

ಕುಂದಾಪುರ, ಸೆ.25: ಶಾರ್ಜಾದಲ್ಲಿ ಅಮಾನವೀಯ ಅತ್ಯಂತ ಕ್ರೂರವಾಗಿ ಹತ್ಯೆಗೀಡಾದ ಕುಂದಾಪುರ ನಗರದ ಹೊನ್ನನಕೇರಿ ನಿವಾಸಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ಅವರ ಮೂಲ ಮನೆಗೆ ತಲುಪಿತು, ಈ ವೇಳೆ ಕುಟುಂಬಸ್ಥರು, ಬಂಧುಗಳು ಹಾಗೂ ಇತರ ಜನರು ಸೇರಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತು. ಕುಟುಂಬಸ್ಥರು ಹಾಗೂ ಬಂಧು-ಬಳಗದವರು ದುಃಖತಪ್ತರಾದರು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಆಪ್ತರು ಅಂತಿಮ ದರ್ಶನ ಪಡೆದು ಮೃತರಿಗೆ ಗೌರವ ಸಲ್ಲಿಸಿದರು.
ನಿವಾಸದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಲ್ವಿನ್ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರು ಹಾಗೂ ಬಂಧುಗಳು ಕಂಬನಿ ಮಿಡಿದರು. ದುಃಖದ ವಾತಾವರಣದಲ್ಲಿ ಅಂತಿಮ ದರ್ಶನದ ವೇಳೆ ಕುಟುಂಬಸ್ಥರ ರೋದನ ಮನಕಲಕುವಂತಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮನೆಗೆ ಭೇಟಿ ನೀಡಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಜೊತೆಗೆ ಈ ಸಂದರ್ಭದಲ್ಲಿ ದುಖತಪ್ತ ಕುಟುಂಬಸ್ಥರನ್ನು ಹಾಗೂ ಬಂಧುಗಳನ್ನು ಸಾಂತ್ವಾನ ನೀಡಿದರು. ಈ ವೇಳೆಯಲ್ಲಿ ಕಾಂಗ್ರೆಸ್ ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ ಎ ಗಫೂರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅವರ ಗ್ರಹದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ, ಶಾಸ್ತ್ರಿ ಸರ್ಕಲ್ ಹತ್ತಿರ ಇರುವ ಕುಂದಾಪುರ ಪ್ರೊಟೆಸ್ಟಂಟ್ ಸಿ.ಎಸ್.ಐ. ಕೃಪಾ ಚರ್ಚಿಗೆ ಸಂಬಂಧ ಪಟ್ಟ ದಫನ ಭೂಮಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಂದಾಪುರ ಪ್ರೊಟೆಸ್ಟಂಟ್ ಸಿ.ಎಸ್.ಐ. ಕೃಪಾ ಚರ್ಚ್ ಮೂಲದಿಂದ ತಿಳಿಸಲ್ಪಟ್ಟಿದೆ.


