

ಶ್ರೀನಿವಾಸಪುರ: ಸಾರ್ವಜನಿಕರು ಹಲ್ಲಿನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅದಕ್ಕೆ ಪೂರಕವಾಗಿ ಅಗತ್ಯವೆನಿಸಿದರೆ ದಂತ ವೈದ್ಯರ ಸಲಹೆ ಪಡೆಯಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಹೊಸ ಪುರಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ರಾಜೇಶ್ ಡೆಂಟಲ್ ಅಂಡ್ ಇಂಪ್ಲ್ಯಾಂಟ್ ಕೇರ್ ದಂತ ಚಿಕಿತ್ಸಾಲಯದ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ನಾಗರಿಕರ ಸೇವೆಗೆ ನೂತನ ದಂತ ಚಿಕಿತ್ಸಾಲಯ ಪ್ರಾರಂಭಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಕಂಡುಬರುತ್ತಿಲ್ಲ. ಹಾಗಾಗಿ ಹಲ್ಲಿನ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತಿದೆ. ದಂತ ಸಮಸ್ಯೆ ಇರುವವರು ಈ ಚಿಕಿತ್ಸಾಲಯದ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಚಿಕಿತ್ಸಾಲಯದ ದಂತ ವೈದ್ಯ ಡಾ.ರಾಜೇಶ್ರೆಡ್ಡಿ ಎನ್.ಮಾತನಾಡಿ, ಹಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ವೃತ್ತಿಪರತೆ ಜತೆಗೆ, ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದು ಚಿಕಿತ್ಸಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಆಧಿಕಾರಿ ವಿ.ನಾಗರಾಜ್,ಮುಖಂಡರಾದ ಪೂಲ ಶಿವಾರೆಡ್ಡಿ, ಸಮಾಜ ಸೇವಕ ಪಾಳ್ಯ ಗೋಪಾಲರೆಡ್ಡಿ, ಟಿ.ಎಸ್.ಮಂಜುನಾಥರೆಡ್ಡಿ, ಪುರಸಭೆಯ ಮಾಜಿ ಸದಸ್ಯೆ ಯಶೋದಮ್ಮ, ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಚೌಡರೆಡ್ಡಿ ಮತ್ತಿತರರು ಇದ್ದರು.

