

ಶ್ರೀನಿವಾಸಪುರ : ತಿಂಗಳಿಗೆ ಎರಡು ಬಾರಿ ಕುಂದುಕೊರತೆ ಸಭೆಗಳನ್ನು ಆಯೋಜಿಸಲಾಗುವುದು. ಒಂದನ್ನು ಪುರಸಭೆಗೆ ಸಂಬಂಧಿಸಿದಂತೆ ಹಾಗೂ ಮತ್ತೊಂದನ್ನು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ನಡೆದ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದ ಚಿಂತಾಮಣಿ ವೃತ್ತದಿಂದ ಮುಳಬಾಗಿಲು ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ₹5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿನ ರಾಜಕಾಲುವೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ವಶಪಡಿಸಿಕೊಂಡು ಅಭಿವೃದ್ಧಿಪಡಿಸಲು ಅಗತ್ಯ ಅನುದಾನವನ್ನು ಸರ್ಕಾರದಿಂದ ತರಲಾಗುವುದು.
ಜಿಲ್ಲಾಪಂಚಾಯಿತಿಯ ಮೈನರ್ ಇರಿಗೇಷನ್ ಇಲಾಖೆ ವತಿಯಿಂದ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿ ಶನಿವಾರ ನಡೆಯುವ ಸಂತೆ ಮೈದಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂಜಿನಿಯರ್ರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಸಂತೆ ದಿನಗಳಲ್ಲಿ ಟೆಂಪೋಗಳನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿ, ನಂತರ ಅದೇ ಸ್ಥಳದಲ್ಲಿ ನಿಲುಗಡೆ ಮಾಡಿಕೊಳ್ಳುವಂತೆ ಟೆಂಪೋ ಚಾಲಕರಿಗೆ ಸೂಚನೆ ನೀಡಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. ಸರ್ಕಾರದಿಂದ ಅನುದಾನವನ್ನು ತರಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.
ಸಭೆಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಮುಖಂಡರಾದ ಅಂಬೇಡ್ಕರ್ ಪಾಳ್ಯದ ರವಿ, ಕುಮ್ಮಗುಂಟೆ ಮನು, ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಪರಿಸರ ಅಭಿಯಂತರ ಲಕ್ಷ್ಮೀಶ್, ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

