

ಕೋಟೇಶ್ವರ: ಕುಂದಾಪ್ರ ಕನ್ನಡ ದಿನಾಚರಣೆಯ ಮೂಲಕ ಕುಂದಾಪ್ರ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ ವಿಶ್ವದೆಲ್ಲೆಡೆ ಕುಂದಾಪ್ರ ಭಾಷೆಯ ಮೇಲಿನ ಅಭಿಮಾನ ಜಾಸ್ತಿಯಾಗಿರುವುದು ಜತೆಗೆ ಕುಂದಾಪ್ರ ಭಾಗದ ಕಲೆ, ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಹೇಳಿದರು.
ಅವರು ಗುರುವಾರ ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳ ಇವರ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 6ನೇ ವರ್ಷದ ವಿಶ್ವಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಆಶಯದ ಮಾತುಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಪ್ರಾಪ್ತಿ, ಅಕ್ಷರ, ಸ್ಪೂರ್ತಿ ಎಸ್, ಪ್ರಣತಿ ಉಪಾಧ್ಯ ಹಾಗೂ ಬೀಜಾಡಿಯ ಅಶಾ ಕಾರ್ಯಕರ್ತೆಯರಾದ ಸರೋಜಾ, ಅನಿತಾ, ಗೀತಾ, ಶ್ಯಾಮಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೀಜಾಡಿ ಮೂಡುಶಾಲಾ ಅಂಗನವಾಡಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ಕೋಟ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾರ್ಕಡ ಅಚ್ಚುತ ಪೂಜಾರಿ, ವಿದ್ಯಾರ್ಥಿ ಸುಮೇಧ್ ಪುರಾಣಿಕ ಕುಂದಾಪ್ರ ಕನ್ನಡ ಗೀತೆ ಹಾಡಿದರು. ಕುಂದಾಪುರದ ವಕೀಲ ಪ್ರದೀಪ ಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಅಧ್ಯಕ್ಷ ಯು.ಸದಾನಂದ ಉಡುಪ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್., ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಕಾರ್ಯದರ್ಶಿ ಭಾಸ್ಕರ್ ಬಿ.,ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳದ ಕಾರ್ಯದರ್ಶಿ ಗಜೇಂದ್ರ ಮೊಗವೀರ,ಕುಂದಾಪುರ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಸುಪ್ರೀತಾ ಪುರಾಣಿಕ ಉಪಸ್ಥಿತರಿದ್ದರು.
ಉಪನ್ಯಾಸಕ ಪಾಂಡುರಂಗ ಸ್ವಾಗತಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಬಿ.ಜಿ.ನಾಗರಾಜ್ ವಂದಿಸಿದರು.









