

ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿರುವ ಹೋಲ್ಸೇಲ್ ಮಾರಾಟ ಅಂಗಡಿ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 200 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟದ ಮೇಲೆ ನಿಷೇಧ ಜಾರಿಯಲ್ಲಿರುವ ಹಿನ್ನೆಲೆ, ಪುರಸಭೆ ಆರೋಗ್ಯ ನಿರೀಕ್ಷಕ ಟಿ.ವಿ. ಸುರೇಶ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ದಾಳಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸಹ ಭಾಗವಹಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಜಪ್ತಿ ಮಾಡಿದರು.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

