

ಕುಂದಾಪುರ : ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧಿಕಾರಿಗಳು ಸೋಮವಾರ ಕುಂದಾಪುರದ ಪುರಸಭೆ ಕಚೇರಿಗೆ ದಿಢೀರ್ ದಾಳಿ ನಡೆಸಿ, ಬೆಳಗ್ಗೆಯಿಂದ ಸಂಜೆಯವರೆಗೂ ಪರಿಶೀಲಿಸಿದರು. ಬಂದ ದೂರುಗಳು, ಸುಮೊಟೋ ಆಗಿ ದಾಖಲಿಸಿಕೊಂಡ ಪ್ರಕರಣಗಳನ್ನು ಆಧರಿಸಿ ಲೋಕಾಯುಕ್ತ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಬಿ.ಪಿ. ಮಾರ್ಗದರ್ಶನದಲ್ಲಿ ಲೋಕಾಯುಕ್ತ
ವೃತ್ತ ನಿರೀಕ್ಷಕ ಮಂಜುನಾಥ್ ಶಂಕರಳ್ಳಿ ನೇತೃತ್ವದಲ್ಲಿ ದಾಳಿ ನಡೆಸಿದರು. ಅವರ ಜೊತೆ ಸಿಬ್ಬಂದಿ ರಾಘವೇಂದ್ರ ಹೊಸ್ಕೋಟೆ, ಆದರ್ಶ, ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ರವೀಂದ್ರ ಗಾಣಿಗ ಹಾಗೂ ಇಲ್ಲಿನ ತಾಲೂಕು ಕಚೇರಿಯ ಕಂದಾಯ ಇಲಾಖೆಯ ಹೆರಿಯ ಬಿಲ್ಲವ, ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.
ಬಾಕಿ ಕಡತಗಳು, ಉದ್ದಿಮೆ ಪರವಾನಗಿ, ಖಾತೆ ತಿದ್ದುಪಡಿ, ಖಾತೆ ವರ್ಗಾವಣೆ ಹಾಗೂ ಜನನ – ಮರಣ ಪ್ರಮಾಣ ಪತ್ರಗಳ ಅರ್ಜಿಗಳ ವಿಲೇವಾರಿ ಕುರಿತು ದಾಖಲೆಗಳನ್ನು ಪರಿಶೀಲಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.


