


ಶ್ರೀನಿವಾಸಪುರ, ಸೆ.28: ಬರ ಪರಿಹಾರ ಕಾಮಗಾರಿಗಳನ್ನು ಕೂಡಲೇ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಶ್ರೀನಿವಾಸಪುರ ತಾಲ್ಲೂಕು ಸಮಿತಿ ವತಿಯಿಂದ ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಸುಧೀಂದ್ರ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರೈತರು ಹಾಗೂ ಕೃಷಿ ಕೂಲಿಕಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ರೈತರು ಮತ್ತು ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ, ಕೆಲಸ ಪೂರ್ಣಗೊಂಡ ತಕ್ಷಣ ಕೂಲಿ ಪಾವತಿಸಬೇಕು ಎಂದು ಆಗ್ರಹಿಸಿದರು.
ರೈತರು ಬೆಳೆದಿರುವ ರಾಗಿ, ಹುರುಳಿ, ಟೊಮ್ಯಾಟೊ, ವಿವಿಧ ತರಕಾರಿ ಹಾಗೂ ಮಾವು ಸೇರಿದಂತೆ ಬೆಳೆಗಳಿಗೆ ಪಾವತಿಸಿರುವ ಬೆಳೆ ವಿಮೆ ಮೊತ್ತವನ್ನು ಅರ್ಹ ರೈತರಿಗೆ ತ್ವರಿತವಾಗಿ ದೊರಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಜನರು ಮತ್ತು ಜಾನುವಾರುಗಳಿಗೆ ಸಮರ್ಪಕ ನೀರು ಪೂರೈಸಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಹಾಗೂ ಪಶು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆಗೆ ಲಭ್ಯವಾಗಬೇಕಿರುವ ಕೃಷ್ಣಾ ನದಿ ನೀರು ಹಾಗೂ ಪಶ್ಚಿಮ ಘಟ್ಟಗಳಿಂದ ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು, ತಾಲೂಕಿನ ಕೆರೆಗಳಿಗೆ ವರ್ಷಕ್ಕೆ ಎರಡು ಬಾರಿ ನೀರು ತುಂಬಿಸುವ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಿ, ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಂಕೆ, ನವಿಲು, ಕಾಡುಹಂದಿ ಹಾಗೂ ಕೋತಿಗಳಿಂದ ರೈತರ ಬೆಳೆಗಳಿಗೆ ಆಗುತ್ತಿರುವ ಹಾನಿಯನ್ನು ತಡೆಗಟ್ಟಲು ಜಮೀನುಗಳಿಗೆ ಮುಳ್ಳುತಂತಿ ಬೇಲಿ ಅಳವಡಿಸಲು ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಕಾಡುಪ್ರಾಣಿಗಳ ಸಂರಕ್ಷಣೆಗಾಗಿ ಅರಣ್ಯ ಪ್ರದೇಶಗಳಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಾಲೂಕು ಕಚೇರಿಯಲ್ಲಿ ರೈತರು ತಮ್ಮ ಕೆಲಸಗಳಿಗಾಗಿ ವರ್ಷಗಟ್ಟಲೆ ಅಲೆದಾಡುವ ಪರಿಸ್ಥಿತಿಗೆ ಅಂತ್ಯ ಹಾಡಿ, ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು.
ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂದು ಕೆಪಿಆರ್ಎಸ್ ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಆರ್. ಸೂರ್ಯನಾರಾಯಣ, ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು, ರೈತರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

