

ಶ್ರೀನಿವಾಸಪುರ, ಜುಲೈ 12: ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಉರ್ದು ಹಾಗೂ ಇಂಗ್ಲಿಷ್ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್ಡಿಎಂಸಿ) ಹಾಗೂ ಪೋಷಕರ ಮಾಸಿಕ ಸಭೆ ನಡೆಯಿತು.
ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ನೈತಿಕ ಮೌಲ್ಯಗಳು, ಹಾಗೂ ಶಾಲೆಯ ಮೂಲಭೂತ ಸೌಲಭ್ಯಗಳ ಕುರಿತಾಗಿ ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು. ಪೋಷಕರು ನೇರವಾಗಿ ಶಿಕ್ಷಕರೊಂದಿಗೆ ಮಕ್ಕಳ ಹಾಜರಾತಿ, ಪಠ್ಯದಲ್ಲಿ ಆಸಕ್ತಿ, ಹಾಗೂ ದಿನನಿತ್ಯದ ಕಾರ್ಯವೈಖರಿಯ ಬಗ್ಗೆ ಮಾತುಕತೆ ನಡೆಸಿದರು.
ಪೋಷಕರು ತಮ್ಮ ಮಕ್ಕಳ ಶಿಕ್ಷಣ ಸಂಬಂಧಿತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದು, ಸಮಯೋಚಿತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು. ಮಧ್ಯಾಹ್ನದ ಆಹಾರದ ಗುಣಮಟ್ಟ ಸುಧಾರಣೆ, ಶಾಲಾ ಆವರಣದ ಸ್ವಚ್ಛತೆ ಹಾಗೂ ಮಕ್ಕಳ ನಿಯಮಿತ ಹಾಜರಾತಿಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂಬುದು ಅವರ ಅಭಿಪ್ರಾಯವಾಯಿತು.
ಒಂದು ಸಲಹೆಯಾಗಿ, ಪೋಷಕರೊಬ್ಬರು ಶಿಕ್ಷಕರು ವಾಟ್ಸಾಪ್ ಗ್ರೂಪ್ ರಚಿಸಿ, ದಿನನಿತ್ಯದ ಗೃಹಕಾರ್ಯ ಹಾಗೂ ಅಧ್ಯಾಪನಾ ಸೂಚನೆಗಳನ್ನು ಪೋಷಕರಿಗೆ ತಲುಪಿಸಬೇಕೆಂದು ವಿನಂತಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಮೊಹಮ್ಮದ್ ಸಾಧಿಕ್ ಇಂತಹ ಸಭೆಗಳು ಶಾಲೆ, ಪೋಷಕರು ಮತ್ತು ಮಕ್ಕಳ ನಡುವೆ ಬಲವಾದ ಸಂವಹನಕ್ಕೆ ಕಾರಣವಾಗುತ್ತವೆ. ಪೋಷಕರ ಸಹಕಾರವೇ ಮಕ್ಕಳ ವಿದ್ಯಾಭ್ಯಾಸದ ಉನ್ನತಿಗೆ ಪೂರಕವಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಹಿದಾಯತ್ ಉಲ್ಲಾ ಖಾನ್, ಎಪಿಜೆ ಅಬ್ದುಲ್ ಕಲಾಂ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಇಲ್ಯಾಸ್ ಪಾಷಾ, ಶಿಕ್ಷಕರಾದ ಇಮ್ತಿಯಾಝ್, ಎಸ್ಡಿಎಂಸಿ ಸದಸ್ಯರು ಹಾಗೂ ಹಲವಾರು ಪೋಷಕರು ಭಾಗವಹಿಸಿದ್ದರು.


