

ಬೈಂದೂರು ಹೋಲಿ ಕ್ರಾಸ್ ಚರ್ಚ್ ಕಾರ್ಯವ್ಯಾಪ್ತಿಯಲ್ಲಿ ತಮ್ಮದೇ ಆದ ಹೊಸ ಚಿಂತನೆಗಳೊಂದಿಗೆ ಹೊಸ ವ್ಯವಹಾರವನ್ನು ಆರಂಭಿಸಿ ಸ್ವಂತ ಉದ್ಯಮವನ್ನು ಮಾಡುವ ಮುಖಾಂತರ ಸಮಾಜದ ಆರ್ಥಿಕತೆಗೆ ಕಾರಣೀಕರ್ತರಾಗಿ ಸೇವೆ ಮಾಡುತ್ತಿರುವ ಕ್ರೈಸ್ತ ಸಮುದಾಯದಲ್ಲಿರುವ ಉದ್ಯಮಿಗಳನ್ನು ಗುರುತಿಸಿ “ಉದ್ಯಮಿಗಳ ಜುಬಿಲಿ” ಯನ್ನು ಕಾರ್ಮಿಕ ಆಯೋಗದ ಸಹಯೋಗದಲ್ಲಿ ಆಗಸ್ಟ್ 3 ರಂದು ಭಾನುವಾರ ಚರ್ಚ್ ಸಭಾಂಗಣದಲ್ಲಿ ಜರುಗಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೆ ಮುನ್ನ ಉದ್ಯಮಿಗಳ ಏಳಿಗೆಗೆ ಹಾಗೂ ಪ್ರಗತಿಗಾಗಿ ವಿಶೇಷವಾಗಿ ಪ್ರಾರ್ಥಿಸಿ ಬಲಿಪೂಜೆಯನ್ನು ಸಲ್ಲಿಸಲಾಯಿತು.
ನಂತರ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕಾರ್ಮಿಕ ಆಯೋಗದ ಸಂಚಾಲಕರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ರವರು ವೇದಿಕೆಯಲ್ಲಿರುವ ಗಣ್ಯರನ್ನು ಹೂಗುಚ್ಛವನ್ನು ನೀಡಿ ಸ್ವಾಗತಿಸಿ, ಉದ್ಯಮಿಗಳ ವ್ಯಕ್ತಿ ಪರಿಚಯವನ್ನು ಮಾಡುವುದರೊಂದಿಗೆ, ನಡೆಸುತ್ತಿರುವ ಉದ್ಯಮದ ಕುರಿತು ವಿವರಣೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ ರವರು ನೆರೆದ ಉದ್ಯಮಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ಉದ್ಯಮಿಗಳು ತಮ್ಮ ಉದ್ಯಮದ ಕುರಿತು ಹಾಗೂ ಅನುಭವವನ್ನು ಹಂಚಿಕೊಳ್ಳುವ ಮೂಲಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉದ್ಯಮಿಗಳ ಜಾಹೀರಾತುಗಳ ಪ್ರದರ್ಶನವನ್ನು ಮಾಡಿದ್ದು, ಸುಮಾರು 54 ಉದ್ಯಮಿಗಳು ಭಾಗವಹಿಸಿದ್ದರು.ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸ್ಟೇಪನ್ ಡಾಯಸ್, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್, ಸಂಯೋಜಕಿ ಅನಿತಾ ನಜ್ರೆತ್, ಧರ್ಮಭಗಿನಿ ಸಿಸ್ಟರ್ ಆನ್ಸಿ ಪಾವ್ಲ್ ಉಪಸ್ಥಿತರಿದ್ದರು.
ಕಾರ್ಮಿಕ ಆಯೋಗದ ಸದಸ್ಯ ರೋನಿ ನಜ್ರೆತ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿ , ನಿರೂಪಣೆಯನ್ನು ಮಾಡಿದ್ದು, ಸಿರಿಲ್ ರೆಬೆರೊ ರವರು ವಂದಿಸಿದರು.


















































