

ಗಂಗೊಳ್ಳಿಯ ಕೊಸೆಸಾಂವ್ ಅಮ್ಮನವರ ದೇವಾಲಯದ ಪರಿಸರ ಆಯೋಗದ ಮುಂದಾಳತ್ವದಲ್ಲಿ ಅಕ್ಟೋಬರ್ 11 ರಂದು ಪ್ಲಾಸ್ಟಿಕ್ ರಹಿತ ಜೀವನ ಕ್ರಮ ಆಡವಳಿಕೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಚರ್ಚಿನ ಧರ್ಮಗುರುಗಳಾದ ವಂ| ಫಾದರ್ ತೋಮಸ್ ರೋಶನ್ ಡಿಸೋಜರವರು ಶುಭ ಹಾರೈಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರು ಹಾಗೂ ಕರ್ನಾಟಕ ಕಾರ್ಮಿಕ ಆಯೋಗದ ಅಧ್ಯಕ್ಷರಾದ ಕಿರಣ್ ಕ್ರಾಸ್ತಾ ಅವರು ಪರಿಸರ ಸಂರಕ್ಷಣೆಯ ಮಹತ್ವ, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿಗಳು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ತಮ್ಮ ಮಾತುಗಳ ಮೂಲಕ ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾನ್ವೆಂಟಿನ ಸುಪೀರಿಯರಾದ ಧರ್ಮಬಗಿನಿ ಗ್ರೇಸಿ ಲೋಬೊ, ಚರ್ಚಿನ ಪಾರ್ಲನ ಮಂಡಳಿಯ ಉಪಾಧ್ಯಕ್ಷರಾದ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜ, ಆಯೋಗದ ಸಂಯೋಜಕಿ ಜಸಿಂತ ಡಿಸೋಜಾ ಉಪಸ್ಥಿತರಿದ್ದರು.
ಚರ್ಚಿನ ಮಕ್ಕಳಿಂದ ಪ್ಲಾಸ್ಟಿಕ್ನ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಹಾಗೂ ಪ್ಲಾಸ್ಟಿಕ್ನಿಂದ ಪರಿಸರವನ್ನು ರಕ್ಷಿಸುವ ಸಂದೇಶ ಸಾರುವ ನೃತ್ಯ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
ಪರಿಸರ ಆಯೋಗದ ಸಂಚಾಲಕಿ ಶಲಿರಾ ಆರಾನ್ಹರವರು ಸ್ವಾಗತಿಸಿದರು. ಆಯೋಗದ ಸದಸ್ಯರಾದ ಶ್ರೀಯುತ ಅಗಾಪಿತಾಸ್ ರೆಬೇರೊ ಸಂಪನ್ಮೂಲ ವ್ಯಕ್ತಿಗಳ ಪರಿಚಯ ನೀಡಿದರು. ಬಾಜಿಲ್ ಪಾಯಸ್ ಧನ್ಯವಾದ ಸಲ್ಲಿಸಿದರು. ಶ್ರೀಮತಿ ಐರಿನ್ ನಜ್ರೆತ್ ಕಾರ್ಯಕ್ರಮವನ್ನು ನಿರೂಪಿಸಿದರು.









