ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು – ಶಿಕ್ಷಕರ ಸಭೆ ಕಡ್ಡಾಯ : ಶಿಕ್ಷಣ ಇಲಾಖೆ ಕ್ರಮಕ್ಕೆ ಸ್ವಾಗತ – ಶಬ್ಬೀರ್ ಅಹ್ಮದ್


ಶ್ರೀನಿವಾಸಪುರ: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು–ಶಿಕ್ಷಕರ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶವನ್ನು ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮ ಸಮಿತಿಯ ಸದಸ್ಯ ಶಬ್ಬೀರ್ ಅಹ್ಮದ್ ಸ್ವಾಗತಿಸಿದ್ದಾರೆ.
ಈ ಕ್ರಮದಿಂದ ಶಾಲೆ, ಶಿಕ್ಷಕರು ಹಾಗೂ ಪೋಷಕರ ನಡುವೆ ಸಮನ್ವಯ ಮತ್ತಷ್ಟು ಬಲಪಡಲಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಕಳೆದ ನವೆಂಬರ್ನಲ್ಲಿ ಎಲ್ಲ ಶಾಲೆಗಳಲ್ಲಿ ಪೋಷಕರು–ಶಿಕ್ಷಕರ ಸಭೆ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಇದೀಗ ಅದೇ ಕ್ರಮವನ್ನು ಮುಂದುವರಿಸಿ, ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ.
ಅದರಂತೆ 2026ರ ಜನವರಿ 3 ಮತ್ತು ಫೆಬ್ರವರಿ 28ರಂದು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪೋಷಕರು–ಶಿಕ್ಷಕರ ಸಭೆಗಳನ್ನು ಆಯೋಜಿಸುವಂತೆ ನಿರ್ದೇಶನ ನೀಡಲಾಗಿದೆ.
ಪೋಷಕರು–ಶಿಕ್ಷಕರ ಸಭೆಗಳ ಆಯೋಜನೆ ಹಾಗೂ ಅನುಷ್ಠಾನ ಕುರಿತು ಶಾಲಾ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಆಯುಕ್ತ ಸುರಳರ್ ವಿಕಾಸ್ ಕಿಶೋರ್ ಅವರು ಎಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆಗಳು ಕೇವಲ ರೂಪಾಚಾರದ ಮಟ್ಟಕ್ಕೆ ಸೀಮಿತವಾಗದೆ ಫಲಪ್ರದವಾಗಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ.
ಸಭೆಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಹಾಜರಾತಿ, ಶಿಸ್ತು ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ.
ಜೊತೆಗೆ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಅಗತ್ಯವಿರುವ ನೆರವು ಮತ್ತು ಸುಧಾರಣಾ ಕ್ರಮಗಳ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸಲು ಅವಕಾಶ ದೊರೆಯಲಿದೆ.
ಶಾಲೆಗಳ ಮೂಲಸೌಕರ್ಯ, ಶಿಕ್ಷಕರ ಲಭ್ಯತೆ ಹಾಗೂ ಬೋಧನಾ ಪ್ರಕ್ರಿಯೆಗಳ ಕುರಿತು ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಈ ಸಭೆಗಳು ವೇದಿಕೆಯಾಗಲಿವೆ ಎಂದು ಇಲಾಖೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಬ್ಬೀರ್ ಅಹ್ಮದ್, ಪೋಷಕರು–ಶಿಕ್ಷಕರ ಸಭೆಗಳನ್ನು ನಿಯಮಿತವಾಗಿ ನಡೆಸುವುದರಿಂದ ಶಿಕ್ಷಕರು ಮತ್ತು ಪೋಷಕರ ನಡುವೆ ಪರಸ್ಪರ ವಿಶ್ವಾಸ ಹೆಚ್ಚುತ್ತದೆ. ಮಕ್ಕಳ ಶಿಕ್ಷಣದ ಹೊಣೆಗಾರಿಕೆಯನ್ನು ಶಾಲೆಯೊಂದಿಗೆ ಪೋಷಕರೂ ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತದೆ.
ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಪೋಷಕರು ಸಕ್ರಿಯ ಭಾಗವಹಿಸುವಿಕೆಯಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

