

ಶ್ರೀನಿವಾಸಪುರ: ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಅಪೂರ್ವ ಸೌಹಾರ್ದತೆಯ ದೃಶ್ಯ ಕಂಡುಬಂದಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಹಿಂದೂ ಬಾಂಧವರಿಗೆ ಮುಸ್ಲಿಂ ಸಮುದಾಯದ ಮೊಬೈಲ್ ರಿಪೇರಿ ಅಂಗಡಿಗಳ ಮಾಲೀಕರು ಮುಳಬಾಗಿಲು ವೃತ್ತದ ಬಳಿ ಸ್ವಯಂ ಪ್ರೇರಿತವಾಗಿ ನೀರು ಹಾಗೂ ಬಾಳೆಹಣ್ಣುಗಳನ್ನು ವಿತರಿಸಿ, ಪರಸ್ಪರ ಸಹಬಾಳ್ವೆ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ನೀಡಿದರು.
ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶೋಭಾಯಾತ್ರೆ ಸಾಗುವ ವೇಳೆ ಬಿಸಿಲಿನ ತೀವ್ರತೆಯಿಂದ ಶ್ರಮಿಸುತ್ತಿದ್ದ ಭಕ್ತರನ್ನು ಗಮನಿಸಿದ ಮುಸ್ಲಿಂ ವ್ಯಾಪಾರಿಗಳು ಮಾನವೀಯತೆ ಮತ್ತು ಸೌಹಾರ್ದತೆಯ ಮನೋಭಾವದಿಂದ ಮುಂದೆ ಬಂದು ನೀರು ಮತ್ತು ಹಣ್ಣುಗಳನ್ನು ವಿತರಿಸಿದರು.
ಮುಸ್ಲಿಂ ವ್ಯಾಪಾರಿಗಳ ಈ ಸೌಹಾರ್ದತೆಯ ನಡೆಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದರು. ಧರ್ಮಾತೀತವಾಗಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿದ ಈ ಘಟನೆ ಪಟ್ಟಣದಲ್ಲಿ ಶಾಂತಿ, ಏಕತೆ ಹಾಗೂ ಸಹಬಾಳ್ವೆಯ ಉತ್ತಮ ಉದಾಹರಣೆಯಾಗಿ ಮೂಡಿಬಂದಿದೆ.

