

ಶ್ರೀನಿವಾಸಪುರ : ಮಾಜಿ ಶಾಸಕ ಕೆ.ಆರ್. ರಮೇಶ್ಕುಮಾರ್ ಅವರ ಅಭಿಮಾನಿಗಳ ಬಳಗದ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಹೊನಲು ಬೆಳಕಿನ ಅಂತರರಾಜ್ಯ ವಿಆರ್ಕೆ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿ ಫೆಬ್ರವರಿ 14ರ ಶನಿವಾರ ಸಂಜೆ 5 ಗಂಟೆಗೆ ಆರಂಭವಾಗಲಿದ್ದು, 15ರ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಿಂದ ತಂಡಗಳು ಭಾಗವಹಿಸಲಿವೆ.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಪಕ್ಷಾತೀತವಾಗಿ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಇಂತಹ ಕ್ರೀಡಾಕೂಟಗಳು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಕ್ರೀಡಾಸ್ಪೂರ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ. ಮಂಜುನಾಥ್ ಮಾತನಾಡಿ, ಕೆ.ಆರ್. ರಮೇಶ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಅಂತರರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹೊರರಾಜ್ಯಗಳಿಂದ ಆಟಗಾರರು ಆಗಮಿಸಲಿದ್ದು, ಕ್ರೀಡಾಭಿಮಾನಿಗಳು ಕುಟುಂಬ ಸಮೇತರಾಗಿ ಬಂದು ಪಂದ್ಯಗಳನ್ನು ವೀಕ್ಷಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭೂ ಮಂಜುನಾಥ್, ಸಮಿತಿ ಸದಸ್ಯ ನಾಗದೇನಹಳ್ಳಿ ಬಿ. ಸೀತಾರಾಮರೆಡ್ಡಿ, ಸೋಮಯಾಜಹಳ್ಳಿ ಮಂಜುನಾಥರೆಡ್ಡಿ, ಮದರಂಕಪಲ್ಲಿ ಪ್ರಶಾಂತ್, ತೂಪಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಕೃಷ್ಣಾರೆಡ್ಡಿ, ವೆಂಕಟರೆಡ್ಡಿ, ಮನೋಹರ್, ಪೆಟ್ರೋಲ್ಬಂಕ್ ಮಂಜುನಾಥರೆಡ್ಡಿ, ಜಿ.ವಿ. ನಾಗರಾಜರೆಡ್ಡಿ, ಶ್ಯಾಮಶಿವರಾಜ್, ನರಸಿಂಹಮೂರ್ತಿ, ವ್ಯಾಪಲಪಲ್ಲಿ ನರೇಶ್, ಸಂತೋಷ್, ಹರೀಶ್ರಾಜ್, ಸೋಮನಾಥಬಾಬು, ವಿಶ್ವನಾಥಗೌಡ, ರಾಮಕೃಷ್ಣಪ್ಪ, ನವಚೇತನರೆಡ್ಡಿ, ವೆಂಕಟಾದ್ರಿ ಉಪಸ್ಥಿತರಿದ್ದರು.

