

ಶ್ರೀನಿವಾಸಪುರ : ಕಳೆದ ವರ್ಷ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರವು ಧಾವಿಸಿದ್ದು, ಎರಡು ಜಿಲ್ಲೆಗಳಿಗೆ ಒಟ್ಟು 40 ಕೋಟಿ 49 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ ಎಂದು ಮಾವು ಮಂಡಳಿ ಅಧ್ಯಕ್ಷ ಮುದ್ದುಗಂಗಾಧರ್ ಅವರು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡುಗಡೆಯಾದ ಈ ಅನುದಾನವನ್ನು ಈಗಾಗಲೇ ನಷ್ಟಕ್ಕೊಳಗಾದ ಮಾವು ರೈತರಿಗೆ ವಿತರಿಸಲಾಗಿದ್ದು, ಪ್ರತಿ ಕ್ವಿಂಟಾಲ್ ಮಾವಿಗೆ 440 ರೂ ರಂತೆ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಾವು ರೈತರ ಹಿತದೃಷ್ಟಿಯಿಂದ ಸರ್ಕಾರದ ಮುಂದಿನ ಕ್ರಮಗಳು ಕೈಗೊಳ್ಳುವ ಸಲುವಾಗಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಶೇಷವಾಗಿ ಶ್ರೀನಿವಾಸಪುರದಲ್ಲಿ ಮಾವಿಗೆ ವಿಶೇಷ ಮಾರುಕಟ್ಟೆ ಹಾಗೂ ಪಲ್ಪ್ ಫ್ಯಾಕ್ಟರಿ (ತಿರುಳು ತಯಾರಿಕಾ ಘಟಕ) ತರಲು ಶ್ರಮಿಸುವುದಾಗಿ ಭರವಸೆ ನೀಡಿದರು.
ತಮ್ಮ ರಾಜಕೀಯ ನೇಮಕಾತಿಗಳ ಕುರಿತು ಮಾಹಿತಿ ನೀಡಿದ ಮುದ್ದುಗಂಗಾಧರ್ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಶೀರ್ವಾದದಿಂದ ತಮಗೆ ಮಾವು ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ಕೆಪಿಸಿಸಿ ಕಾರ್ಯದರ್ಶಿ ಸ್ಥಾನ ಲಭಿಸಿದೆ ಎಂದು ತಿಳಿಸಿದರು. ಅಲ್ಲದೆ, ಮುಂಬರುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ವೀಕ್ಷಕರಾಗಿ (ಅಬ್ಸರ್ವರ್) ಶ್ರೀನಿವಾಸಪುರ ಕ್ಷೇತ್ರಕ್ಕೆ ತಮ್ಮನ್ನು ನೇಮಿಸಲಾಗಿದೆ ಎಂದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಪದವೀಧರರಿದ್ದರೂ, ಹಲವರು ಇನ್ನೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂದು ಅವರು ವಿμÁದ ವ್ಯಕ್ತಪಡಿಸಿದರು. “ಉತ್ತಮ ಸಮಾಜ ನಿರ್ಮಾಣ ಮಾಡಲು ಉತ್ತಮ ಅಭ್ಯರ್ಥಿಗಳ ಆಯ್ಕೆ ಅತ್ಯಗತ್ಯವಾಗಿದೆ,” ಎಂದು ಒತ್ತಿಹೇಳಿದ ಅವರು, ಎಲ್ಲಾ ಪದವೀಧರರು ಕೂಡಲೇ ನೋಂದಣಿ ಮಾಡಿಸಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಪಕ್ಷದ ಮುಖಂಡರು ಕೂಡ ಈ ನೋಂದಣಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಸಹಕರಿಸಬೇಕು ಎಂದು ಅವರು ಆಗ್ರಹಿಸಿದರು.
ಕೆಪಿಸಿಸಿ ಸದಸ್ಯ ಸಂಜಯ್ರೆಡ್ಡಿ, ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ನಾಗದೇನಹಳ್ಳಿ ಸೀತರಾಮರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ಶರೀಫ್ ಹಾಗು ಕಾಂಗ್ರೆಸ್ಪಕ್ಷದ ಮುಖಂಡರು ಇದ್ದರು.

