ಲೇಖನ – ಫೋಟೊ ಃ ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಇಂದಿನ ವೇಗಭರಿತ ಯುಗದಲ್ಲಿ ಮಕ್ಕಳ ಬಾಲ್ಯ ಮೊಬೈಲ್ ಪರದೆಯೊಳಗೆ ಸೀಮಿತವಾಗುತ್ತಿರುವುದು ಸಮಾಜದ ಅತ್ಯಂತ ಚಿಂತಾಜನಕ ಬೆಳವಣಿಗೆಗಳಲ್ಲಿ ಒಂದಾಗಿದೆ.
ಮಕ್ಕಳು ದೇವರ ಕೊಡುಗೆ ಎಂದು ಹೇಳುವ ನಾವು, ಆ ದೇವರ ಕೊಡುಗೆಯನ್ನು ತಂತ್ರಜ್ಞಾನಕ್ಕೆ ಒಪ್ಪಿಸಿ ಬಿಡುತ್ತಿರುವುದು ಕೇವಲ ಪೋಷಕರ ತಪ್ಪಲ್ಲ, ಸಮಾಜದ ಸಂವೇದನೆಯ ಹೀನತೆಗೂ ಸಂಕೇತವಾಗಿದೆ.
ಮಕ್ಕಳಿಗೆ ಟ್ಯಾಬ್ ಅಥವಾ ಟಿವಿಯ ಮನರಂಜನೆಗಿಂತ ಪೋಷಕರ ಪ್ರೀತಿ, ಸ್ನೇಹ ಮತ್ತು ಸಹವಾಸವೇ ನಿಜವಾದ ಪಾಠಶಾಲೆ. ಬಾಲ್ಯದಲ್ಲಿ ಬಿತ್ತಿದ ಮೌಲ್ಯಗಳ ಬೀಜಗಳು ಅವರ ಪೂರ್ಣ ಜೀವನವನ್ನು ರೂಪಿಸುತ್ತವೆ. ಆದ್ದರಿಂದ, ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಸಮಯ ನೀಡಿ ಎಂಬ ಸಂದೇಶವು ಕೇವಲ ಮಾತಲ್ಲ ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಕಾಳಜಿ.
ಮೌಲ್ಯಾಧಾರಿತ ಶಿಕ್ಷಣದ ಅಗತ್ಯ
ಇಂದಿನ ಶಿಕ್ಷಣ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದರೂ, ಅದರ ಜೊತೆಗೆ ಮೌಲ್ಯಶಿಕ್ಷಣದ ಕೊರತೆ ಹೆಚ್ಚಾಗಿದೆ. ಮಕ್ಕಳಿಗೆ ಅಂಕಗಳು ಮುಖ್ಯವಾದರೂ, ಅವರ ಜೀವನದ ನಿಜವಾದ ಯಶಸ್ಸು ನೈತಿಕತೆ ಮತ್ತು ಮಾನವೀಯತೆಯಲ್ಲಿ ಅಡಕವಾಗಿದೆ.
ಮನೆತನದಲ್ಲೇ ಸತ್ಯ ಹೇಳು, ದಯೆ ತೋರಿಸು, ಬಡವರ ಸಹಾಯಮಾಡು, ಎಲ್ಲರಿಗೂ ಗೌರವ ತೋರು ಎಂಬ ಮಾತುಗಳು ದಿನನಿತ್ಯದ ಪಾಠಗಳಾಗಬೇಕು. ಪೋಷಕರು ತಮ್ಮ ನಡವಳಿಕೆಯಿಂದಲೇ ಮಕ್ಕಳಿಗೆ ಪಾಠ ಕಲಿಸುತ್ತಾರೆ. ಮಾತಿಗಿಂತ ವರ್ತನೆಯೇ ದೊಡ್ಡ ಪಾಠಪುಸ್ತಕ ಮನೆಯ ವಾತಾವರಣವೇ ಮಗುವಿನ ಮೊದಲ ಗುರುಕುಲ.
ತಂತ್ರಜ್ಞಾನ ಮತ್ತು ಒಂಟಿತನದ ಬಲೆಗೆ ಸಿಕ್ಕ ಬಾಲ್ಯ
ಮೊಬೈಲ್ ಮತ್ತು ಸ್ಮಾರ್ಟ್ಫೋನ್ನ ವ್ಯಸನವು ಮಕ್ಕಳಲ್ಲಿ ಒಂಟಿತನ, ಕೋಪ, ಅಸಹನೆ, ನಿದ್ರಾಹೀನತೆ, ಗಮನದ ಕೊರತೆ ಮೊದಲಾದ ನೂರಾರು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.
ಪೋಷಕರು ಕೆಲಸದ ಒತ್ತಡದಿಂದ ಮಕ್ಕಳಿಗೆ ಸಮಯ ನೀಡದೆ ಮೊಬೈಲ್ ನೀಡುವುದು ಸುಲಭ ಪರಿಹಾರವಾದರೂ, ಅದು ದೀರ್ಘಾವಧಿಯಲ್ಲಿ ಅವರ ಸಂವೇದನೆ, ಸೃಜನಶೀಲತೆ ಮತ್ತು ಸಾಮಾಜಿಕ ನೈಪುಣ್ಯಗಳನ್ನು ಹಾಳುಮಾಡುತ್ತದೆ.
ಮಕ್ಕಳಿಗೆ ಬೇಕಾಗಿರುವುದು ದುಬಾರಿ ಸಾಧನಗಳಲ್ಲ ಆತ್ಮೀಯ ಸಂಭಾಷಣೆ, ಕಥೆ ಕೇಳುವ ಕಿವಿ, ಪ್ರೋತ್ಸಾಹದ ನಗು ಮತ್ತು ಭರವಸೆ ತುಂಬಿದ ಅಪ್ಪುಗೆ.
ಸಂಸ್ಕಾರದ ಬೀಜ ಮನೆತನದಲ್ಲೇ ಬಿತ್ತಲ್ಪಡುತ್ತದೆ
ಇಸ್ಲಾಮಿಕ್ ದೀನ್ ಆಗಲಿ, ಹಿಂದೂ ಸಂಸ್ಕೃತಿ ಆಗಲಿ ಎರಡೂ ಸತ್ಯ, ಸಹನೆ ಮತ್ತು ಪರಸ್ಪರ ಗೌರವ ಎಂಬ ಮೌಲ್ಯಗಳ ಮಹತ್ವವನ್ನು ಬೋಧಿಸುತ್ತವೆ.
ಈ ಪಾಠಗಳು ಶಾಲೆಯ ಪಾಠಪುಸ್ತಕಗಳಲ್ಲಿ ಅಲ್ಲ, ಮನೆಯ ಅಂಗಳದಲ್ಲಿ ಬಿತ್ತಲ್ಪಡುತ್ತವೆ. ಪೋಷಕರ ಜೀವನಶೈಲಿ, ಮಾತಿನ ಧಾಟಿ, ಕೋಪದ ಸಂದರ್ಭಗಳಲ್ಲಿ ತೋರಿಸುವ ಶಾಂತಿ ಇವೆಲ್ಲವೂ ಮಕ್ಕಳಿಗೆ ಮಾದರಿಯ ಪಾಠ.
ಮಕ್ಕಳಿಗೆ ನಾವು ಹೇಳುವುದಕ್ಕಿಂತ ನಾವು ಹೇಗೆ ಬದುಕುತ್ತೇವೆ ಎಂಬುದೇ ಅವರ ಶಿಕ್ಷಣದ ನಿಜವಾದ ಮೂಲ.
ನೈತಿಕ ಬಿಕ್ಕಟ್ಟಿನ ನಡುವೆ ಪೋಷಕರ ಪಾತ್ರ
ಸಾಮಾಜಿಕ ಮಾಧ್ಯಮ, ಚಿತ್ರರಂಗ ಮತ್ತು ವ್ಯಾಪಾರಿಕ ಪ್ರಚಾರಗಳ ಅತಿಯಾದ ಪ್ರಭಾವದಿಂದ ಇಂದಿನ ಮಕ್ಕಳು ಶೀಘ್ರ ಪ್ರೇರಿತರಾಗುತ್ತಿದ್ದಾರೆ. ಈ ನೈತಿಕ ಬಿಕ್ಕಟ್ಟಿನ ಸಮಯದಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಧಾರ್ಮಿಕತೆ, ಶಿಸ್ತಿನ ಜೀವನ, ಸಹನೆ ಮತ್ತು ಮಾನವೀಯತೆಯ ಪಾಠ ನೀಡುವ ಜವಾಬ್ದಾರಿಯನ್ನು ಗಂಭೀರವಾಗಿ ತಾಳಬೇಕು.
ಮಕ್ಕಳಿಗೆ ಧರ್ಮದ ಮೂಲಪಾಠಗಳು ಪ್ರಾರ್ಥನೆ, ಕೃತಜ್ಞತೆ, ಪ್ರಾಮಾಣಿಕತೆ, ಶಾಂತಿ ಮತ್ತು ಪರಸ್ಪರ ಗೌರವ ಇವುಗಳನ್ನು ಕಿರಿಯ ವಯಸ್ಸಿನಲ್ಲೇ ಬೋಧಿಸುವುದು ಅವರ ಜೀವನದ ಪಾಯ್ದಾರಿಯಾಗುತ್ತದೆ.
ಮಮತೆಯ ಸಮಯವೇ ನಿಜವಾದ ಉಡುಗೊರೆ
ಪೋಷಕರು ಮಕ್ಕಳಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ಮೊಬೈಲ್ ಅಥವಾ ಆಟಿಕೆ ಅಲ್ಲ ಅದು ಪ್ರೀತಿಯ ಸಮಯ ಮತ್ತು ಮಾರ್ಗದರ್ಶನ.
ದಿನದ ಕೆಲವೇ ನಿಮಿಷಗಳು ಮಗುವಿನ ಜೀವನದ ದಿಕ್ಕನ್ನು ಬದಲಾಯಿಸಬಲ್ಲವು.
ಮಕ್ಕಳ ಹೃದಯದಲ್ಲಿ ಧರ್ಮ, ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಬೆಳಕು ಬೆಳಗಿಸಲು ಮನೆಯಲ್ಲಿ ಪ್ರೀತಿಯ ವಾತಾವರಣ ನಿರ್ಮಿಸುವುದು ಕಾಲದ ಅತ್ಯಂತ ತುರ್ತು ಅಗತ್ಯವಾಗಿದೆ.
ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಅವರಿಗೆ ಮೌಲ್ಯ ನೀಡೋಣ ಅದು ಅವರ ಬದುಕಿನ ಅತ್ಯುತ್ತಮ ಶಕ್ತಿ ಮತ್ತು ನಮ್ಮ ಸಮಾಜದ ನಿಜವಾದ ಹೂಡಿಕೆ.



