

ಶ್ರೀನಿವಾಸಪುರ : ಓಂ ಶ್ರೀ ಮಂಜುನಾಥಾಯ ನಮಃ ಎಂಬ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗಾಗಿ ಹಮ್ಮಿಕೊಂಡಿರುವ ವಾತ್ಸಲ್ಯ ಕಾರ್ಯಕ್ರಮದಡಿ ಆಯ್ದ ಎಂಟು ಫಲಾನುಭವಿಗಳಿಗೆ ನಿತ್ಯ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ಗಳನ್ನು ವಿತರಿಸಲಾಯಿತು.
ಶ್ರೀನಿವಾಸಪುರ–2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ನಂಬಿಹಳ್ಳಿ ವಲಯದ ಇಂದಿರಾನಗರದ ಶಮ್ಶಾಶಾದ್ ಬೇಗಂ, ಕಸಬಾ ವಲಯದ ಚಿರುವನಹಳ್ಳಿಯ ನಾರೆಮ್ಮ, ತೇರನಹಳ್ಳಿಯ ಪ್ರದೀಪ್ ಹಾಗೂ ಅವರ ಪೋಷಕರು, ಅಣ್ಣೆಹಳ್ಳಿ ವಲಯದ ಪಾರೆಹೊಸಹಳ್ಳಿಯ ಚೌಡಮ್ಮ, ಹೊಳೂರು ವಲಯದ ರಾಮ್ಪುರದ ಭಾಗ್ಯಮ್ಮ, ಲಕ್ಷ್ಮಿಸಾಗರ ವಲಯದ ಚಿಂತಮಾಕನಹಳ್ಳಿಯ ಜಾಮ್ರುತ್ ಹುನ್ನಿಸಾ, ಯಲ್ದೂರು ವಲಯದ ಹೊಗಳಗೆರೆಯ ಅನಾಸುಯಮ್ಮ ಮತ್ತು ಸುದೀಪ್ ಅವರಿಗೆ ಪ್ರಸಾದ ರೂಪದಲ್ಲಿ ವಾತ್ಸಲ್ಯ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದು, ಫಲಾನುಭವಿಗಳಿಗೆ ಕಿಟ್ಗಳನ್ನು ಹಸ್ತಾಂತರಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಹಾಗೂ ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು. ಈ ಯೋಜನೆಯು ನಿರ್ಗತಿಕರ ಬದುಕಿಗೆ ಆಧಾರವಾಗಿ ನಿಲ್ಲುತ್ತಿದೆ ಎಂದು ಅವರು ತಿಳಿಸಿದರು.

