

ಬೆಂಗಳೂರು, ಜೂನ್ 6: ಹಿರಿಯ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರು ಇಂದು ಅಧಿಕೃತವಾಗಿ ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹೊಣೆಗಾರಿಯನ್ನು ಮೇಜರ್ ಮಣಿವಣ್ಣನ್ ಪಿ. ಐಎಎಸ್ ಅವರಿಂದ ಸ್ವೀಕರಿಸಿದರು.
ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ( ವೈದ್ಯಕೀಯ ಶಿಕ್ಷಣ ) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ನೀಡುತ್ತಿರುವ ಮೊಹ್ಸಿನ್ ಅವರಿಗೆ ಸಹಕಾರ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯು ನೀಡಲಾಗಿದೆ. ರಾಜ್ಯದ ಆಡಳಿತದಲ್ಲಿ ತಮ್ಮ ದೀರ್ಘಕಾಲಿನ ಅನುಭವ ಹೊಂದಿರುವ ಅವರು, ನವೋತ್ಸಾಹದೊಂದಿಗೆ ಹೊಸ ಹೊಣೆಗಾರಿಯನ್ನು ಸ್ವೀಕರಿಸಿದ್ದಾರೆ.
ಅಧಿಕಾರ ವಹಿಕೆಗೆ ನಂತರ ಮಾತನಾಡಿದ ಮೊಹ್ಸಿನ್, ಸಹಕಾರ ವ್ಯವಸ್ಥೆಯ ಬಲವರ್ಧನೆಯ ಮೂಲಕ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಹಕಾರ ಸಂಘಗಳ ಪಾರದರ್ಶಕತೆ, ಜನಸಾಮಾನ್ಯರ ಭಾಗವಹಿಸುವಿಕೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದು, ನೂತನ ಪ್ರಧಾನ ಕಾರ್ಯದರ್ಶಿಗೆ ಹಾರೈಕೆ ಸಲ್ಲಿಸಿದರು. ಮೊಹ್ಸಿನ್ ಅವರ ನೈತಿಕ ಹಾಗೂ ಕಾರ್ಯಪಟು ನೇತೃತ್ವದಲ್ಲಿ ಸಹಕಾರ ಇಲಾಖೆ ಮತ್ತಷ್ಟು ಪ್ರಗತಿಪಥದಲ್ಲಿ ಸಾಗಲಿದೆ ಎಂಬ ನಂಬಿಕೆಯನ್ನು ಸಿಬ್ಬಂದಿಯವರು ವ್ಯಕ್ತಪಡಿಸಿದರು.

