

ಕೋಲಾರ:- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ೨2025-28ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಚುನಾವಣೆ ನ.9 ರಂದು ನಿಗಧಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಅ.27 ಕೊನೆ ದಿನವಾಗಿದೆ ಎಂದು ಚುನಾವಣಾಧಿಕಾರಿ ಪಾ.ಶ್ರೀ.ಅನಂತರಾಮ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಚುನಾವಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕರಡು ಮತದಾರರಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅ.16 ಕೊನೆ ದಿನವಾಗಿದ್ದು, ಅ.,18 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಹಾಗೂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅ.19 ರಂದು ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ನಾಮಪತ್ರ ಸಲ್ಲಿಕೆಗೆ ಅ.27 ಕೊನೆ ದಿನಾಂಕವಾಗಿದ್ದು, ಅ.28 ರಂದು ನಾಮಪತ್ರಗಳ ಪರಿಶೀಲನೆ, ಅ.30ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆ ದಿನಾಂಕವಾಗಿದೆ ಮತ್ತು ಅಗತ್ಯವಾದಲ್ಲಿ ಮತದಾನ ನ.9ರ ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೂ ನಡೆಯಲಿದ್ದು, 3-30ರ ನಂತರ ಮತೆಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಏಕಕಾಲದಲ್ಲೇ ರಾಜ್ಯ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರ ಚುನವಣೆ ಜತೆಯಲ್ಲೇ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ ಅವರು, ಒಂದು ಅಧ್ಯಕ್ಷರ ಹುದ್ದೆ(ಕೇಂದ್ರಸ್ಥಾನ), ಉಪಾಧ್ಯಕ್ಷರ ಮೂರು ಹುದ್ದೆ, ಪ್ರಧಾನ ಕಾರ್ಯದರ್ಶಿ ಒಂದು ಹುದ್ದೆ ಕೇಂದ್ರಸ್ಥಾನ, ಕಾರ್ಯದರ್ಶಿಗಳ ೩ ಹುದ್ದೆ, ಖಜಾಂಚಿ ಒಂದು ಹುದ್ದೆ ಕೇಂದ್ರಸ್ಥಾನ, ಜಿಲ್ಲಾ ಕಾರ್ಯಕಾರಿಣಿಗೆ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದರು.
ಒಬ್ಬ ಅಭ್ಯರ್ಥಿ ಪದಾಧಿಕಾರಿ ಹುದ್ದೆ ಅಥವಾ ಕಾರ್ಯಕಾರಿ ಸಮಿತಿ ಸದಸ್ಯತ್ವ ಎರಡರಲ್ಲಿ ಒಂದಕ್ಕೆ ಮಾತ್ರ ಸ್ಪರ್ಧಿಸಬಹುದು, ಒಂದು ಹುದ್ದೆಯಲ್ಲಿ ಮಾತ್ರ ಸ್ಪರ್ಧೆಯಲ್ಲಿ ಉಳಿಯಲು ಅವಕಾಶವಿದೆ ಎಂದರು.
ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕಕ್ಕೆ ಸ್ಪರ್ಧಿಸುವವರು ಯಾವುದಾದರೂ ಒಂದೇ ಕಡೆ ಸ್ಪರ್ಧೆಯಲ್ಲಿರಬೇಕು, ಜಿಲ್ಲೆ, ರಾಜ್ಯ ಸಂಘಕ್ಕೆ ಏಕಕಾಲದಲ್ಲಿ ಎರಡೂ ಕಡೆ ಒಬ್ಬ ವ್ಯಕ್ತಿ ಸ್ಪರ್ಧಿಸುವಂತಿಲ್ಲ ಎಂದರು.
ಪ್ರತಿಯೊಂದು ನಾಮಪತ್ರವೂ ಸಂಘದ ಓರ್ವ ಅರ್ಹ ಸದಸ್ಯರಿಂದ ಸೂಚನೆ ಹಾಗೂ ಒಬ್ಬ ಅರ್ಹ ಸದಸ್ಯರಿಂದ ಅನುಮೋದನೆ ಪಡೆದಿರುವುದು ಅಗತ್ಯ, ಒಂದೇ ಹುದ್ದೆಯ ಸ್ಪರ್ಧಾ ಅಭ್ಯಥಿಗಳಿಗೆ ಅದೇ ಸೂಚಕರು, ಅನುಮೋದಕರು ಸಹಿ ಹಾಕುವಂತಿಲ್ಲ ಎಂದರು.
ಚುನಾವಣೆಗೆ ಸ್ಪರ್ಧಿಸುವವರು ಯಾವುದೇ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವ, ಪದಾಧಿಕಾರಿಯಾಗಿದ್ದಲ್ಲಿ, ನೋಂದಾಯಿತ ಗುತ್ತಿಗೆದಾರಾಗಿದ್ದಲ್ಲಿ, ಪೂರ್ಣ ಪ್ರಮಾಣದ ವಕೀಲ ವೃತ್ತಿ ಮಾಡುತ್ತಿರುವವರು, ವಕೀಲರ ಸಂಘ, ಪರಿಷತ್ಗಳಲ್ಲಿ ಪದಾಧಿಕಾರಿಗಳಾಗಿದ್ದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಸ್ಪರ್ಧೆಗೆ ಕನಿಷ್ಟ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ, ಪತ್ರಕರ್ತರ ಸಂಘದ ಗೌರವ, ಘನತೆಗೆ ತದ್ವಿರುದ್ದವಾಗಿ ನಡೆದುಕೊಳ್ಳುವ ಪರ್ಯಾಯ ಸಂಘಟನೆಗಳಲ್ಲಿ ಗುರುತಿಸಿಕೊಂಡವರೂ ಸ್ಪರ್ಧಿಸಲು ಅವಕಾಶವಿಲ್ಲ ಎಂದರು.
ಸ್ಪರ್ಧೆ ಬಯಸುವ ಅಭ್ಯರ್ಥಿಗಗಳು ಚುನಾವಣೆ ನಡೆಸುವ ಅಂದರೆ ಮತದಾರರ ಪಟ್ಟಿಯಲ್ಲಿ ಒಳಗೊಂಡಂತೆ ಸಂಘದಲ್ಲಿ ನಿರಂತರವಾಗಿ 2022-23ರಿಂದ ಈವರೆಗೂ 4 ವರ್ಷ ಸದಸ್ಯತ್ವ ಹೊಂದಿರಬೇಕು,
ಮತದಾನದ ಹಕ್ಕು ಹೊಂದಲು 2024-25 ಮತ್ತು 2025-26ನೇ ಸಾಲಿನಲ್ಲಿ ಸದಸ್ಯತ್ವ ಹೊಂದಿದ್ದರೆ ಸಾಕು. ರಾಜ್ಯ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುವವರು ಒಮ್ಮೆಯಾದರೂ ರಾಜ್ಯ ಕಾರ್ಯಕಾರಿ ಸಮಿತಿ ಚುನಾಯಿತ ಸದಸ್ಯರಾಗಿ ಒಂದು ಅವಧಿ ಪೂರೈಸಿರಬೇಕು ಎಂದರು.
ಜಿಲ್ಲಾ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುವವರು ಒಮ್ಮೆಯಾದರೂ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾಯಿತ ಸದಸ್ಯರಾಗಿ ಒಂದು ಅವಧಿ ಪೂರೈಸಿರಲೇಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಲಯದ ಶಿಕ್ಷೆಗೆ ಒಳಗಾಗಿದ್ದರೆ ಸ್ಪರ್ಧೆಗೆ ಅವಕಾಶವಿಲ್ಲ ಎಂದು ತಿಳಿಸಿದರು.

