

ಕೆ.ಜಿ.ಎಫ್ : ಪತ್ರಕರ್ತರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಸಂಘಟಿತರಾದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಭಿಪ್ರಾಯಪಟ್ಟರು.
ಕೆ.ಜಿ.ಎಫ್ ಕಾರ್ಯನಿರತ ಪತ್ರಕರ್ತರ ಸಂಘದ ಆವರಣದಲ್ಲಿ 25×110 ಅಡಿಗಳ ಸಭಾಭವನ ನಿರ್ಮಾಣ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆ.ಜಿ.ಎಫ್ ಕಾರ್ಯನಿರತ ಪತ್ರಕರ್ತರ ಸಂಘವು ಈಗಾಗಲೇ ಉತ್ತಮ ಕಚೇರಿಯನ್ನು ಕಟ್ಟಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಶಾಸಕಿ ರೂಪಕಲಾ ಶಶಿಧರ್ ಬಿಡುಗಡೆಗೊಳಿಸಿರುವ 15 ಲಕ್ಷ ರೂ. ಅನುದಾನದಲ್ಲಿ ಸಾಧ್ಯವಾದಷ್ಟು ಸಭಾಭವನ ಕಟ್ಟಡವನ್ನು ನಿರ್ಮಿಸಿ, ಬಳಿಕ ಲೋಕಸಭಾ ಹಾಗೂ ವಿಧಾನಪರಿಷತ್ ಸದಸ್ಯರ ಸಹಕಾರದಿಂದ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದುಎಂದರು.
ಸಂಕಷ್ಟಗಳ ನಡುವೆಯೂ ಕೋಲಾರದಲ್ಲಿ ಸುಸಜ್ಜಿತ ಪತ್ರಕರ್ತರ ಭವನವನ್ನು ಕಟ್ಟಿದ್ದೇವೆ. ಅದೇ ರೀತಿಯಲ್ಲಿ ಎಲ್ಲರೂ ಒಂದಾಗಿ ಸಂಘವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಪತ್ರಕರ್ತರಿಗೆ ಕೋರಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ವಿ. ಮುನಿರಾಜು ಮಾತನಾಡಿ, ಸಂಘದ ಚಟುವಟಿಕೆಗಳು ಉತ್ತಮವಾಗಿ ಸಾಗುತ್ತಿವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಆರ್ಥಿಕವಾಗಿ ಸದೃಢತೆ ಸಾಧ್ಯ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ನಮ್ಮ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ ಮಾತನಾಡಿ, ನಾವು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯವೇ ಮುಂದಿನ ದಿನಗಳಲ್ಲಿ ನಮ್ಮ ಹೆಸರನ್ನು ಉಳಿಸುತ್ತದೆ. ಆದ್ದರಿಂದ ಒಟ್ಟಾಗಿ ಸಂಘದ ಚಟುವಟಿಕೆಗಳನ್ನು ಬಲಪಡಿಸಬೇಕು ಎಂದರು.
ಕೆ.ಜಿ.ಎಫ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೊರೈಅರಸು ಮಾತನಾಡಿ, ಇಂದು ನಮ್ಮ ಕಚೇರಿ ಒಂದು ಸ್ವರೂಪ ಪಡೆದುಕೊಂಡಿರುವುದು ದಿವಂಗತ ಶಾಸಕ ಎಂ. ಭಕ್ತವತ್ಸಲಂ, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಹಾಗೂ ಪೌರಾಯುಕ್ತ ಪವನ್ ಕುಮಾರ್ ಅವರ ಸಹಕಾರದಿಂದ ಸಾಧ್ಯವಾಯಿತು. ಇದೀಗ ಶಾಸಕಿ ರೂಪಕಲಾ ಶಶಿಧರ್ ಅವರ ಶಕ್ತಿ ನಮಗೆ ಬೆಂಬಲವಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಎಲ್ಲಾ ಪತ್ರಕರ್ತರ ಸಹಕಾರ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಜೆ.ಜಿ. ಶ್ರೀನಿವಾಸಮೂರ್ತಿ, ಮಾಜಿ ಅಧ್ಯಕ್ಷ ಶ್ರೀಧರ್ ಪಿಳೈ, ಖಜಾಂಚಿ ಮಲ್ಲಾರ್ ಶೇಖರ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ವೈ. ಶಿವಶಂಕರ್, ಪುರುಷೋತ್ತಮರೆಡ್ಡಿ, ಹಸ್ಮುಖ್ ಜೈನ್, ಸುದರ್ಶನ್, ಸತೀಶ್, ಭರಣಿಪ್ರಕಾಶ್, ವಿಎಸ್. ಪ್ರಕಾಶ್, ಸಂಪತ್, ಪಿ.ಎಲ್. ರಾಜಾ, ಭಾಸ್ಕರನ್, ಶ್ರೀಕಾಂತ್, ವೇಲಾಯುದಂ ಹಾಗೂ ಅನೇಕರು ಹಾಜರಿದ್ದರು.

