

ಹಂಗಾರಕಟ್ಟೆ ; ಕಥೆ ಕವನಗಳು ಮೌಖಿಕ ಸಂಸ್ಕøತಿಯ ಅಡಿಪಾಯವಾಗಿದ್ದು ಇಂದಿನ ಈ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಸರಿ ತಪ್ಪುಗಳ ಮೌಲ್ಯಗಳನ್ನು ಗುರುತಿಸಲು ಸಾಧ್ಯವಿದೆ, ಅಲ್ಲದೇ ಮೌಖಿಕ ಪರಂಪರೆಯ ಜ್ಞಾನ ಮತ್ತು ವಿವೇಕವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸುಲಭ ಮತ್ತು ಪರಿಣಾಮಕಾರಿ ಸಾಧನವೇ ಕಥೆ ಹೇಳುವುದು ಎಂದು ರೋ| ಪಿ. ರಾಘವೇಂದ್ರ ಭಟ್ ಅಧ್ಯಕ್ಷರು ರೋಟರಿ ಉಡುಪಿ ಮಿಡ್ಟೌನ್ ಇವರು ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ರೋಟರಿ ಉಡುಪಿ ಮಿಡ್ಟೌನ್, ಸರಕಾರಿ ಪ್ರೌಢಶಾಲೆ ಉಪ್ಪೂರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಥೆ ಕವನ ರಚನಾ ಕಾರ್ಯಾಗಾರ 2025 ಉದ್ಘಾಟಿಸಿ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ನಿಧಾನವಾಗಿ ಆದರೂ ಆಳವಾದ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಕರಾದ ಗ್ರೆಗರಿ ಡಿಸಿಲ್ವ ಜಾತಾಬೆಟ್ಟು, ಉಪ್ಪೂರು ಮಾತನಾಡಿ ಪ್ರತಿ ಮಗುವಿನಲ್ಲೂ ಉತ್ತಮ ಆಲೋಚನೆ ಇದ್ದೇ ಇರುತ್ತದೆ. ಅದನ್ನು ಬರಹ ರೂಪದಲ್ಲಿ ಅಭಿವ್ಯಕ್ತಗೊಳಿಸಿದಾಗ ಕಥೆ ಅಥವಾ ಕವನ ರೀತಿಯಲ್ಲಿ ಸಾಹಿತ್ಯಿಕ ಪ್ರಕಾರವಾಗಿ ಹೊರಹೊಮ್ಮುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಅವರು ಆರಿಸಿಕೊಳ್ಳುವ ವಸ್ತು ಅಥವಾ ಗ್ರಹಿಕೆಯ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೇ ಭಾವನೆಯನ್ನು ಹೊರಹಾಕುವ ಹೊಸ ತಂತ್ರಗಾರಿಕೆಯೇ ಕಥೆ ಕವನಗಳು ಎಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿ ರೋ| ಎಚ್. ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ, ರೋಟರಿ ಉಡುಪಿ ಮಿಡ್ಟೌನ್ ಮಾತನಾಡಿ ಕಥೆ ಎಲ್ಲರನ್ನೂ ಪಾಲ್ಗೊಳಿಸುವ ಒಂದು ಸೃಜನಾತ್ಮಕ ಪ್ರಕ್ರಿಯೆ. ಭಾರತದ ಎಲ್ಲಾ ಪ್ರದರ್ಶನ ಪ್ರಕಾರಗಳು ಕಥೆ ಹೇಳುವುದರ ವಿಸ್ತರಣೆಯಾಗಿದೆ. ಅಂದರೆ ನಾಟಕ, ಯಕ್ಷಗಾನ, ಜನಪದ, ಸಿನೆಮಾ ಎಲ್ಲವೂ ಕಥೆ ಹೇಳುವುದರ ವಿಸ್ತರಣೆಯಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾರದಾ ಅಂಪಾರು ಮತ್ತು ಶ್ರೀಮತಿ ಶೋಭಾ ಹರಿಪ್ರಸಾದ್ ಉಡುಪಿ, ಮಕ್ಕಳನ್ನು 2 ಗುಂಪುಗಳಾಗಿ ವಿಂಗಡಿಸಿ, ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಪ್ರಜ್ಞೆ ಬೆಳೆಸಿದಾಗ ಅವರಲ್ಲಿ ಆಸಕ್ತಿ ಮೂಡಿ, ಬರೆಯಲು ಪ್ರೇರೆಪಿಸುತ್ತದೆ ಎಂದು ತಿಳಿಸಿದರು. ತದನಂತರ ಅವರುಗಳು ರಚಿಸಿದ ಕವನವನ್ನು ವಾಚಿಸಿದರು ಮತ್ತು ಬೇರೆ ಬೇರೆ ಆಯ್ಕೆಯ ವಸ್ತುಗಳನ್ನು ನೀಡಿ ಕಥೆ ರಚನೆ ಮಾಡಲು ಪ್ರೇರೆಪಿಸಿದರು. ಸುಮಾರು 40ಕ್ಕೂ ಹೆಚ್ಚು ಕಥೆ, 45ಕ್ಕೂ ಹೆಚ್ಚು ಕವನವನ್ನು ವಿದ್ಯಾರ್ಥಿಗಳು ರಚಿಸಿದರು.
ಸಭಾಧ್ಯಕ್ಷತೆಯನ್ನು ರತ್ನಾಕರ ಮೊಗವೀರ ಅಧ್ಯಕ್ಷರು, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇವರು ಮಾತನಾಡಿ ಇದು ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರೋ| ರಾಮದೇವ ಕಾರಂತ್, ಕೋಶಾಧಿಕಾರಿ, ರೋಟರಿ ಉಡುಪಿ ಮಿಡ್ಟೌನ್, ರಮೇಶ್ ವಕ್ವಾಡಿ ಕಾರ್ಯದರ್ಶಿ, ಅಭಿವೃದ್ಧಿ ಸಂಸ್ಥೆ (ರಿ), ಬಾಳ್ಕುದ್ರು ಹಂಗಾರಕಟ್ಟೆ, ಸಂಧ್ಯಾ ಸರಸ್ವತಿ ಶಾಲಾ ಮುಖ್ಯ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಉಪ್ಪೂರು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶಾರದಾ ಅಂಪಾರು ಹಾಗೂ ಶ್ರೀಮತಿ ಶೋಭಾ ಹರಿಪ್ರಸಾದ್ ಉಡುಪಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ದಿವ್ಯ ಉಡುಪಿ ನಿರೂಪಿಸಿ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಸರಸ್ವತಿ ಸ್ವಾಗತಿಸಿದರು. ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ ವಂದಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

