

ಬೆಂಗಳೂರು: ಶಾಲಾ ಹಾಗೂ ಕಾಲೇಜುಗಳಲ್ಲಿ ಪತ್ರಿಕೆಗಳ ಪ್ರಮುಖ ಸುದ್ದಿಗಳನ್ನು ವಿದ್ಯಾರ್ಥಿಗಳು ಓದುವುದು ಹಾಗೂ ಅವುಗಳನ್ನು ನೋಟೀಸ್ ಬೋರ್ಡ್ನಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಸರ್ಕಾರದಿಂದ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಎಚ್.ಬಿ. ಮದನಗೌಡ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಅವರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಈ ಭರವಸೆ ನೀಡಿದರು.
ಹಿಂದೆ ಶಾಲಾ–ಕಾಲೇಜುಗಳಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಇತ್ತು. ಅದನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದ್ದು, ಈ ಸಂಬಂಧ ಮುಖ್ಯಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಲಾಗುವುದು ಎಂದು ಪ್ರಭಾಕರ್ ಹೇಳಿದರು.
ಉತ್ತರ ಪ್ರದೇಶ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದಿಸುವುದು ಹಾಗೂ ನೋಟೀಸ್ ಬೋರ್ಡ್ನಲ್ಲಿ ಸುದ್ದಿಗಳನ್ನು ಅಂಟಿಸುವುದನ್ನು ಕಡ್ಡಾಯಗೊಳಿಸಿರುವ ಮಾದರಿಯಂತೆ ಕರ್ನಾಟಕದಲ್ಲಿಯೂ ಇದೇ ಕ್ರಮ ಜಾರಿಗೆ ತರಬೇಕು ಎಂದು ಕೆಯುಡಬ್ಲೂಜೆ ಈ ಹಿಂದೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಪಠ್ಯಪುಸ್ತಕಗಳೊಂದಿಗೆ ಪತ್ರಿಕೆಗಳ ವಿಷಯವನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನಾಸಕ್ತಿ ಹೆಚ್ಚಿಸಬಹುದು. ಈ ಕುರಿತು ತಜ್ಞರೊಂದಿಗೆ ಅಧ್ಯಯನ ನಡೆಸಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

