ಅ.4ರಂದು ಕುಂದಾಪುರದ ಆಲೂರು ಚಿತ್ರಕೂಟದಲ್ಲಿ ಕರಾವಳಿ ಭಾಗದ ಮೊಟ್ಟ ಮೊದಲ ಚಿತ್ರಕೂಟ ಆಯುರ್ವೇದ ಹಬ್ಬ;ವಿದ್ಯಾರ್ಥಿಗಳಿಗೆ ಸ್ಪರ್ಧೆಳಿವೆ – ಆಕರ್ಷಕ ಬಹುಮಾನಗಳಿವೆ

ಕುಂದಾಪುರದ ಆಲೂರಿನ ಹಳ್ಳಿಯ ಮಡಿಲಲ್ಲಿ 2010ರಲ್ಲಿ ಆರಂಭವಾದ ನಮ್ಮ ‘ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ’ ಇಂದು ಸಾವಿರಾರು ಜನರಿಗೆ ಆರೋಗ್ಯ ಸೇವೆ ನೀಡಿದ ಸಾರ್ಥಕ ತಾಣವಾಗಿ ಬೆಳೆದಿದೆ ಎಂದರೆ ಅದಕ್ಕೆ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಯೇ ಕಾರಣ. ಇಂದು ನಿಮ್ಮೆದುರು ಒಂದು ತುರ್ತು ಹಾಗೂ ಮಹತ್ವದ ವಿಚಾರವನ್ನು ಹಂಚಿಕೊಳ್ಳಲು ಈ ಪತ್ರ ಬರೆಯುತ್ತಿದ್ದೇನೆ.

ಇವತ್ತು ನಮ್ಮ ಸುತ್ತಲಿನ ಮಕ್ಕಳನ್ನು, ಯುವಜನತೆಯನ್ನು ನೋಡಿದಾಗ ಮನಸ್ಸಿಗೆ ಆತಂಕವಾಗುತ್ತದೆ. ದಿನದ ಬಹುಪಾಲು ಸಮಯ ಮೊಬೈಲ್ ಪರದೆಯ ಕೃತಕ ಬೆಳಕು, ಎಸಿ ರೂಮುಗಳು, ಜಂಕ್ ಆಹಾರ ಮತ್ತು ಬಿಡುವಿಲ್ಲದ ಒತ್ತಡದ ನಡುವೆ ಕಳೆಯುತ್ತಿರುವ ನಮ್ಮ ನವಪೀಳಿಗೆ ಮಣ್ಣಿನ ನಂಟು, ನಿಸರ್ಗದ ಸಾಂಗತ್ಯವನ್ನು ಸಂಪೂರ್ಣ ಕಳೆದುಕೊಂಡಿದೆ. ಇದರ ಪರಿಣಾಮವೇ ಇಂದು ಚಿಕ್ಕ ವಯಸ್ಸಿನಲ್ಲೇ ಕಾಡುತ್ತಿರುವ ತೀವ್ರ ಆತಂಕ (anxiety), ನಿದ್ರಾಹೀನತೆ ಮತ್ತು ಜೀರ್ಣಕ್ರಿಯೆಯ ಏರುಪೇರು. ಇವಕ್ಕೆ ನಾವು ಇಂಟರ್ನೆಟ್‌ನಲ್ಲಿ ‘ಡಿಜಿಟಲ್ ಡಿಟಾಕ್ಸ್’, ‘ಗಟ್ ಹೆಲ್ತ್’, ‘ಮೈಂಡ್‌ಫುಲ್ ಲಿವಿಂಗ್’ ಎಂದು ಇಂಗ್ಲಿಷ್ ಹೆಸರುಗಳನ್ನು ಹುಡುಕುತ್ತಿದ್ದೇವೆ. ಆದರೆ, ಈ ಸಮಸ್ತ ಆಧುನಿಕ ಸಮಸ್ಯೆಗಳಿಗೆ ನೈಜ ಪರಿಹಾರ ಇರುವುದು ನಮ್ಮ ಹಳ್ಳಿಯ ಸಹಜ ದಿನಚರಿಯಲ್ಲಿ ಮತ್ತು ಸಾವಿರಾರು ವರ್ಷಗಳ ಆಯುರ್ವೇದ ವಿಜ್ಞಾನದಲ್ಲಿ!

ಆಯುರ್ವೇದವೆಂದರೆ ಕೇವಲ ಕಾಯಿಲೆ ಬಂದಾಗ ಕುಡಿಯುವ ಕಹಿ ಕಷಾಯವಲ್ಲ; ಅದು ನಮ್ಮ ದೇಹಕ್ಕೆ ಪ್ರಕೃತಿ ನೀಡಿರುವ ಮೂಲ ಕೈಪಿಡಿ. ಈ ಸತ್ಯವನ್ನು ನಮ್ಮ ಮುಂದಿನ ತಲೆಮಾರಿಗೆ ತಿಳಿಸುವುದು ಇಂದಿನ ತುರ್ತು ಕರ್ತವ್ಯವಾಗಿದೆ.

ಅದಕ್ಕಾಗಿಯೇ, ಕರಾವಳಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ‘ಆಯುರ್ವೇದ ನಾಳೆಗೆ | ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ’ ಎಂಬ ಧ್ಯೇಯವಾಕ್ಯದೊಂದಿಗೆ ಮುಂಬರುವ ಅಕ್ಟೋಬರ್ 4ರ ಭಾನುವಾರ ನಮ್ಮ ಆಲೂರಿನ ಚಿತ್ರಕೂಟ ಆವರಣದಲ್ಲಿ ‘ಚಿತ್ರಕೂಟ ಆಯುರ್ವೇದ ಹಬ್ಬ 2026’ ಆಯೋಜಿಸುತ್ತಿದ್ದೇವೆ.

ಈ ಹಬ್ಬವನ್ನು ಎರಡು ಮಹತ್ವದ ಆಯಾಮಗಳಲ್ಲಿ ರೂಪಿಸಿದ್ದೇವೆ:

  1. ಚಿತ್ರಕೂಟ ಜೆನ್ ಜೀ ಆಯುರ್ವೇದ ಅಭಿಯಾನ (#ChithrakootaGenZAyurveda):
    ಯುವಜನತೆಯನ್ನು ಅವರದ್ದೇ ಭಾಷೆಯಲ್ಲಿ ತಲುಪಲು ಇನ್‌ಸ್ಟಾಗ್ರಾಮ್ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದ್ದು, ₹75,000 ಮೌಲ್ಯದ ಆಕರ್ಷಕ ಬಹುಮಾನಗಳನ್ನು ನಿಗದಿಪಡಿಸಲಾಗಿದೆ (ಸೆಪ್ಟೆಂಬರ್ 30 ಕೊನೆಯ ದಿನ). ಜತೆಗೆ ಅಕ್ಟೋಬರ್ 4ರಂದು ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ಮತ್ತು ಯುವಜನತೆ-ವೈದ್ಯರ ನಡುವೆ ಮುಕ್ತ ವಿಚಾರ ಸಂಕಿರಣ ನಡೆಯಲಿದೆ.
  2. ಹಳ್ಳಿಯಲ್ಲೊಂದು ದಿನ:
    ಭಾನುವಾರದ ರಜಾ ದಿನ ಕುಟುಂಬ ಸಮೇತರಾಗಿ ಹಳ್ಳಿಯ ಬದುಕನ್ನು ಕಣ್ತುಂಬಿಕೊಳ್ಳಲು ಆರು ವಿಶಿಷ್ಟ ಅನುಭವಗಳು ಕಾದಿವೆ— ವೈದ್ಯರಿಂದ ಉಚಿತ ನಾಡಿ/ದೇಹಪ್ರಕೃತಿ ಪರೀಕ್ಷೆ, ಗೋಮಾತೆ ಅಪ್ಪುಗೆ, ಹಿತ್ತಿಲ ಗಿಡಮೂಲಿಕೆಗಳ ಕಷಾಯ ಶಾಲೆ, 250ಕ್ಕೂ ಹೆಚ್ಚು ಗಿಡಮೂಲಿಕೆಗಳ ಔಷಧ ವನ ನಡಿಗೆ, ಹಳ್ಳಿಯ ಆಟಗಳು, ಸಾಂಪ್ರದಾಯಿಕ ಮತ್ತು ಆರೋಗ್ಯ ಆಹಾರ ಮೇಳ-ಸಂತೆ ಹಾಗೂ ಪಂಚಕರ್ಮ ಚಿಕಿತ್ಸೆಗಳ ಪರಿಚಯ.

ಇಲ್ಲಿ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಆದರೆ ಸೂಕ್ತ ವ್ಯವಸ್ಥೆಗಾಗಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬೇಕಿದೆ.

ನನ್ನದೊಂದು ಕಳಕಳಿಯ ಮನವಿ:
ಈ ಆಂದೋಲನ ಕೇವಲ ಚಿತ್ರಕೂಟದ ಕಾರ್ಯಕ್ರಮವಲ್ಲ; ಇದು ನಮ್ಮ ಮಣ್ಣಿನ, ನಮ್ಮ ಪರಂಪರೆಯ ಮತ್ತು ನಮ್ಮ ಮಕ್ಕಳ ಆರೋಗ್ಯದ ಹಬ್ಬ. ಇದು ನಾಡಿನ ಪ್ರತಿ ಮನೆಗೂ ತಲುಪಬೇಕಾದರೆ ಸಾಮಾಜಿಕ ಜಾಲತಾಣಗಳಲ್ಲಿರುವ ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ.

ಈ ಪೋಸ್ಟ್‌ ಅನ್ನು ನಿಮ್ಮ ವಾಟ್ಸಾಪ್ ಗ್ರೂಪ್‌ಗಳು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ ಗರಿಷ್ಠ ಮಟ್ಟದಲ್ಲಿ ಹಂಚಿಕೊಳ್ಳಿ.

ನಿಮ್ಮ ಮನೆಯ ಮಕ್ಕಳು, ಯುವಮಿತ್ರರು ರೀಲ್ಸ್ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ.

ಅಕ್ಟೋಬರ್ 4ರಂದು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಆಲೂರಿಗೆ ಬಂದು ಹಳ್ಳಿಯ ಮಡಿಲಲ್ಲಿ ಒಂದು ದಿನ ಕಳೆಯಿರಿ.

ಬನ್ನಿ, ನಮ್ಮ ಪ್ರಾಚೀನ ಆಯುರ್ವೇದದ ಜ್ಞಾನವನ್ನು ಹೆಮ್ಮೆಯಿಂದ ಮುಂದಿನ ಪೀಳಿಗೆಗೆ ದಾಟಿಸೋಣ. ನಿಮ್ಮ ಪ್ರೀತಿ, ಹಾರೈಕೆ ಹಾಗೂ ಬೆಂಬಲ ಸದಾ ನಮ್ಮ ಮೇಲಿರಲಿ.

ಕಾರ್ಯಕ್ರಮದ ವಿವರ ಹಾಗೂ ನೋಂದಣಿಗೆ ಸಂಪರ್ಕಿಸಿ: 9187471578

chithrakoota.com
ವಿಳಾಸ: ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಆಲೂರು, ಕುಂದಾಪುರ, ಉಡುಪಿ ಜಿಲ್ಲೆ
ಹ್ಯಾಶ್‌ಟ್ಯಾಗ್: #ChithrakootaAyurvedaHabba #ಚಿತ್ರಕೂಟಆಯುರ್ವೇದಹಬ್ಬ #ChithrakootaGenZAyurveda

ಪ್ರೀತಿಯ ಧನ್ಯವಾದಗಳೊಂದಿಗೆ,
ಡಾ. ರಾಜೇಶ್ ಬಾಯರಿ
ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಆಲೂರು.

ಅ.4ರಂದು ಕುಂದಾಪುರದ ಆಲೂರು ಚಿತ್ರಕೂಟದಲ್ಲಿ ಕರಾವಳಿ ಭಾಗದ ಮೊಟ್ಟ ಮೊದಲ ಚಿತ್ರಕೂಟ ಆಯುರ್ವೇದ ಹಬ್ಬ
• ನವಪೀಳಿಗೆಗೆ ಗ್ರಾಮೀಣ ಬದುಕಿನ ಅನುಭವ ನೀಡಲು ಹಳ್ಳಿಯಲ್ಲೊಂದು ದಿನ ಆಯೋಜನೆ
• ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಡಿಜಿಟಲ್ ರೀಲ್ಸ್ ಸ್ಪರ್ಧೆ; ಆಕರ್ಷಕ ಬಹುಮಾನ

ಕುಂದಾಪುರ, ಉಡುಪಿ ಮತ್ತು ದಕ್ಷಿಣ ಕನ್ನಡ: ನಗರೀಕರಣದ ವೇಗದ ಬದುಕಿನಲ್ಲಿ ಪ್ರಕೃತಿಯ ನಂಟು ತಪ್ಪಿಸಿಕೊಂಡಿರುವ ನವಪೀಳಿಗೆಗೆ ನಮ್ಮ ಪ್ರಾಚೀನ ಪಾರಂಪರಿಕ ಆಯುರ್ವೇದ ಪದ್ಧತಿ ಹಾಗೂ ನೈಸರ್ಗಿಕ ಗ್ರಾಮ ಜೀವನಶೈಲಿಯನ್ನು ಪರಿಚಯಿಸುವ ಮಹತ್ತರ ಉದ್ದೇಶದೊಂದಿಗೆ, ಕರಾವಳಿ ಕರ್ನಾಟಕದಲ್ಲೇ ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಚಿತ್ರಕೂಟ ಆಯುರ್ವೇದ ಹಬ್ಬ 2026 ಮುಂಬರುವ ಅಕ್ಟೋಬರ್ 4ರ ಭಾನುವಾರ ನಡೆಯಲಿದೆ. ಕುಂದಾಪುರ ತಾಲೂಕಿನ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಈ ಮಹತ್ವದ ಹಬ್ಬದ ಅಧಿಕೃತ ಲೋಗೋ ಅನಾವರಣ ಹಾಗೂ ದಿನಾಂಕ ಘೋಷಣೆ ನೆರವೇರಿತು.

ಕಾರ್ಯಕ್ರಮದ ಲೋಗೋ ಅನಾವರಣಗೊಳಿಸಿ ಮಾತನಾಡಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ಅವರು, “ಕಣ್ಣಿಗೆ ಮೊಬೈಲ್ ಪರದೆಯ ಕೃತಕ ಬೆಳಕು, ನಾಲಿಗೆಗೆ ಜಂಕ್ ಆಹಾರ, ಮನಸ್ಸಿಗೆ ಯಾಂತ್ರಿಕ ಬದುಕಿನ ಒತ್ತಡ- ಇಂದಿನ ಯುವಜನತೆಯನ್ನು ಆತಂಕ, ನಿದ್ರಾಹೀನತೆ ಮತ್ತು ಉದರ ಸಮಸ್ಯೆಗಳು ಸೇರಿದಂತೆ ಸಾಕಷ್ಟು ಜೀವನಶೈಲಿ ಸಮಸ್ಯೆಗಳಿಂದ ಹಿಂಡಿ ಹಿಪ್ಪೆ ಮಾಡುತ್ತಿವೆ. ಈ ಸಂಕಷ್ಟಗಳಿಗೆ ಕೇವಲ ಇಂಗ್ಲಿಷ್ ಹೆಸರುಗಳನ್ನು ಹುಡುಕಿ ಕಂಗಾಲಾಗುವ ಬದಲು, ನಮ್ಮ ನೆಲದ ಆಯುರ್ವೇದ ಜ್ಞಾನ ಮತ್ತು ಹಳ್ಳಿಯ ಸಹಜ ದಿನಚರಿಯಲ್ಲೇ ಅದ್ಭುತ ಪರಿಹಾರವಿದೆ. ಆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಹಬ್ಬ ಆಯೋಜಿಸಿದ್ದೇವೆ” ಎಂದು ಹೇಳಿದರು. ಇದೇ ಉದ್ದೇಶದೊಂದಿಗೆ ನವಪೀಳಿಗೆಯನ್ನು ಮಣ್ಣಿನ ಮಡಿಲಿಗೆ ಕರೆತಂದು ಸ್ವಾಸ್ಥ್ಯ ಕರುಣಿಸಲು ಈ ವಿನೂತನ ಜೀವನಶೈಲಿ ಆಂದೋಲನವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಯುವಜನತೆಗಾಗಿ ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನ
ಯುವಪೀಳಿಗೆಯನ್ನು ಅವರದ್ದೇ ಭಾಷೆ ಹಾಗೂ ಮಾಧ್ಯಮಗಳ ಮೂಲಕ ತಲುಪಲು ಜೆನ್ ಜೀ ಆಯುರ್ವೇದ ಜಾಗೃತಿ ಅಭಿಯಾನದಡಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಯುರ್ವೇದದ ಮಹತ್ವ ಮತ್ತು ಜೀವನಕ್ರಮ ಕುರಿತು ರೀಲ್ಸ್ ತಯಾರಿಸುವ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಒಟ್ಟು 75 ಸಾವಿರ ರೂಪಾಯಿ ಬಹುಮಾನ (25 ಸಾವಿರ ರೂ. ನಗದು ಹಾಗೂ 50 ಸಾವಿರ ರೂ. ಮೌಲ್ಯದ ಪಂಚಕರ್ಮ ಚಿಕಿತ್ಸೆ) ಬಹುಮಾನಗಳನ್ನು ನೀಡಲಾಗುವುದು. ಸೆಪ್ಟೆಂಬರ್ 30 ಈ ರೀಲ್ಸ್ ಸಲ್ಲಿಸಲು ಕೊನೆಯ ದಿನವಾಗಿದೆ. ಇದರೊಂದಿಗೆ ಅಕ್ಟೋಬರ್ 4ರಂದು ಸ್ಥಳದಲ್ಲೇ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ನಡೆಯಲಿದ್ದು, ವಿಜೇತ ಮಕ್ಕಳಿಗೆ ಆಕರ್ಷಕ ನಗದು ಪುರಸ್ಕಾರ ಲಭಿಸಲಿದೆ. ಅಂದು ಮಧ್ಯಾಹ್ನ ಯುವಜನತೆ, ವೈದ್ಯರು ಮತ್ತು ಸಾಮಾಜಿಕ ಜಾಲತಾಣ ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ನೇರ ಸಂವಾದ ಕೂಡ ಜರುಗಲಿದೆ.

ಹಳ್ಳಿಯಲ್ಲೊಂದು ದಿನ: ಪ್ರಕೃತಿಯ ಮಡಿಲಲ್ಲಿ ಆರೋಗ್ಯದ ಅನುಭವ
ನಗರ ಪ್ರದೇಶದ ಜನರಿಗೆ ಭಾನುವಾರದ ರಜಾ ದಿನವನ್ನು ಕುಟುಂಬ ಸಮೇತರಾಗಿ ಹಳ್ಳಿಯ ವಾತಾವರಣದಲ್ಲಿ ಕಳೆಯಲು ಹಳ್ಳಿಯಲ್ಲೊಂದು ದಿನ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನುರಿತ ವೈದ್ಯರಿಂದ ನಾಡಿ ಪರೀಕ್ಷೆ ನಡೆಸಿ ವ್ಯಕ್ತಿಯ ದೇಹ ಪ್ರಕೃತಿಗೆ ತಕ್ಕ ಆಹಾರ ಶೈಲಿಯ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಗೋಶಾಲೆ ಭೇಟಿ ಹಾಗೂ ಗೋಮಾತೆಯ ಸಾಮೀಪ್ಯದ ಅನುಭವ, ಮನೆಯ ಅಡುಗೆ ಸಾಮಗ್ರಿಗಳಿಂದಲೇ ರೋಗನಿರೋಧಕ ಕಷಾಯ ತಯಾರಿಸುವ ತರಬೇತಿ, 250ಕ್ಕೂ ಹೆಚ್ಚು ಅಪರೂಪದ ಗಿಡಮೂಲಿಕೆಗಳ ಪರಿಚಯ ನಡಿಗೆ ಇರಲಿದೆ. ಇದರೊಂದಿಗೆ ಸಾಂಪ್ರದಾಯಿಕ ಆಯುರ್ವೇದ ಆಹಾರ ಖಾದ್ಯಗಳು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಆಹಾರ ಮೇಳ-ಸಂತೆ ಮತ್ತು ದೇಹವನ್ನು ಶುದ್ಧೀಕರಿಸುವ ಪ್ರಾಚೀನ ಪಂಚಕರ್ಮ ವಿಧಾನಗಳ ಪರಿಚಯ ನಡೆಯಲಿದೆ.

ಅಕ್ಟೋಬರ್ 4ರಂದು ಆಲೂರಿನ ಚಿತ್ರಕೂಟ ಆಯುರ್ವೇದ ಕೇಂದ್ರದ 18 ಎಕರೆ ಹಸಿರು ಪರಿಸರದಲ್ಲಿ ನಡೆಯಲಿರುವ ಈ ಅಪರೂಪದ ಆಯುರ್ವೇದ ಹಬ್ಬಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವ್ಯವಸ್ಥೆಯ ದೃಷ್ಟಿಯಿಂದ ಆಸಕ್ತರು ಮುಂಚಿತವಾಗಿಯೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ವಿವರ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 9187471578 ಸಂಪರ್ಕಿಸಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ರಘುರಾಮ ಶಾಸ್ತ್ರಿ ಮತ್ತು ಮಹಾಬಲ ಬಾಯರಿ ಅವರು ಲೋಗೋ ಅನಾವರಣ ಮಾಡಿದರು. ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥರಾದ ಡಾ. ರಾಜೇಶ್ ಬಾಯರಿ, ಸಮಾಜದ ಗಣ್ಯರಾದ ಉದಯ್ ಜಿ ಪೂಜಾರಿ, ಉದಯ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ರಾಜೇಶ್ ದೇವಾಡಿಗ, ಚಂದ್ರಶೇಖರ್ ಶೆಟ್ಟಿ, ರವಿರಾಜ್ ಶೆಟ್ಟಿ, ಪ್ರಭಾಕರ ಆಚಾರ್ಯ, ಕಲಾವತಿ ಬಾಯರಿ, ಡಾ. ಅನುಲೇಖಾ ಬಾಯರಿ ಮತ್ತು ಬಹಳಷ್ಟು ಮಂದಿ ಗಣ್ಯರು ಇದ್ದರು.