

ಶ್ರೀನಿವಾಸಪುರ: ರಕ್ಷಣಾವೇದಿಕೆ ಹಾಗೂ ಕೆಲ ರೈತ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಂಡರೆ ಪರಿಸ್ಥಿತಿ ಕೈಮೀರಲಿದೆ. ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಈ ಕುರಿತು ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಎಚ್ಚರಿಸಿದರು.
ಪಟ್ಟಣದ ಎಂ.ಜಿ. ರಸ್ತೆಯ ಮಾರ್ಕೆಟ್ ವೃತ್ತದಲ್ಲಿ ಶುಕ್ರವಾರ ಕಾಯಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಪ್ರತಿಭಟನೆಯ ವೇಳೆ ವ್ಯಾಪಾರ ವಹಿವಾಟು ನಿಲ್ಲಿಸುವಂತೆ ಕೆಲವರು ಒತ್ತಡ ಹೇರಿರುವುದು ಹಾಗೂ ಪುರಸಭೆ ಸಿಬ್ಬಂದಿಯಿಂದ ತಕ್ಕಡಿ ಮತ್ತು ಅರೇಕಾಯಿ ಮೂಟೆಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ವ್ಯಾಪಾರಸ್ಥರು ಸಲ್ಲಿಸಿದ ಅಹವಾಲನ್ನು ಆಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮಾತನಾಡಿದ ರಮೇಶ್ ಕುಮಾರ್, ಇಲ್ಲಿ ಯಾರೂ ದೊಡ್ಡ ಸಾಹುಕರರಲ್ಲ. ಎಲ್ಲರೂ ಬಡ ಕುಟುಂಬಗಳೇ. ದಿನನಿತ್ಯದ ಜೀವನ ನಿರ್ವಹಣೆಗೆ ಸ್ವಲ್ಪ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ರೈತರಿಗೆ ಸಹ ಲಾಭವಾಗುತ್ತದೆ. ಯಾವುದೇ ಕಾರಣಕ್ಕೂ ವ್ಯಾಪಾರಸ್ಥರ ತಕ್ಕಡಿ ಅಥವಾ ಅರೇಕಾಯಿ ಮೂಟೆಗಳನ್ನು ವಶಪಡಿಸಿಕೊಳ್ಳುವುದು ತಪ್ಪು, ಎಂದು ಸ್ಪಷ್ಟಪಡಿಸಿದರು.
ಒಂದೂವರೆ ತಿಂಗಳ ಹಿಂದೆ ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅರೇಕಾಯಿ ಋತುಮಾನ ಕೇವಲ ಒಂದೂವರೆ ತಿಂಗಳು ಮಾತ್ರ ಇರುತ್ತದೆ. ಈ ಅವಧಿಯಲ್ಲಿ ರೈತರು ಹಾಗೂ ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಆಗಬಾರದು ಎಂದು ಸೂಚಿಸಿದ್ದೇನೆ. ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್ಗೆ ತೊಂದರೆ ಆಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಎಂದರು.
ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯಾಪಾರಸ್ಥರಿಗೆ ಸಲಹೆ ನೀಡಿದ ಅವರು, ಟ್ರಾಫಿಕ್ ಸಮಸ್ಯೆ ಉಂಟಾದಲ್ಲಿ ಬುದ್ದಿವಾದ ಹೇಳಿ ಸಮಸ್ಯೆ ಬಗೆಹರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಯಾರಾದರೂ ಅಧಿಕಾರಿಗಳು ಅಥವಾ ಇತರರಿಂದ ತೊಂದರೆ ಎದುರಾದರೆ ನನಗೆ ದೂರವಾಣಿ ಮೂಲಕ ತಿಳಿಸಿದರೆ ೨೦ ನಿಮಿಷಗಳಲ್ಲಿ ನಿಮ್ಮ ಬಳಿ ಬರುತ್ತೇನೆ. ನಾನು ಬದುಕಿರುವವರೆಗೂ ಬಡಜನರಿಗೆ ತೊಂದರೆ ಆಗಲು ಬಿಡುವುದಿಲ್ಲ, ಎಂದು ಭರವಸೆ ನೀಡಿದರು.
ಉಪವಿಭಾಗಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ರೈತರು ಹಾಗೂ ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಎನ್. ಸುದೀಂದ್ರ, ಪೊಲೀಸ್ ಇನ್ಸ್ಪೆಕ್ಟರ್ ಶಂಕರಚಾರ್, ಪಿಎಸ್ಐ ಜಯರಾಮ್, ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ಕೆಎಂಎಫ್ ನಿರ್ದೇಶಕ ಕೆ.ಕೆ. ಮಂಜುನಾಥ್ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಹೆಚ್. ಅಕ್ಬರ್ ಶರೀಫ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭೆ ಮಾಜಿ ಅಧ್ಯಕ್ಷರಾದ ಬಿ.ಎಂ. ಪ್ರಕಾಶ್, ಬಿ.ಆರ್. ಭಾಸ್ಕರ್, ಮಾಜಿ ಸದಸ್ಯ ಮುನಿರಾಜು, ಟಿಎಂಬಿ ಮುಕ್ತಿಯಾರ್, ಹೇಮಂತ್ ಕುಮಾರ್, ನರಸಿಂಹಮೂರ್ತಿ, ಮುಖಂಡರಾದ ಸೀತಾರಾಮ ರೆಡ್ಡಿ, ಪಿ.ಆರ್. ಸೂರ್ಯನಾರಾಯಣ, ಸುರೇಶ್ ರೆಡ್ಡಿ, ದೊರೆಸ್ವಾಮಿ, ದಿಂಬಾಲ ಹರ್ಷ, ಕೆಂಪೇಗೌಡ, ಡಾ. ವೆಂಕಟೇಶ್ ಗೌಡ, ವಿಶ್ವನಾಥ್ ರೆಡ್ಡಿ ಸೇರಿದಂತೆ ವ್ಯಾಪಾರಸ್ಥರಾದ ಮುನಾವರ್, ಆರ್.ಕೆ. ಜಾವೀದ್, ಸೈಯದ್ ಫೈಜ್, ಅಕ್ರಮ್ ಪಾಷಾ, ಸರ್ದಾರ್, ಜಬೀವುಲ್ಲಾ, ಅಪೂರ್ ಬಾಲಾಜಿ, ಸಿಆರ್ಟಿ ವೆಂಕಟರಾಮರೆಡ್ಡಿ, ರಘು ಮತ್ತಿತರರು ಉಪಸ್ಥಿತರಿದ್ದರು.


