ಕೋಲಾರ:- ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನ ಕಲಿಕೆ ಅತಿ ಪರಿಣಾಮಕಾರಿಯಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮತ್ತು ಕುಪ್ಪಂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರಯೋಗಗಳ ಪ್ರದರ್ಶನವನ್ನು ಉದ್ಘಾಟಿಸಿ ವರು ಮಾತನಾಡಿದರು.
ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವರೆಗೂ ವಿಜ್ಞಾನವನ್ನು ಅವಲಂಬಿಸಿರುತ್ತಾನೆ. ಈಗಿನ ಪೀಳಿಗೆಯ ಮಕ್ಕಳಿಗೆ ಸುಲಭ ಕಲಿಕೆಗೆ ವೈಜ್ಞಾನಿಕ ಅಂಶಗಳ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರಯೋಗಗಳು ಅತ್ಯವಶ್ಯಕ ಎಂದು ತಿಳಿಸಿದರು.
ವಿಜ್ಞಾನ ಇಂದು ಜೀವನದಲ್ಲಿ ಹಾಸುಹೊಕ್ಕಾಗಿದೆ, ವಿಜ್ಞಾನವಿಲ್ಲದೇ ಬದುಕೇ ಇಲ್ಲ ಎಂದ ಅವರು, ಮನೆಯಲ್ಲಿ ಅಡುಗೆ ಮಾಡುವುದರಿಂದ ವಿಮಾನ ತಯಾರಿಕೆಯವರೆಗೂ ವಿಜ್ಞಾನದ ನೆರವು ಅಗತ್ಯವಿದೆ, ದೇಶದ ಸ್ವಾಭಿಮಾನದ ಸಂಕೇತವಾದ ನಮ್ಮ ಸೇನೆಯ ಶಕ್ತಿ ಹೆಚ್ಚಳ, ಯುದ್ದೋಪಕರಗಳ ತಯಾರಿಕೆ ಎಲ್ಲಕ್ಕೂ ವಿಜ್ಞಾನವೇ ಆಧಾರ ಎಂದರು.
ಭಾರತ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ, ಇತ್ತೀಚೆಗೆ ನಮ್ಮ ಇಸ್ರೋ ಸಂಸ್ಥೆ ಚಂದ್ರನಲ್ಲಿಗೆ ರಾಕೇಟ್ ಕಳುಹಿಸುವ ಮೂಲಕ ವಿಶ್ವದ ಇಂತಹ ಸಾಧನೆಗಳನ್ನು ಮಾಡಿದ ರಾಷ್ಟ್ರಗಳ ಪಟ್ಟಿಗೆ ಸೇರಿದೆ ಎಂದ ಅವರು, ವಿಜ್ಞಾನ ಕಷ್ಟವಲ್ಲಿ ನೀವು ಇಷ್ಟಪಟ್ಟು ಕಲಿಯುವ ಪ್ರಯತ್ನ ಮಾಡಬೇಕು ಎಂದರು.
ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ವಲಯಾಧಿಕಾರಿ ಹರಿಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅಂಶಗಳ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನಗಳು ಮತ್ತು ಚಟುವಟಿಕೆಗಳು ಸಹಕಾರಿಯಾಗಲಿದೆ. ಅಗಸ್ತ್ಯ ಫೌಂಡೇಷನ್ ಸಂಸ್ಥೆ ಸರ್ಕಾರಿ ಶಾಲೆಗಳಮಕ್ಕಳಿಗೆ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ವಿಜ್ಞಾನದ ಕಲಿಕೆಗೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಪ್ರತಿಷ್ಠಾನದ ಮಾರ್ಗದರ್ಶಕರಾದ ನಾಗಪ್ಪ ಮತ್ತು ಮಧುಶ್ರೀ ಮಾತನಾಡಿ, ಕುಪ್ಪಂನ ಅಗಸ್ತ್ಯ ಫೌಂಡೇಷನ್ ರವರು ಕೋಲಾರ ತಾಲ್ಲೂಕಿನ ಶಾಲೆಗಳಲ್ಲಿ ಒಂಬತ್ತು ವರ್ಷಗಳಿಂದ ವೈಜ್ಞಾನಿಕ ಬೆಳೆವಣಿಗೆಗೆ ಇಂತಹ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂದರು.
ಸರ್ಕಾರಿ ಶಾಲೆಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದು, ವಿಜ್ಞಾನ ಬಸ್ಸಿನ ಮೂಲಕ ಶಾಲೆಯ ಬಾಗಿಲಿಗೆ ಬಂದು ನಾವು ಪ್ರಯೋಗಗಳ ಮೂಲಕ ಅರಿವು ನೀಡಲು ಸಿದ್ದರಿದ್ದು, ಸರ್ಕಾರಿ ಶಾಲೆಗಳಲ್ಲಿ ನಮಗೆ ಅವಕಾಶ ಕಲ್ಪಿಸುವ ಮೂಲಕ ಮಕ್ಕಳ ಕಲಿಕೆಗೆ ನಾವು ನಡೆಸುತ್ತಿರುವ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿಜ್ಞಾನ ವಸ್ತುಪ್ರದರ್ಶನವನ್ನು ಪ್ರೌಢಶಾಲೆ,ಪ್ರಾಥಮಿಕ ಶಾಲೆಗಳ ಸುಮಾರು 200 ಮಕ್ಕಳು ವೀಕ್ಷಿಸಿದ್ದು, ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಮಾದರಿಗಳನ್ನು ಇಡಲಾಗಿತ್ತು.
ಈ ಸಂದರ್ಭದಲ್ಲಿ ಅಗಸ್ತ್ಯ ಫೌಂಡೇಷನ್ನ ವಲಯಾಧಿಕಾರಿ ಹರೀಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ ಎಂ.ನಾಗಪ್ಪ, ಮಧುಶ್ರೀ, ಪ್ರೌಢಶಾಲಾ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಫರೀದಾ, ರಮಾದೇವಿ, ಶ್ರೀನಿವಾಸಲು, ಅರಾಭಿಕೊತ್ತನೂರು ಪ್ರಾಥಮಿಕ ಶಾಲಾ ಶಿಕ್ಷಕರಾದ ಸುಮಾ, ಭಾರತಿ ಮತ್ತಿತರರು ಹಾಜರಿದ್ದರು.