

ಕೋಲಾರ: ಪ್ರಧಾನಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮದ ಭಾಗವಾಗಿ, ಜಿಲ್ಲಾ ಮಟ್ಟದ ಸಮಿತಿ (DLC)ಯಿಂದ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಉದ್ಯೋಗ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಕೋಲಾರದ ಮೌಲಾನಾ ಆಜಾದ್ ಭವನದಲ್ಲಿ ಜಾಗೃತಿ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ಕೆಎಂಡಿಸಿ ವ್ಯವಸ್ಥಾಪಕಿ ಶ್ರೀಮತಿ ಶೆರೀನ್ ತಾಜ್ ಅವರು ನಿಗಮದ ವಿವಿಧ ಯೋಜನೆಗಳ ವಿವರ ನೀಡಿದರು. ಅರಿವಾ ಬಡ್ಡಿರಹಿತ ಶಿಕ್ಷಣ ಸಾಲ, ವಿದೇಶ ಶಿಕ್ಷಣ ಸಾಲ, ಮಾದರಿ ಧನ ಸಹಾಯ, ಮಹಿಳಾ ಸ್ವಾವಲಂಬನೆ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಮತ್ತು ವಾಣಿಜ್ಯ ಸಾಲಗಳ ಬಗ್ಗೆ ವಿವರ ನೀಡಿದ ಅವರು ಅರ್ಹತೆಯುಳ್ಳ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೆಂದು ತಿಳಿಸಿದರು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೈಲಾರಪ್ಪ ಅವರು ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿವಿಧ ವಿದ್ಯಾರ್ಥಿವೇತನಗಳು, ಮಾದರಿ ಶಾಲೆ, ವಸತಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕೆಎಂಡಿಸಿ ನಿರ್ದೇಶಕ ಅಬ್ದುಲ್ ಖಯೂಂ ಅವರು ವಿದೇಶ ಶಿಕ್ಷಣದ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳು ಈ ಸಾಲದ ಮೂಲಕ ಉನ್ನತ ಶಿಕ್ಷಣ ಪಡೆದು ಸಮಾಜದ ಬೆಳವಣಿಗೆಯಲ್ಲಿ ಪಾತ್ರವಹಿಸಬಹುದೆಂದು ಹೇಳಿದರು.
ಸಭೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ಮಾದರಿ ಶಾಲೆಯ ಪ್ರಾಂಶುಪಾಲ ಮಹದೇವಪ್ಪ, DLC ಸದಸ್ಯರು, ಹಾಗೂ ನೂರಿ, ಸಲೀಮ್, ನಯಾಜ್, ಜಮೀಲ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಚರ್ಚೆಯಲ್ಲಿ ತೊಡಗಿದರು.
ಸಭೆಯ ಅಂತ್ಯದಲ್ಲಿ ಈ ಜಾಗೃತಿ ಕಾರ್ಯಕ್ರಮ ಅಲ್ಪಸಂಖ್ಯಾತ ಸಮುದಾಯದ ಸಬಲೀಕರಣ ಹಾಗೂ ವಿಶ್ವಾಸ ನಿರ್ಮಾಣಕ್ಕೆ ದಿಕ್ಕು ತೋರಿಸುವ ಶಕ್ತಿಶಾಲಿ ವೇದಿಕೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.


