

ಕುಂದಾಪುರ; ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಅಭಿವೃದ್ಧಿ ಸಮಿತಿ ವತಿಯಿಂದ “ಕಾರ್ಯಕ್ಷೇತ್ರದಲ್ಲಿ ಒತ್ತಡ ನಿವಾರಣೆ ಮತ್ತು ಕೆಲಸ-ಜೀವನ ಸಮತೋಲನ” ಎಂಬ ವಿಷಯದ ಮೇಲೆ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು
ಕಾಲೇಜು ಆವರಣದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮವು ಸಿಬ್ಬಂದಿಗಳು ಉದ್ಯೋಗ ಸಂಬಂಧಿತ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ, ವೈಯಕ್ತಿಕ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಸಾಧಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿತ್ತು.
ಕಾರ್ಯಕ್ರಮಕ್ಕೆ ಉಡುಪಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀಮತಿ ಸೌಜನ್ಯ ಶೆಟ್ಟಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್, ಉಪಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ. ಎಸ್., ಐಎಂಜೆ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮೂಡಲಕಟ್ಟೆ ಕಾಲೇಜ್ ಆಫ್ ಫಿಸಿಯೋಥೆರಪಿ ಡೀನ್ ಡಾ. ಪ್ರೊ. ಪದ್ಮಚರಣ ಸ್ವೈನ್ ಹಾಗೂ ಬೋಧಕ ಹಾಗೂ ಅಭೋಧಕೇತರ ಸಿಬ್ಬಂದಿ ಹಾಜರಿದ್ದರು.
ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಅವರು ಉದ್ಯೋಗ ಸ್ಥಳದಲ್ಲಿ ಒತ್ತಡವನ್ನು ಕಡಿಮೆ ಮಾಡುವ ಪ್ರಾಯೋಗಿಕ ವಿಧಾನಗಳು ಮತ್ತು ಕೆಲಸ-ಜೀವನ ಸಮತೋಲನ ಸಾಧಿಸುವ ತಂತ್ರಗಳನ್ನು ಕುರಿತು ಬೆಳಕು ಚೆಲ್ಲಿದರು. ಸ್ವಯಂ ಆರೈಕೆ, ಸಮಯ ನಿರ್ವಹಣೆ ಮತ್ತು ಸಕಾರಾತ್ಮಕ ಕೆಲಸದ ವಾತಾವರಣದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಸಿಬ್ಬಂದಿ ವರ್ಗವು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನೆರವೇರಿಸಿದರು. ಉಪನ್ಯಾಸಕಿ ಕುಮಾರಿ ಕೀರ್ತನಾ ಕಾರ್ಯಕ್ರಮವನ್ನು ನಿರೂಪಿಸಿದರು.
ಅಂತಿಮವಾಗಿ ಶ್ರೀಮತಿ ಸೌಜನ್ಯ ಶೆಟ್ಟಿ ಅವರಿಗೆ ಸ್ಮರಣಿಕೆಯನ್ನರ್ಪಿಸಿ ಗೌರವಿಸಲಾಯಿತು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

