್ನು ವಿವರಿಸಿದರು.
ಪ್ರಶ್ನೆಪತ್ರಿಕೆಯನ್ನು ಸೂಕ್ಷ್ಮವಾಗಿ ಓದಿ, ಉತ್ತರಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ ನಮೂದಿಸುವುದು, ವ್ಯಾಕರಣ ದೋಷವಿಲ್ಲದಂತೆ ಸ್ಪಷ್ಟ ಬರವಣಿಗೆ, ಅಂಕಗಳಿಗೆ ತಕ್ಕಂತೆ ಸಮಯ ಹಂಚಿಕೆ ಮಾಡಿ ನೇರ ಹಾಗೂ ಸರಳ ಉತ್ತರ ನೀಡುವುದು ಅಗತ್ಯ ಎಂದರು.
ಕವಿ ಲೇಖಕರ ಪರಿಚಯವನ್ನು ಟಿಪ್ಪಣಿ ರೂಪದಲ್ಲಿ ಬರೆಯುವುದು, ಕಂಠಪಾಠ ಪದ್ಯ ಪೂರ್ಣಗೊಳಿಸುವುದು, ಅಪಠಿತ ಗದ್ಯಭಾಗದ ಪ್ರಶ್ನೆಗಳಿಗೆ ಉತ್ತರಿಸುವುದು, ಗಾದೆಗಳ ಮಹತ್ವ ಬರೆಯುವುದು ಹಾಗೂ ಪತ್ರಲೇಖನದ ಎಲ್ಲ ಹಂತಗಳನ್ನು ಸರಿಯಾಗಿ ಪಾಲಿಸುವುದು ಅಂಕ ಹೆಚ್ಚಿಸಲು ಸಹಕಾರಿ ಎಂದು ತಿಳಿಸಿದರು.
ಒಂದು ಅಂಕದ ಪ್ರಶ್ನೆಗಳಿಗೆ ವಾಕ್ಯ ರೂಪದಲ್ಲಿ ಉತ್ತರಿಸಬೇಕು. ಅಲಂಕಾರ ಹಾಗೂ ಛಂದಸ್ಸು ಸಂಬಂಧಿತ ಪ್ರಶ್ನೆಗಳು ಹಳೆಯ ಪಠ್ಯಗಳಿಂದಲೂ ಬರಬಹುದಾದ್ದರಿಂದ ಅವುಗಳ ಮೇಲೂ ಗಮನ ಹರಿಸಲು ಸೂಚಿಸಿದರು.
ಪ್ರಬಂಧ ವಿಷಯಗಳು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಬರಬಹುದಾದ್ದರಿಂದ ದಿನಪತ್ರಿಕೆ ಓದುವ ಅಭ್ಯಾಸ ಉಪಯುಕ್ತ ಎಂದು ಹೇಳಿದರು. ಭಯಪಡುವ ಅಗತ್ಯವಿಲ್ಲ; ಧೈರ್ಯವಾಗಿ ಪರೀಕ್ಷೆ ಎದುರಿಸಿ ಎಂದು ಕರೆ ನೀಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಸೈಯದ್ ಅಸ್ಗರ್ ಅವರು ಉರ್ದು ವಿಷಯದಲ್ಲಿ ಹೆಚ್ಚು ಅಂಕ ಪಡೆಯಲು ಸರಿಯಾದ ಯೋಜನೆಯ ಅಗತ್ಯವಿದೆ ಎಂದು ತಿಳಿಸಿದರು. ಪ್ರತಿದಿನ ಪಾಠಪುಸ್ತಕ ಓದು, ಪ್ರಮುಖ ಪ್ರಶ್ನೋತ್ತರಗಳನ್ನು ಬರೆಯುವ ಅಭ್ಯಾಸ, ವ್ಯಾಕರಣ ಭಾಗದ ಮೇಲೆ ವಿಶೇಷ ಗಮನ, ಪದಾರ್ಥ ಹಾಗೂ ವಾಕ್ಯರಚನೆ ಸ್ಪಷ್ಟತೆ, ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಸಮಯ ನಿರ್ವಹಣೆ ಮುಖ್ಯ ಎಂದರು. ಸುಂದರ ಹಾಗೂ ಸ್ಪಷ್ಟ ಬರವಣಿಗೆ ಮತ್ತು ಸರಿಯಾದ ಉಲ್ಲೇಖಗಳು ಹೆಚ್ಚಿನ ಅಂಕಗಳಿಗೆ ಸಹಕಾರಿ ಎಂದು ಹೇಳಿದರು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಖಚಿತ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಎ. ಮುಜೀಬ್ ಖಾನ್ ಅವರು ಯಶಸ್ವಿ ಪರೀಕ್ಷಾ ಸೂತ್ರಗಳು ಹಾಗೂ ಗಣಿತ ವಿಷಯದ ತಂತ್ರಗಳನ್ನು ಹಂಚಿಕೊಂಡರು. ಸಂಘಟನಾ ಕಾರ್ಯದರ್ಶಿ ಶ್ರೀಮತಿ ರಿಹಾನ ಬಾನು ಅವರು ಇಂಗ್ಲಿಷ್ ಅಧ್ಯಯನ ವಿಧಾನಗಳ ಕುರಿತು ಮಾತನಾಡಿದರು. ಉಪಾಧ್ಯಕ್ಷ ನಯಾಜ್ ಅಹಮದ್ ಬೇಗ್ ಅವರು ವಿಜ್ಞಾನ ವಿಷಯದ ಸಿದ್ಧತೆಗೆ ಮಾರ್ಗದರ್ಶನ ನೀಡಿದರು.
ಇದೇ ವೇದಿಕೆಯಲ್ಲಿ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಹಿರಿಯರು, ಮಿಲ್ಲತ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷರು ಹಾಗೂ ಶೈಕ್ಷಣಿಕ ನಿರ್ದೇಶಕರು ಮತ್ತು ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮ ಸಮಿತಿಯ ಜಿಲ್ಲಾ ಸದಸ್ಯ ಶಫೀಕ್ ಅಹಮದ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೋಲಾರ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅಯಾಜ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎ. ಮುಜೀಬ್ ಖಾನ್, ಉಪಾಧ್ಯಕ್ಷರಾದ ಡಾ. ಸೈಯದ್ ಶಗುಪ್ತ ತಬ್ಬಸುಮ್ ಹಾಗೂ ನಯಾಜ್ ಅಹಮದ್ ಬೇಗ್, ಜಂಟಿ ಕಾರ್ಯದರ್ಶಿಗಳಾದ ಜಮೀಲ್ ಅಹಮದ್ ಮತ್ತು ಶ್ರೀಮತಿ ರಿಹಾನ ಬಾನು, ಸಲಹೆಗಾರರಾದ ಮಹಮದ್ ಪಿ ಹಾಗೂ ಮುಜಾಹಿದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮಾರ್ಗದರ್ಶನ ಪಡೆದು ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.


