HOLY ROSARY CHURCH, KUNDAPUR – 450 th JUBILEE SOUVENIR 2021

ನಿವೃತ್ತ ಶಿಕ್ಷಕ ಕೆ.ಕೊಗ್ಗ ಗಾಣಿಗ (71) ನಿಧನ

ಸ್ಥಳೀಯ ಮದ್ದುಗುಡ್ಡೆ ನಿವಾಸಿ ನಿವೃತ್ತ ಶಿಕ್ಷಕ, ಕೆ.ಕೊಗ್ಗ ಗಾಣಿಗ (71) ಅವರು ದಿನಾಂಕ17.08 22ರ ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.ಜಿಲ್ಲಾ ಸ್ಕೌಟ್ಸ್ ಎಂಡ್ ಗೈಡ್ ನ ಪ್ರಸ್ತುತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದ ಇವರು ಅಪಾರ ಶಿಕ್ಷಕ ವ್ರಂದ ಹಾಗೂ ಅಭಿಮಾನಿಗಳ ಸಹಿತ ಪತ್ನಿ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಲಯನ್ಸ್ ಕ್ಲಬ್ ಹಾಗೂ ಶ್ರೀ ನಂದಿಕೇಶ್ವರ ಯುವಕಮಂಡಲ ಅಸೋಡು ಜಂಟಿ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ಬೃಹತ್ ವನಮಹೋತ್ಸವ

ಲಯನ್ಸ್ ಕ್ಲಬ್ ಕುಂದಾಪುರ ಹಾಗೂ ಶ್ರೀ ನಂದಿಕೇಶ್ವರ ಯುವಕಮಂಡಲ ಅಸೋಡು ಇದರ ಜಂಟಿ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯ ಸಂಭ್ರಮದ ಸಂದರ್ಭದಲ್ಲಿ ಬೃಹತ್ ವನಮಹೋತ್ಸವ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಸೋಡಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕ್ಲಬಿನ ಅಧ್ಯಕ್ಷರಾದ ನವೀನ ಕುಮಾರ ಶೆಟ್ಟಿ ಹಾಗೂ ಯುವಕಮಂಡಲದ ಅಧ್ಯಕ್ಷರಾದ ಉಮೇಶ ಪೂಜಾರಿಯವರು ಗಿಡ ನೆಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಊರಿನ ಮಹನೀಯರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಸಿಗಳನ್ನು ನೀಡಲಾಯಿತು. ಲಯನ್ಸ್ ಕ್ಲಬಿನ ಕೋಶಾಧಿಕಾರಿ ಲ. ಶಂಕರ ಶೆಟ್ಟಿ, ಸದಸ್ಯರಾದ ಅಮರನಾಥ ಶೆಟ್ಟಿ, ನಾರಾಯಣ ಶೆಟ್ಟಿ, ರಾಜೀವ ಕೋಟ್ಯಾನ್, ಪ್ರಕಾಶ್ ಬೆಟ್ಟಿನ್ ಹಾಗೂ ಕ್ಲಬಿನ ಹಿರಿಯ ಸದಸ್ಯರು ಮತ್ತು ಸ್ಥಳೀಯ ಮುಖಂಡರಾದ ಲ. ಅಜಿತ ಕುಮಾರ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಘಟಿಸಿದರು. ಯುವಕಮಂಡಲದ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಶ್ರೀಮತಿ ಪಾರ್ವತಿ ಶೇರೆಗಾರ್, ರಘುರಾಮ ಶೆಟ್ಟಿ ಹಾಗೂ ಮುಖ್ಯೋಪಾದ್ಯಾಯರಾದ ಶ್ರೀಮತಿ ಗಾಯತ್ರಿ ಹಾಗೂ ಅದ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಮರಳು ಮಿಶ್ರಿತ ನಕಲಿ ಡಿ.ಎ.ಪಿ ಸೌಭಾಗ್ಯ (14:28:0) ರೈತರಿಗೆ ವಿತರಣೆ :ಕ್ರಿಮಿನಲ್ ಮೊಕದಮ್ಮೆ ದಾಖಲಿಸಲು ಆಗ್ರಹ

ವಕ್ಕಲೇರಿ ಆಗಸ್ಟ್-17, ಮರಳು ಮಿಶ್ರಿತ ನಕಲಿ ಡಿ.ಎ.ಪಿ ಸೌಭಾಗ್ಯ (14:28:0) ರೈತರಿಗೆ ವಿತರಣೆ ಮಾಡಿ ವಂಚನೆ ಮಾಡಿರುವ ಜೈ ಕಿಸಾನ್ ಜಂಕ್ಷನ್ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವಂತೆ ನೊಂದ ರೈತ ಹಾಗೂ ರೈತ ಸಂಘದಿಂದ ಅಂಗಡಿ ಮುಂದೆ ಹೋರಾಟ ಮಾಡಿ ಕೃಷಿ ಅಧಿಕಾರಿ ಸುನಿಲರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ವಕ್ಕಲೇರಿ ಹೋಬಳಿ ಶೆಟ್ಟಿಕೊತ್ತನೂರು ಗ್ರಾಮದ ರೈತ ಮುರಳಿ ತನ್ನ ಬೀನ್ಸ್ ತೋಟಕ್ಕೆ 1 ಮೂಟೆ ಡಿ.ಎ.ಪಿಯನ್ನು ಜೈ ಕಿಸಾನ್ ಪಾರ್ಮಹಬ್ ಅಂಗಡಿಯಲ್ಲಿ 1700 ಹಣ ನೀಡಿ ಖರೀದಿ ಮಾಡಿದ್ದ ಗೊಬ್ಬರ ತೋಟಕ್ಕೆ ಹಾಕುವಾಗ ಅನುಮಾನ ಬಂದು ನೀರಿನಲ್ಲಿ ಹಾಕಿ 10 ನಿಮಿಷ್ಯ ಬಿಟ್ಟರೆ ಸಂಪೂರ್ಣವಾಗಿ ಮರಳು ಮಿಶ್ರಿತವಾಗಿರುವುದು ಕಂಡು ಬಂದು ಗಾಬರಿಯಾಗಿ ಅಂಗಡಿ ಮಾಲೀಕನನ್ನು ಕೇಳಿದರೆ ಸರ್ಕಾರವೇ ರಸಗೊಬ್ಬರ ತಯಾರು ಮಾಡಲು ಶೇಕಡ 80 ರಷ್ಟು ಮರಳು ಮಿಶ್ರಿತ ಮಾಡಲು ಅವಕಾಶ ನೀಡಿದೆ. ಉಳಿದ 20 % ಅಮೋನಿಯಂ ಪಾಸ್ಪೆಟ್ ಮಾತ್ರ ಮಿಶ್ರಣ ಮಾಡಿ ರೈತರಿಗೆ ಮಾರಾಟ ಮಾಡಲು ಸೂಚನೆ ನೀಡಿರುವಾಗ ನೀನು ಯಾವ ಲೆಕ್ಕ ಸರ್ಕಾರವೇ ನಮ್ಮ ಪರವಾಗಿದೆ ಎಂದು ರೈತರ ಮೇಲೆ ದೌರ್ಜನ್ಯ ಮಾಡುತ್ತಾರೆಂದು ರೈತ ಮುರಳಿ ಕಣ್ಣೀರು ಹಾಕಿದರು.
ಸಂಬಂಧಪಟ್ಟ ಕೃಷಿ ಅಧಿಕಾರಿಗೆ ಕರೆ ಮಾಡಿದರೆ ನಾವು ಈಗಾಗಲೇ ರಸಗೊಬ್ಬರಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಗುಣಮಟ್ಟ ಇದೆ ಯಾವುದೇ ಕಾರಣಕ್ಕೂ ಕಂಪನಿಯವರ ತಪ್ಪಿಲ್ಲ ಎಂದು ಕಂಪನಿ ಪರ ಮಾತನಾಡುತ್ತಿದ್ದ ಕೃಷಿ ಅದಿಕಾರಯನ್ನು ತರಾಟೆಗೆ ತೆಗೆದುಕೊಂಡ ರೈತ ತಾವು ಕಟ್ಟುವ ತೆರಿಗೆ ಹಣದಲ್ಲಿ ಸಂಬಳ ಪಡೆದು ರೈತ ಪರ ನಿಲ್ಲದೆ ನಕಲಿ ಕಂಪನಿ ಪರ ನಿಲ್ಲುತ್ತೀಯ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳ ಮಾರಾಟ ಮಾಡುವ ಅಂಗಡಿ ಮತ್ತು ತಯಾರು ಮಾಡುವ ಕಂಪನಿಗಳ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಲು ಕೃಷಿ ಸಚಿವರು ಸೂಚನೆ ನೀಡಿರುವ ಜೊತೆಗೆ ದಂದೆಯನ್ನು ತನಿಖೆ ಮಾಡಲು ಸಿ.ಬಿ.ಐಗೆ ಒಪ್ಪಿಸಿದರೆ ಅಧಿಕಾರಿಗಳೇ ನಕಲಿ ಕಂಪನಿಗಳ ಜೊತೆ ಶಾಮೀಲಾಗಿ ರೈತರ ಮರಣ ಶಾಸನವನ್ನು ಬರೆಯುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಟೆಮೋಟೋ ಮತ್ತಿತರ ಬೆಳೆಗಳಿಗೆ ಬಾದಿಸುತ್ತಿರುವ ಬೀಕರ ರೋಗಗಳಿಗೆ ಮನೆಯಲ್ಲಿರುವ ಒಡವೆ ಅಡ ಇಡುವ ಜೊತೆಗೆ ಖಾಸಗಿ ಸಾಲ ಮಾಡಿ ಖರೀದಿ ಮಾಡಿ ಸಿಂಪಡಣೆ ಮಾಡುವ ಔಷಧಿಗಳಿಂದ ರೋಗ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಕಣ್ಣು ಮುಂದೆಯೇ ಬೆಳೆ ನಾಶವಾದಾಗ ಅಧಿಕಾರಿಗಳ ಗಮನಕ್ಕೆ ತಂದೆ ವಿಜ್ಞಾನಿಗಳ ಕಡೆ ಬೆರಳು ತೋರಿಸಿ ಕಂಪನಿಗಳ ಜೊತೆ ಶಾಮೀಲಾಗುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ಕಿಡಿಕಾಡಿದರು.
ರೈತ ಕೊಳ್ಳುವ ಡಿ.ಎ.ಪಿ ಮತ್ತಿತರ ರಸಗೊಬ್ಬರಗಳಲ್ಲಿ 50 ಕೆ.ಜಿ.ಗೆ 38 ಕೆ.ಜಿ ಮರಳು ಮಿಶ್ರಿತ ಮಣ್ಣು ಮಿಶ್ರಣ ಮಾಡುವ ಜೊತೆಗೆ ಕಳಪೆ ಔಷಧಿ ಲೇಪಣ ಮಾಡಿ ರೈತರಿಗೆ ನೀಡುತ್ತಿದ್ದಾರೆ. ಇದರಬಗ್ಗೆ ರೈತರಿಗೆ ಜಾಗೃತಿ ಮೂಡಿದೆ ರಸಗೊಬ್ಬ ರ ಕಂಪನಿಯವರು ಸರ್ಕಾರವನ್ನು ದಿಕ್ಕು ತಪ್ಪಿಸಿ ರೈತರ ಹೆಸರಿನಲ್ಲಿ ಸಾವಿರಾರು ಕೋಟಿ ಸಬ್ಸಿಡಿ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಮರಳು ಮಿಶ್ರಿತ ಹೊರೆತು ಪಡಿಸಿ ಹುಂಗೆ ಅಥವಾ ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿದರೆ ಭೂಮಿಯ ಫವತ್ತತೆ ಹೆಚ್ಚುತ್ತದೆ ಯಾಕೆಂದರೆ ಪ್ರಕೃತಿ ದತ್ತವಾಗಿ ದೊರೆಯುವ ಮರಳನ್ನೇ ಗೊಬ್ಬರವೆಂದು ರೈತರನ್ನು ನಂಬಿಸಿ ಖಾಸಗಿ ಸಾಲಕ್ಕೆ ಸಿಲುಕಿಸಿ ಆತ್ಮಹತ್ಯೆಯತ್ತ ರೈತರನ್ನು ತಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ಕೃಷಿ ಅಧಿಕಾರಿ ಸುನಿಲ್ ಮಾತನಾಡಿ ಅಂಗಡಿಯ ಸಂಪೂರ್ಣ ದಾಸ್ತಾನು ಸೀಜ್ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ರೈತರಿಗೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಮಾಲೂರು ತಾ.ಅಧ್ಯಕ್ಷ ಯಲ್ಲಣ್ಣ, ರಾಮಪ್ಪ, ಲಕ್ಷ್ಮಣ್, ನಾರಾಯಣಸ್ವಾಮಿ, ಕುವಣ್ಣ, ಮಂಗಸಂದ್ರ ತಿಮ್ಮಣ್ಣ, ಮುಂತಾದವರು ಇದ್ದರು.

ಕುಂದಾಪುರ ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರ್ಯೋತ್ಸವವ

ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇದರ ವತಿಯಿಂದ ಭಂಡಾರಕಾರ್ಸ್ ಕಾಲೇಜಿನ ಕೋಯಾಕುಟ್ಟಿ – ಲಯನ್ಸ್ ಹಾಲ್‍ನ ಎದುರುಗಡೆ 75ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕ್ಲಬಿನ ಅಧ್ಯಕ್ಷರಾದ ನವೀನ ಕುಮಾರ ಶೆಟ್ಟಿಯವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನದ ಕುರಿತು ಮಾತನಾಡಿದರು. ಮಾಜಿ ಲಯನ್ಸ್ ಗವರ್ನರಗಳಾದ ಕೆ. ಜಯಕರ ಶೆಟ್ಟಿ ಹಾಗೂ ಪ್ರಕಾಶ ಟಿ. ಸೋನ್ಸ್‍ರವರು ಸ್ವಾತಂತ್ರ ದಿನದ ಮಹತ್ವವನ್ನು ವಿವರಿಸಿದರು. ಲ. ರಾಜೀವ ಕೋಟ್ಯಾನ್‍ರವರು ಸಿಹಿತಿಂಡಿ ವಿತರಿಸಿದರು. ಲ. ಶಂಕರ ಶೆಟ್ಟಿಯವರು ಕೃತಜ್ಞತೆ ಅರ್ಪಿಸಿದರು.

ಚೈತನ್ಯ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬಿನ ಜಂಟಿ ಆಶ್ರಯದಲ್ಲಿ ಆಚರಣೆ

ಕುಂದಾಪುರ: ಚೈತನ್ಯ ವಿಶೇಷ ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಲಯನ್ಸ್ ಕ್ಲಬಿನ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಕ್ಲಬಿನ ಹಿರಿಯ ಸದಸ್ಯ ಲ.ಬಿ. ನಾರಾಯಣ ಶೆಟ್ಟಿಯವರು ಧ್ವಜಾರೋಹಣವನ್ನು ಮಾಡಿದರು. ಕ್ಲಬಿನ ಅಧ್ಯಕ್ಷ ನವೀನ ಕುಮಾರ ಶೆಟ್ಟಿ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ನೀಡಿದರು. ಲಯನ್ ಚಂದ್ರಶೇಖರ ಕಲ್ಪತರು ದಂಪತಿಗಳು ರೂ. 25,000 ಮೌಲ್ಯದ ಸಮವಸ್ತ್ರವನ್ನು ಶಾಲೆಯ ಮಕ್ಕಳಿಗೆ ವಿತರಿಸಿದರು. ಲ. ರಾಜೀವ ಕೋಟ್ಯಾನ್ ಸಿಹಿತಿಂಡಿ ವಿತರಿಸಿದರು. ಕ್ಲಬಿನ ಕೋಶಾಧಿಕಾರಿ ಲ. ಶಂಕರ ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಸುರೇಂದ್ರ ಶೆಟ್ಟಿ, ಸಂತೋಷ ಕುಮಾರ ಶೆಟ್ಟಿ, ಅಮರನಾಥ ಶೆಟ್ಟಿ , ಪಿಡಿಜಿ ಪ್ರಕಾಶ ಸೋನ್ಸ್, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಶೋಭಾ ಸೋನ್ಸ್, ಕಾರ್ಯದರ್ಶಿ ಶ್ರೀಮತಿ ಸುಜಾತಾ ನಕ್ಕತ್ತಾಯ, ಸದಸ್ಯರಾದ ಶ್ರೀಮತಿ ವತ್ಸಲಾ ಶೆಟ್ಟಿ, ಶ್ರೀಮತಿ ಅನುರಾಧ ಯು. ಭಟ್ ಹಾಗೂ ಶ್ರೀಮತಿ ಜಯಶ್ರೀಯವರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಶ್ರೀನಿವಾಸಪುರ: ಬಂಧಿಸಲಾಗಿರುವ ರೈತರನ್ನು,ರೈತ ಮುಖಂಡರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ

ಶ್ರೀನಿವಾಸಪುರ: ಬಂಧಿಸಲಾಗಿರುವ ರೈತ ಮುಖಂಡರು ಹಾಗೂ ರೈತರನ್ನು ಬಿಡುಗಡೆ ಮಾಡುವಂತೆ ಸರ್ಕಾರನ್ನು ಆಗ್ರಹಿಸಿ, ಸಂಯುಕ್ತ ಹೋರಾಟ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪ್ರತಭಟನೆ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರೈತರ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನೀತಿ ಖಂಡಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದ ಕೆಪಿಆರ್‍ಎಸ್ ರಾಜ್ಯಾಧ್ಯಕ್ಷ ಜೆ.ಸಿ.ಬೈಯ್ಯಾರೆಡ್ಡಿ, ಭೂ ಸಂತ್ರಸ್ತ ಹೋರಾಟ ಸಮಿತಿ ಸಂಚಾಲಕ ಚಂದ್ರತೇಜಸ್ವಿ, ದಲಿತ ಮುಖಂಡ ಶ್ರೀನಿವಾಸ್ ಅವರನ್ನು ಬಿಜೆಪಿ ಸರ್ಕಾರದ ಕುತಂತ್ರದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತ 1700 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನೀತಿ ವಿರುದ್ಧ 135 ದಿನಗಳಿಂದ ಧರಣಿ ನಡೆಸಲಾಗುತ್ತಿತ್ತು. ಜನಪರ ಸಂಘಟನೆಗಳ ನೇತೃತ್ವ ವಹಿಸಿದ್ದಕ್ಕಾಗಿ ಮುಖಂಡರನ್ನು ಬಂಧಿಸಲಾಗಿದೆ. ಬಂಧಿತರನ್ನು ಧೂಳು ತುಂಬಿದ ಗೋಡನ್ ಒಂದರಲ್ಲಿ ಇರಿಸಿದ್ದಾರೆ ಎಂದು ಹೇಳಿದರು.
ಸರ್ಕಾರದ ಧೋರಣೆ ಖಂಡಿಸಿ, ಹೋರಾಟ ನಿರತ ರೈತರು ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಸಂದರ್ಭದಲ್ಲಿ ಒಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸರ್ಕಾರ ಹೋರಾಟ ಧಮನಿಸಲು ಮುಖಂಡರ ಬಂಧನ ಮಾಡಿದೆ ಎಂದು ಹೇಳಿದರು.
ಜಿಲ್ಲಾ ಕೆಪಿಆರ್‍ಎಸ್ ಘಟಕದ ಉಪಾಧ್ಯಕ್ಷ ಪಾತಕೋಟೆ ನವೀನ್ ಕುಮಾರ್ ಮಾತನಾಡಿ, ರೈತ ಮುಖಂಡರನ್ನು ಅಕ್ರಮವಾಗಿ ಬಂಧಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರೈತರ ಮೇಲೆ ಹೂಡಲಾಗಿದೆ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಫಲವತ್ತಾದ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಶಿರಸ್ತೇದಾರ್ ಮನೋಹರ ಮಾನೆ ಅವರಿಗೆ ನೀಡಲಾಯಿತು.
ಮುಖಂಡರಾದ ಎನ್.ವೀರಪ್ಪರೆಡ್ಡಿ, ಎನ್.ಜಿ.ಶ್ರೀರಾಮರೆಡ್ಡಿ, ಬಿ.ಎಸ್.ಸೈಯದ್ ಫಾರೂಕ್, ಅಸ್ಲಂಪಾಷ, ಆರ್.ವೆಂಕಟೇಶ್, ವೆಂಕಟಲಕ್ಷ್ಮಮ್ಮ ಮತ್ತಿತರರು ಇದ್ದರು.

ಪಥಸಂಚಲನದಲ್ಲಿ ಭಾಗವಹಿಸಿದ ಗೃಹರಕ್ಷಕರ ತಂಡಗಳಿಗೆ ಬಹುಮಾನ

ಕೋಲಾರ : 75 ನೇ ಸ್ವಾತಂತ್ರ್ಯವ ಅಮೃತ ಮಹೋತ್ಸವ ಅಂಗವಾಗಿ ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಕವಾಯತ್‌ನಲ್ಲಿ ಸಮಾದೇಷ್ಟ ಹಾಗೂ ಉಪ ಸಮಾದೇಷ್ಟರ ಮಾರ್ಗದರ್ಶನಲ್ಲಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಒಟ್ಟು 5 ಗೃಹರಕ್ಷಕರ ತಂಡ ಪದಸಂಚಲನದಲ್ಲಿ ಪಾಲ್ಗೊಂಡಿದ್ದು ಈ ಪೈಕಿ 4 ತಂಡಗಳು ಬಹುಮಾನಗಳನ್ನು ಪಡೆದಿರುತ್ತದೆ . ನಂ.39-436 ಇವುಗಳಲ್ಲಿ ಪುರುಷರ ತಂಡಗಳು ಪ್ರಥಮ ಬಹುಮಾನ , ಪ್ರವಾಸೋದ್ಯಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ತಂಡವು ದ್ವಿತೀಯ ಬಹುಮಾನವನ್ನು ಹಾಗೂ ಕೆ.ಜಿ.ಎಫ್ ಪ್ರದೇಶದ ಪುರುಷರ ತಂಡ ಮತ್ತು ಮಹಿಳೆಯ ತಂಡ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ . ಕೋಲಾರ ನಗರ ಮತ್ತು ಕೆ.ಜಿ.ಎಫ್ ಪ್ರದೇಶದ ಪಥಸಂಚಲನದಲ್ಲಿ ಭಾಗವಹಿಸಿ ಯಶಸ್ವಿಗೆ ಪಾತ್ರರಾದ ಎಲ್ಲಾ ಗೃಹರಕ್ಷಕರಿಗೆ ಸಮಾದೇಷ್ಟರಾದ ಕೆ.ಆರ್.ಕಿರಣ್ ಕುಮಾರ್ , ಉಪ ಸಮಾದೇಷ್ಟರಾದ ಆರ್.ರಾಜೇಂದ್ರನ್ , ಸೆಕೆಂಡ್ ಇನ್ ಕಮಾಂಡರ್ ಎಸ್.ಮಾರುತಿ , ಪಟೂನ್ ಕಮಾಂಡರ್ ಎನ್.ಗೋವಿಂದರಾಜು , ಜಿ.ಎಸ್.ದಿಲೀಪ್ ಕುಮಾರ್ ಸೇರಿದಂತೆ ಮತ್ತಿತರರು ಅಭಿನಂದನೆ ಸಲ್ಲಿಸಿದರು.

ಕೋಲಾರ: ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮ ಕೋಲಾರ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಲಿಮ್ಕಾ ದಾಖಲೆ

ಕೋಲಾರ: ಸ್ವಾತಂತ್ರ್ಯದ 75 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಇಂದು ಕೋಲಾರ ಜಿಲ್ಲೆಯಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ಲಿಮ್ಕಾ ಪುಸ್ತಕದಲ್ಲಿ ದಾಖಲೆ ನಿರ್ಮಿಸಲಾಯಿತು . 76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಕೋಲಾರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿದಲಾಗಿದ್ದ ಸಮಾರಂಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಹರ್ ಘರ್ ತಿರಂಗಾ ಅಭಿಯಾನದ ಕರೆಗೆ ಓಗೊಟ್ಟು ಕೋಲಾರ ಸಂಸದರಾದ ಎಸ್.ಮುನಿಸ್ವಾಮಿ ಅವರ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಕ್ರೀಡಾಂಗಣದ ಉದ್ದಗಲಕ್ಕೂ ಪ್ರದರ್ಶಿಸಲಾಯಿತು . ಈ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ರಕ್ಷಣಾ ಇಲಾಖೆಯ ಸೇನಾ ವಿಮಾನದಿಂದ ಪುಷ್ಪವೃಷ್ಠಿ ಸಲ್ಲಿಸಲಾಯಿತು . ಆ ಕ್ಷಣದಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮದ ಹರ್ಷೋದ್ಗಾರ ಎಲ್ಲೆಮೀರಿತ್ತು . ನಮ್ಮ ಧ್ವಜ ನಮ್ಮ ಹೆಮ್ಮೆ , ಭಾರತ ಮಾತೆಗೆ ಜೈಕಾರ ಸೇರಿದಂತೆ ದೇಶಪ್ರೇಮದ ಘೋಷಣೆಗಳನ್ನು ಕೂಗಿದರು . ಸಹಸ್ರಾರು ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದ ಶಾಲಾ ಮಕ್ಕಳು ಸಂತಸದಿಂದ ಕುಣಿದಾಡಿದರು . ತೋಟಗಾರಿಕೆ , ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ , ಸೇರಿದಂತೆ ಎಲ್ಲ ಜನಪ್ರತಿನಿಧಿಗಳು , ಅಧಿಕಾರಿಗಳು ಸಹ ಧ್ವಜಾರೋಹಣ ವೇದಿಕೆಯ ಮೇಲೆ ಸೇರಿಕೊಂಡು ಬೃಹತ್ ಬಾವುಟವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
205 * 630 ಅಡಿ ವಿಸ್ತೀರ್ಣವನ್ನು ಹೊಂದಿದ ರಾಷ್ಟ್ರಧ್ವಜವು ಒಟ್ಟು 1.29 ಲಕ್ಷ ಚದರ ಅಡಿ ಇದ್ದು , ಅದರಲ್ಲಿ 3,600 ಚದರಡಿಯ ಅಶೋಕ ಚಕ್ರವನ್ನು ರೂಪಿಸಲಾಗಿದೆ . ಈ ಬಾವುಟ ತಯಾರಿಸಲು ಸುಮಾರು 12,800 ಮೀಟರ್‌ ಬಟ್ಟೆ ಬಳಸಲಾಗಿದ್ದು , 3,200 ಕೆ.ಜಿ ತೂಕ ಹೊಂದಿದೆ . ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ , ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ , ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು , ನಸೀರ್ ಅಹಮದ್ , ಎಂ.ಎಲ್ ಅನಿಲ್ ಕುಮಾರ್‌ , ನಗರಸಭೆ ಅಧ್ಯಕ್ಷರಾದ ಶ್ವೇತಾಶಬರೀಶ್ , ಜಿಲ್ಲಾಧಿಕಾರಿ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ , ಅಪರ ಜಿಲ್ಲಾಧಿಕಾರಿ ಡಾ | ಸ್ನೇಹಾ ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದಿಂದ ಮನೆ ಮನೆಗೂ ತ್ರಿವರ್ಣ ಧ್ವಜ ಕಾರ್ಯಕ್ರಮ: ಮಾಜಿ ಯೋಧರಿಗೆ ಸೌಲಭ್ಯ ಸವಲತ್ತು ಸಿಗುವಂತೆ ಮಾಡಿ : ಮಾಜಿ ಯೋಧ ರಹಮತ್ ಉಲ್ಲಾ

ಕೋಲಾರ: ಮಾಜಿ ಯೋಧರಿಗೆ ಸರಕಾರವೇ ಘೋಷಿಸಿರುವ ಸೌಲಭ್ಯ ಮತ್ತು ಸಲವತ್ತುಗಳು ಸಮರ್ಪಕವಾಗಿ ಸಿಗುತ್ತಿಲ್ಲ, ಸ್ವಾತಂತ್ರ‍್ಯ ಅಮೃತಮಹೋತ್ಸವ ಆಚರಿಸುತ್ತಿರುವ ಈಗಲಾದರೂ ಎಲ್ಲಾ ಮಾಜಿ ಯೋಧರಿಗೆ ಸೌಲಭ್ಯ ಸವಲತ್ತುಗಳು ಸಿಗುವಂತಾಗಲಿ ಎಂದು ಮಾಜಿ ಯೋಧ ರಹಮತ್ ಉಲ್ಲಾ ಮನವಿ ಮಾಡಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯದ 75ನೇ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಗೆ ತ್ರಿವರ್ಣ ಧ್ವಜ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಹಾಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಕುರಿತು ಭಾರತ ಸೇವಾದಳದ ಸಹಯೋಗದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಹದಿನೆಂಟು ವಯಸ್ಸಿಗೆ ಸೇನೆಗೆ ಸೇರಿ ಮೂರು ಯುದ್ಧಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ, ನಿವೃತ್ತರಾಗಿ ೪೫ ವರ್ಷ ಕಳೆದರೂ ತಮಗೆ ಇಂದಿಗೂ ನಿವೇಶನ ಜಮೀನು ಸಿಕ್ಕಿಲ್ಲ, ಇದು ತಮ್ಮೊಬ್ಬರ ಕಥೆಯಲ್ಲ, ಬಹುತೇಕ ಮಾಜಿ ಯೋಧರ ವ್ಯಥೆಯಾಗಿದೆ, ಇದನ್ನು ಬಗೆಹರಿಸಲು ಸರಕಾರ, ಜಿಲ್ಲಾಡಳಿತ ಮುಂದಾಗಬೇಕು, ಪತ್ರಕರ್ತರು ಸಹಕರಿಸಬೇಕೆಂದು ಕೋರಿದರು.

ಒಮ್ಮೆ ಕಾರ್ಪೊರೇಟರ್ ಆದರೆ ಸಾಕು ಅವರಿಗೆ ಹಾರ ಹಾಕಿ ಕಾಲಿಗೆ ಬೀಳುತ್ತಾರೆ. ಆದರೆ, ದೇಶದ ರಕ್ಷಣೆಗಾಗಿ ಎಲ್ಲಾ ತ್ಯಾಗ ಮಾಡಿ ಗಡಿ ಕಾಯುವ ನಮ್ಮನ್ನು ಯಾರೂ ಕೇಳುವವರಿಲ್ಲ ಎಂದು ವ್ಯಕ್ತಪಡಿಸಿದರು.

ಸೇನೆಯಲ್ಲಿದ್ದಾಗ ಆಗ ಸಂಬಳ ನನಗೆ ತಿಂಗಳಿಗೆ 37 ಸಿಗುತಿತ್ತು. ಈಗ ಪಿಂಚಣಿ 15 ಸಾವಿರ ಸಿಗುತ್ತಿದೆ. ಉತ್ತಮ ಸೌಲಭ್ಯ, ಗೌರವ ಸಿಕ್ಕಿದರೆ ಹೆಚ್ಚಿನ ಜನ ಸೇನೆಗೆ ಹೋಗುತ್ತಾರೆ ಎಂದು ಹೇಳಿದರು.

ಹಿಂದೆ ಸೇನೆಯಲ್ಲಿ ಸತ್ತರೂ ಕುಟುಂಬದವರಿಗೆ, ಸಾರ್ವಜನಿಕರಿಗೆ ಹೇಳುತ್ತಿರಲಿಲ್ಲ. ಹೇಳಿದರೆ ಭಯಬಿದ್ದು ಸೇನೆಗೆ ಕಳುಹಿಸುವುದಿಲ್ಲ ಎಂಬ ಆತಂಕ. ಈಗ ತಕ್ಷಣವೇ ಮಾಹಿತಿ ಸಿಗುತ್ತದೆ ಎಂದರು.

ಮುಳಬಾಗಿಲಿನಲ್ಲಿ ನಾನು  1960ರಲ್ಲಿ ಸೇನೆ ಸೇರಿದೆ. 1962ರಲ್ಲಿ ಭಾರತ-ಚೀನಾ, 65ರಲ್ಲಿ ಭಾರತ-ಪಾಕಿಸ್ತಾನ, 1971ರಲ್ಲಿ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಪಾಲ್ಗೊಂಡಿದ್ದೆ. 1965 ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ವೇಳೆ ನಮ್ಮಲ್ಲಿ ಆಗ ಕಡಿಮೆ ಯೋಧರಿದ್ದರು. ಆದರೂ ಎದುರಾಳಿಯ 21 ಟ್ಯಾಂಕ್ ವಶಕ್ಕೆ ಪಡೆದೆವು.  1975ರಲ್ಲಿ ನಿವೃತ್ತನಾದೆ ಎಂದರು.

ಚೀನಾ ವಿರುದ್ಧದ ಯುದ್ಧದಲ್ಲಿ ಬಾಕ್ಸ್ನಲ್ಲಿ ನೀಡುತ್ತಿದ್ದ ಊಟವನ್ನು ಮೂರು ದಿನ ಇಟ್ಟುಕೊಂಡು ತಿನ್ನಬೇಕಿತ್ತು. ಒಂದು ಲೀಟರ್ ನೀರು ಕೊಡುತ್ತಿದ್ದರು. ಚೀನಾದ ಬಹಳ ಯೋಧರು ಸತ್ತರು ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ರಾಷ್ಟ್ರ ಧ್ವಜದ ಮಹತ್ವ, ಇತಿಹಾಸ, ಧ್ವಜ ಸಂಹಿತೆ, ಧ್ವಜಕ್ಕೆ ಕೊಡಬೇಕಾದ ಗೌರವ, ಪ್ರತಿ ನಾಗರೀಕರ ಕರ್ತವ್ಯ ಜವಾಬ್ದಾರಿಗಳ ಕುರಿತಂತೆ ಉಪನ್ಯಾಸ ನೀಡಿದರು.

ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸೈನಿಕರು ಕಷ್ಟಪಟ್ಟು ತಮ್ಮ ಪ್ರಾಣದ ಹಂಗನ್ನು ತೊರೆದು ಗಡಿ ಕಾಯುವುದರೊಂದಿಗೆ ಶತ್ರುಗಳಿಂದ ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆ. ಅಂತಹ ಸೈನಿಕರನ್ನೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಜಾಗೃತಿ, ಮಾಹಿತಿ ಹೋಗಿ ಬರೀ ಮನರಂಜನೆ ಮಾತ್ರ ಉಳಿದಿದೆ. ಯಾರನ್ನೋ ಇಂದ್ರ ಚಂದ್ರ ಎನ್ನುತ್ತೇವೆ. ನಿಜವಾದ ಇಂದ್ರಚಂದ್ರರು ರಹಮತ್ ಉಲ್ಲಾ ಅವರಂಥವರು ಎಂದರು.

ಸರ್ಕಾರಗಳು ಸಹ ಮಾಜಿ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ಭಾರತ ಸೇವಾದಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಾರತ ಸೇವಾದಳ ವತಿಯಿಂದ ಅತಿಥಿಗಳಿಗೆ ಧ್ವಜ ಸಂಹಿತೆ ಪುಸ್ತಕ ಮತ್ತು ಎಲ್ಲಾ ಪತ್ರಕರ್ತರಿಗೆ ರಾಷ್ಟ್ರ ಧ್ವಜಗಳನ್ನು ವಿತರಿಸಲಾಯಿತು.