

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕದ 2025-26ರ ಸಾಲಿನ 17ನೇ ವಾರ್ಷಿಕ ಮಹಾಸಭೆಯು 25-09-2026 ರಂದು ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರ, ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದಲ್ಲಿ ಶ್ರೀಮತಿ ರಶ್ಮಿ ಎಸ್ ಆರ್, ಕುಂದಾಪುರ ಉಪವಿಭಾಗಾಧಿಕಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ರಕ್ತ ನಿಧಿ ಕೇಂದ್ರದ ಸಿಬ್ಬಂದಿಯವರ ಪ್ರಾರ್ಥನೆಯ ಮೂಲಕ ಮಹಾಸಭೆ ಪ್ರಾರಂಭವಾಯಿತು. ಉಪ ಸಭಾಪತಿ ಡಾ. ಉಮೇಶ ಪುತ್ರನ್ ಆಗಮಿಸಿದ ಅತಿಥಿಗಳನ್ನು, ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿಯವರು ಪ್ರಾಸ್ತಾವಿಕ ಭಾಷಣದಲ್ಲಿ ರೆಡ್ ಕ್ರಾಸ್ ಕುಂದಾಪುರ ತಾಲೂಕು ಘಟಕ ಸಾಧಿಸಿದ ಮೈಲುಗಲ್ಲುಗಳ ಬಗ್ಗೆ ವಿವರ ನೀಡಿದರು ಹಾಗೂ ಕನಸಿನ ಯೋಜನೆಯಾದ ” ರೆಡ್ ಕ್ರಾಸ್ ಹೋಮ್ ಫಾರ್ ಸೀನಿಯರ್ ಸಿಟಿಜನ್ಸ್” ಇದರ ಪ್ರಗತಿಯ ಕುರಿತು ಪ್ರಸ್ತಾಪಿಸಿದರು.
ಗೌರವ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ 2025-26ರ ವಾರ್ಷಿಕ ಆಡಳಿತಾತ್ಮಕ ವರದಿ ಮಂಡಿಸಿ, ಅನುಮೋದನೆ ಪಡೆದರು. ಗೌರವ ಖಜಾಂಜಿ ಶ್ರೀ ಶಿವರಾಮ ಶೆಟ್ಟಿಯವರು 2025-26ರ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿ, ಅನುಮೋದನೆ ಪಡೆದರು. ಮತ್ತು 2026-27 ರ ಬಜೆಟ್ ಮಂಡಿಸಿ, ಅನುಮೋದನೆ ಪಡೆದರು.
ಸಮಾರಂಭದ ಅಧ್ಯಕ್ಷರಾದ, ಕುಂದಾಪುರ ಉಪವಿಭಾಗಾಧಿಕಾರಿ ಶ್ರೀಮತಿ ರಶ್ಮಿ ಎಸ್ ಆರ್ ಮಾತನಾಡುತ್ತಾ, ಈಗ ಇರುವ ಆಡಳಿತ ಮಂಡಳಿಯ ಸೇವಾ ಸಮರ್ಪಣಾ ಮನೋಭಾವ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಇದರಿಂದ ಕುಂದಾಪುರದ ಸುತ್ತ ಮುತ್ತಲಿನ ಜನಸಾಮಾನ್ಯರು ಉಪಯೋಗ ಪಡೆದುಕೊಳ್ಳುವಂತಾಯಿತು. ಇಂತಹ ಸಂಸ್ಥೆಯ ಕಾರ್ಯ ವೈಖರಿಯೇ ಒಂದು ಸ್ಪೂರ್ತಿ. ಉತ್ತಮ ಯೋಜನೆಯ ಜೊತೆ ತಾನು ಸದಾ ಇದ್ದೇನೆ ಎಂದು ಸಭೆಯನ್ನು ಉದ್ದೇಶಿಸಿ ತಿಳಿಸಿದರು. ಉತ್ತಮ, ಉದಾತ್ತ ಯೋಜನೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಸದಸ್ಯರಿಗೆ ವಿನಂತಿ ಮಾಡಿದರು. ಈಗಾಗಲೇ ಧನ ಸಹಾಯ ಮಾಡಿದ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.
ಗೌರವ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಪುರಾಣಿಕ ಆಗಮಿಸಿದ ಅತಿಥಿ ಗಣ್ಯರಿಗೆ, ಪೋಷಕ, ಉಪ ಪೋಷಕ, ಆಜೀವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.



