HOLY ROSARY CHURCH, KUNDAPUR – 450 th JUBILEE SOUVENIR 2021

ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಮತಗಟ್ಟೆ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದುಕೊಂಡರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಮೈದಾನದಲ್ಲಿ ಸ್ಥಾಪಿಸಲಾಗಿರುವ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ನೇಮಿಸಲಾಗಿರುವ ಮತಗಟ್ಟೆ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದುಕೊಂಡರು.
  ಪಡೆದುಕೊಂಡ ಚುನಾವಣಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಕುಳಿತು ಪರಿಶೀಲನೆ ನಡೆಸಿದ ಬಳಿಕ, ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿದ್ದ ಭೋಜನ ಶಾಲೆಯಲ್ಲಿ ಊಟ ಮುಗಿಸಿಕೊಂಡು, ತಮಗಾಗಿ ಮೀಸಲಿಡಲಾಗಿದ್ದ ಬಸ್‌ಗಳಲ್ಲಿ ನಿಗದಿತ ಗ್ರಾಮಗಳ ಮತಗಟ್ಟೆಗಳಿಗೆ ತೆರಳಿದರು.    ತಾಲ್ಲೂಕಿಲ್ಲಿ ಚುನಾವಣೆ ನಡೆಯಲಿರುವ 23 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆ ಮತಗಟ್ಟೆಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು1265 ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತಗಟ್ಟೆಗಳ ರಕ್ಷಣೆ ಹಾಗೂ ಸುವ್ಯವಸ್ಥೆ ಪಾಲನೆಗೆ 350 ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ.  ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅವರ ಮಾರ್ಗದರ್ಶನದಲ್ಲಿ ಕಂದಾಯ ಹೋಬಳಿವಾರು ಕಂದಾಯ ನಿರೀಕ್ಷಕರು, ಶಿರಸ್ತೇದಾರರು, ರಿಟರ್ನಿಂಗ್‌ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿ ಚುನಾವಣಾ ಸಾಮಗ್ರಿ ವಿತರಣಾ ಕಾರ್ಯದಲ್ಲಿ ನೆರವಾದರು. ಮತಗಟ್ಟೆ ಸಿಬ್ಬಂದಿಗೆ ಏರ್ಪಡಿಸಲಾಗಿದ್ದ ಊಟದ ವ್ಯವಸ್ಥೆ ಮೆಚ್ಚುಗೆಗೆ ಪಾತ್ರವಾಯಿತು.

ಎಪಿಎಂಸಿ ಮಾರುಕಟ್ಟೆ ವರ್ತಕರು ಸೋಮವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಮಾರುಕಟ್ಟೆ ಬಂದ್‌ಗೆ ಬೆಂಬಲ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಎಪಿಎಂಸಿ ಮಾರುಕಟ್ಟೆ ವರ್ತಕರು ಸೋಮವಾರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಮಾರುಕಟ್ಟೆ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.
  ಬೆಳಿಗ್ಗೆ ಮಾರುಕಟ್ಟೆಗೆ ಆಗಮಿಸಿದ ವರ್ತಕರು, ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಬೆಂಕಿ ಹಾಕಿ ಲಾರಿಗಳು ಮಾರುಕಟ್ಟೆ ಪ್ರವೇಶಿಸುವುದನ್ನು ತಡೆದರು. ಅನಂತರ ಕೇಂದ್ರ  ಸರ್ಕಾರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆ ವಿರುದ್ಧ ಘೋಷಣೆ ಕೂಗಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.    ಈ ಸಂದರ್ಭದಲ್ಲಿ ಪ್ರತಿಭಟನ ನಿರತ ವರ್ತಕರನ್ನು ಉದ್ದೇಶಿಸಿ ಟೊಮೆಟೊ ವರ್ತಕರ ಸಂಘದ ಅಧ್ಯಕ್ಷ ಎಚ್‌.ರವೀಂದ್ರರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ಒಂದು ಒಪ್ಪಿತ ವ್ಯವಸ್ಥೆಯನ್ನು ಹಾಳುಗೆಡುವುತ್ತಿದೆ. ಮಾರುಕಟ್ಟೆ ಒಳಗೆ ಹಾಗೂ ಹೊರಗೆ ಶೇ.1ರಷ್ಟು ಸೆಸ್‌ ವಿಧಿಸುವುದರ ಮೂಲಕ ವ್ಯಾಪಾರಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಪಾದಿಸಿದರು.    ವರ್ತಕರಾದ ವೆಂಕಟರಾಮರೆಡ್ಡಿ, ದಿವಾಕರ್‌, ಸರ್ದಾರ್‌ ಪಾಷ, ವರದರಾಜು, ಶ್ರೀನಿವಾಸರೆಡ್ಡಿ, ಚಂದ್ರ, ಬಾಬು, ಬೈರೆಡ್ಡಿ, ಶಿವಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮೂಡ್ಲಕಟ್ಟೆ ಎಂ ಐ ಟಿ: ಪ್ರಾಡಕ್ಟ್ ಡೆವಲಪ್ಮೆಂಟ್ ವೆಬಿನಾರ್

JANANUDI.COM NETWORK


ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ “ಪ್ರಾಡಕ್ಟ್ ಡೆವಲಪ್ಮೆಂಟ್ & ಪೇಟೆಟಿಂಗ್” ವಿಷಯದ  ಮೇಲೆ ವೆಬಿನಾರ್ ನ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಅಮೇರಿಕಾದ ಕೂಪರ್ ಲೈಟಿಂಗ್ ಸೊಲ್ಯೂಷನ್ಸ್ ಕಂಪನಿಯ ಶ್ರೀ ಪ್ರವೀರ್ ಮಂಜಪ್ಪ ರವರು ಭಾಗವಹಿಸಿದ್ದರು.
ಶ್ರೀ ಪ್ರವೀರ್ ರವರು ತಮ್ಮದೇ ಕಂಪನಿಯ ಉತ್ಪನ್ನಗಳ ಅಭಿವೃದ್ಧಿ ಮತ್ತು ವಿನ್ಯಾಸಗಳ ಮಾಹಿತಿ ನೀಡುತ್ತಾ ಇಂಜಿನಿಯರ್ ಗಳಿಗೆ ಪೆಟೆಂಟ್ ಎಷ್ಟು ಪ್ರಾಮುಖ್ಯತೆ ಹೊಂದಿದೆ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಸಂಪನ್ಮೂಲ ವ್ಯಕ್ತಿಯೊಂದಿಗೆ ಪ್ರಶ್ನೆಯೊತ್ತರ  ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರರಾವ್ ಮದಾನೆ ಮತ್ತು ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ ರವರ ಉಪಸ್ಥಿತಿಯಲ್ಲಿ ಮೆಕ್ಯಾನಿಕಲ್  ವಿಭಾಗದ ಮುಖ್ಯಸ್ಥ ಪ್ರೊ ತಿಮ್ಮಪ್ಪ ಡಿ. ಎಸ್. ರವರು ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ರವರ 55ನೇ ಹುಟ್ಟುಹಬ್ಬಹಣ್ಣಿನ ಸಸಿ ನೆಡುವ ಮೂಲಕ ಸರಳವಾಗಿ ಆಚರಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ರವರ 55ನೇ ಹುಟ್ಟುಹಬ್ಬವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ರೂಪಶ್ರೀ ಮಂಜುನಾಥ್ ಮನೆಯ ಆವರಣದಲ್ಲಿ ಹಣ್ಣಿನ ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಬೆಗ್ಲಿ ಪ್ರಕಾಶ್, ಎಂ.ನಾರಾಯಣಸ್ವಾಮಿ, ಹಾಲಳ್ಳಿ ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಸಿ,ಎಸ್.ವೆಂಕಟೇಶ್, ಸದಸ್ಯೆ ರೋಪಶ್ರೀ ಮಂಜು, ನಗರಸಭೆ ಸದಸ್ಯ ಮಂಜುನಾಥ್ ಮಾಜಿ ಸದಸ್ಯರಾದ ಸಿ.ಸೋಮಶೇಖರ್, ವಿ.ಕೆ.ರಾಜೇಶ್, ಮುಖಂಡರಾದ ವಾಲ್ಮೀಕಿ ಮಂಜು, ಚಂದ್ರ ಪ್ರಕಾಶ್, ಮುಳ್ಳಹಳ್ಳಿ ಮಂಜುನಾಥ್, ಸೂಲೂರು ಅಶೋಕ್, ಬೆಳ್ಳೂರು ಸುರೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕಿ ಸರಸ್ವತಿ, ಶಾಂತಮ್ಮ, ಮಹೇಂದ್ರ ಗಾಣಿಗ, ಬಾಬಣ್ಣ, ವರ್ತೂರು ಪ್ರಕಾಶ್ ಮಕ್ಕಳಾದ ತೇಜಸ್, ಭರತ್, ನಿತೀನ್ ಮತ್ತಿತರರು ಹಾಜರಿದ್ದು ಹುಟ್ಟು ಹಬ್ಬಕ್ಕೆ ಶುಭಕೋರಿದರು.

ಪಿಂಚಣಿದಾರರಿಗೆ ಉತ್ತಮ ಗ್ರಾಹಕಸೇವೆ ಬ್ಯಾಂಕ್ ಜವಾಬ್ದಾರಿ-ರುಕ್ಮಿಣಿದೇವಿ ಬ್ಯಾಂಕ್‍ಗಳಿಂದಾಗುತ್ತಿರುವ ಸಮಸ್ಯೆ ಮೇಲಾಧಿಕಾರಿಗಳ ಗಮನಕ್ಕೆ-ಭರವಸೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸುದೀರ್ಘ ಸೇವೆಯ ನಂತರ ನಿವೃತ್ತರಾದ ನೌಕರರ ವಿಶ್ರಾಂತಿ ಜೀವನದಲ್ಲಿ ಅವರಿಗೆ ನೀಡುವ ಪಿಂಚಣಿಯಲ್ಲಿ ವ್ಯತ್ಯಾಸವಾಗದಂತೆ ಕ್ರಮವಹಿಸುವ ಅಗತ್ಯವಿದೆ, ಬ್ಯಾಂಕುಗಳಿಂದ ಆಗುತ್ತಿರುವ ತೊಂದರೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕಿ ಎನ್.ರುಕ್ಮಣಿದೇವಿ ತಿಳಿಸಿದರು.
ನಗರದ ಡಿಐಸಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಖಜಾನೆ ವತಿಯಿಂದ ನಡೆದ ಪಿಂಚಣಿ ಅದಾಲತ್‍ನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಂಚಣಿದಾರರ ಕುಂದುಕೊರತೆಗಳ ಕುರಿತು, ಬ್ಯಾಂಕ್‍ವತಿಯಿಂದ ಹೆಚ್ಚುವರಿ ಅಥವಾ ಕಡಿಮೆ ಪಾವತಿಸಿರುವುದು, ಮುಂತಾದ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರವು ಕೆಲ ಮಹತ್ತರ ನಿರ್ಣಯಗಳನ್ನು ಕೈಗೊಂಡಿದೆ ಎಂದರು.
ಪಿಂಚಣಿದಾರರ ಎಲ್ಲಾ ಮಾಹಿತಿಯನ್ನು ಖಜಾನೆ-2ರಲ್ಲಿ ಕ್ರೋಢೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಡಿಮೆ ಅಥವಾ ಹೆಚ್ಚುವರಿಯಾಗಿ ಪಾವತಿಸಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಆದೇಶಗಳನ್ನು ಹೊರಡಿಸಿದೆ. ಅದರಂತೆ ಖಜಾನೆಯಲ್ಲಿ ಹಂತಹಂತವಾಗಿ ಗಣಕೀಕರಣದ ಕಾರ್ಯವು ನಡೆಯುತ್ತಿದೆ. ಇದರಿಂದ ಪಿಂಚಣಿದಾರರ ಹಲವಾರು ತೊಂದರೆಗಳು ನಿವಾರಣೆ ಆಗುತ್ತದೆ ಎಂದು ಭರವಸೆ ನೀಡಿದರು.
ರಿಸರ್ವ್ ಬ್ಯಾಂಕ್ ಸೂಚನೆ ಮತ್ತು ಮಾರ್ಗಸೂಚಿಗಳನ್ವಯ ಬ್ಯಾಂಕ್‍ಗಳು ಪಿಂಚಣಿದಾರರಿಗೆ ಉತ್ತಮ ಹಾಗೂ ಆಧ್ಯತೆ ಮೇರೆಗೆ ಸೇವೆ ನೀಡಬೇಕಾಗುತ್ತದೆ. ಪಿಂಚಣಿದಾರರಿಗೆ ಪ್ರತ್ಯೇಕವಾದ ಪಿಂಚಣಿ ಖಾತೆಗಳನ್ನು ತೆರೆಯಲು ಹಾಗೂ ಇದರ ಬಗ್ಗೆ ಪ್ರಚಾರ ಮಾಡಲು ಬ್ಯಾಂಕ್ ಅಧಿಕಾರಿಗಳನ್ನು ಒತ್ತಾಯಿಸಿದರು.
ಸಾರ್ವಜನಿಕ ಸೇವೆ ಮಾಡಿ ನಿವೃತ್ತರಾದವರಿಗೆ ಅವರ ನಿವೃತ್ತ ಜೀವನದಲ್ಲಿ ತೊಂದರೆ ನೀಡುವುದು ಸರಿಯಲ್ಲ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯವಿದೆ, ಬ್ಯಾಂಕ್ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಬಾರದು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ, ನಿವೃತ್ತರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಇದೊಂದು ಉತ್ತಮ ಕಾರ್ಯಕ್ರಮವಾಗಿದೆ, ಇದನ್ನು ಯಶಸ್ವಿಗೊಳಿಸಿ ಹಾರೈಸಿ ಪಿಂಚಣಿದಾರರಿಗೆ ಒಳ್ಳಯ ಸೇವೆ ಸಿಗುವಂತಾಗಲಿ ಎಂದು ಹಾರೈಸಿದರು
ಪಿಂಚಣಿದಾರರ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷ ದೇವೀರಪ್ಪ, ಪಿಂಚಣಿದಾರರಿಗೆ ಬ್ಯಾಂಕುಗಳಿಂದ ಸಮರ್ಪಕ ಸೇವೆ ಸಿಗುತ್ತಿಲ್ಲ, ಕಾಲಕಾಲಕ್ಕೆ ಪಿಂಚಣಿ ಬಟವಾಡೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ದೂರಿ, ಬ್ಯಾಂಕುಗಳ ಪಿಂಚಣಿದಾರರ ಕುರಿತಾದ ನಿರ್ಲಕ್ಷ್ಯ ಧೋರಣೆ ಬದಲಿಸಬೇಕು ಎಂದು ಆಗ್ರಹಿಸಿದರು.
ಬಂಗಾರಪೇಟೆ ತಾಲ್ಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಪೆರುಮಾಳ್, ಬ್ಯಾಂಕ್‍ಗಳಿಗೆ ನಿವೃತ್ತಿದಾರರು ಹೋದಾಗ ಸರಿಯಾದ ಸೇವೆ ಸಿಗುತ್ತಿಲ್ಲ, ಬ್ಯಾಂಕ್‍ನವರಿಗೆ ಸ್ಥಳೀಯ ಭಾಷೆ ಗೊತ್ತಿಲ್ಲ, ಪಿಂಚಣಿದಾರರಿಗೆ ಪ್ರತ್ಯೇಕ ಸೇವಾ ಕೌಂಟರ್‍ಗಳನ್ನು ನೀಡುವ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಎಪ್ಪತ್ತು ವಯಸ್ಸಿನ ಪಿಂಚಣಿದಾರರಿಗೆ ಲೋನ್ ಸೌಲಭ್ಯವಿಲ್ಲ, ಕ್ಯೂನಲ್ಲಿ ಹಾಗೂ ಪಿಂಚಣಿ ಪಡೆಯಲು ಸಹ ಸಾಲಿನಲ್ಲಿ ನಿಲ್ಲಬೇಕು, ಆದುದರಿಂದ ವಯಸ್ಕರ ಸಲುವಾಗಿ ಪ್ರತ್ಯೇಕ ಸಾಲು ಹಾಗೂ ಕೌಂಟರ್‍ಗಳನ್ನು ಬ್ಯಾಂಕುಗಳಲ್ಲಿ ಸೌಲಭ್ಯ ಮಾಡಬೇಕಾಗಿ ಕೋರಿದರು.
ಸಹಾಯಕ ಖಜಾನಾಧಿಕಾರಿಗಳಾದ ಜೀವನ್, ಟಿ.ಎಂ.ನಾರಾಯಣರಾವ್ ಮಾತನಾಡಿ, ಪಿಂಚಣಿದರರಿಗೆ ಕುಂದುಕೊರತೆಗಳನ್ನು ನಿವಾರಿಸುವ ಪಿಂಚಣಿ ಅದಾಲತ್ ಅವಶ್ಯ ಮತ್ತು ಬ್ಯಾಂಕ್‍ನಿಂದ ಪಿಂಚಣಿದಾರರ ದಾಖಲೆ ಬಂದಾಗ ವಿಳಂಬ ಮಾಡದೇ ಕಳುಹಿಸಲು ಕ್ರಮವಹಿಸಬೇಕು ಎಂದು ಕೋರಿದರು.
ಮುಳಬಾಗಿಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಅಧಿಕಾರಿಗಳು ಮಾತನಾಡಿ, ನಿವೃತ್ತದಾರರಿಗೆ ಎಲ್ಲಾ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು ಹಾಗೂ ಸಿಬ್ಬಂದಿಯ ಕೊರತೆಯಿಂದ ಸೇವೆಯನ್ನು ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಖಜಾನೆ ಸಿಬ್ಬಂದಿ ಪ್ರಭಾಕರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಖಜಾನೆ ಸಹಾಯಕ ಖಜಾನಾಧಿಕಾರಿ ಚೈತ್ರ, ಖಜಾನೆಯ ಆರ್.ಅಶೋಕ್ ಕುಮಾರ್, ನಟೇಶ್, ಬ್ರಹ್ಮ, ಪಿಂಚಣಿದಾರರ ಸಂಘದ ಉಪಾಧ್ಯಕ್ಷ ನಾಗರಾಜ್ ಮತ್ತು ಪಿಂಚಣಿದಾರರು ಉಪಸ್ಥಿತರಿದ್ದರು
.

ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಆಶಾ ಭಾವನೆಯನ್ನು ಇಟ್ಟಿಕೊಳ್ಳಬೇಕು: ಎಸ್.ಮುನಿಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ:ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಆಶಾ ಭಾವನೆಯನ್ನು ಇಟ್ಟಿಕೊಳ್ಳಬೇಕು ಸೋಲು ಗೆಲವು ದೈವಾದೀನ ಭಯಪಡದೇ ಧೈರ್ಯದಿಂದ ಚುನಾವಣೆಯನ್ನು ಎದುರಿಸಬೇಕೆಂದು ಸಂಸದ ಎಸ್.ಮುನಿಸ್ವಾಮಿ ಅಭ್ಯರ್ಥಿಗಳಿಗೆ ಧೈರ್ಯವನ್ನು ತುಂಬಿದರು.
ಪಟ್ಟಣದ ಹೊರವಲಯದ ಖಾಸಗಿ ಶಾಲಾ ಅವರಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಹಾಗೂ ಪಕ್ಷದ ಸಂಘಟನೆಯ ಕುಂದು ಕೊರತೆಗಳ ಸಬೆಯಲ್ಲಿ ಭಾಗವಹಿಸಿ ಮಾತನಾಡಿದ ಎಸ್.ಮುನಿಸ್ವಾಮಿ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ನಿಂತಿರುವುದು ಅಭಿನಂದನ ವಿಷಯ ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಸಭಾ ಚುನಾವಣೆಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ದಿಕ್ಸುಚಿಯಾಗಿದೆ. ಸ್ವರ್ಧೆ ಮಾಡುವುದು ಬಹಳ ಮುಖ್ಯ ಸೋಲು ಗೆಲವು ದೈವಯತ್ನ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ದೃತಿಕೆಡದೆ ಯಾರಿಗೂ ಅಂಜದೆ. ನಿಮ್ಮ ಪ್ರಚಾರ ನೀವು ಮಾಡಿಕೊಳ್ಳಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮದೇ ಇದೆ ನಿಮ್ಮ ಬೆನ್ನೇಲಬಾಗಿ ನಮ್ಮ ಪಕ್ಷ ಇರುತ್ತದೆ ಎಂದರು ಇವರು ಗ್ರಾಮಗಳಲ್ಲಿ ಚರಂಡಿ, ಮೋರಿ ಕೆಲಸ, ವಿದ್ಯುತ್, ಕುಡಿಯುವ ನೀರು, ಈ ಸಮಸ್ಯಗಳು ಏನೇ ಇದ್ದರೂ ನೀವುಗಳು ಜನತೆಗೆ ಇವುಗಳ ನಿವಾರಣೆ ಮಾಡಲು ಭರವಸೆಯನ್ನು ನೀಡಿ ಈ ಸಮಸ್ಯೆಗಳ ಪಟ್ಟಿ ನನ್ನ ಗಮನಕ್ಕೆ ತಂದರೆ ನಾನು ಇವುಗಳನ್ನು ವ್ಯವಸ್ಥೆ ಮಾಡಿಕೊಡಲು ಸಿದ್ದನಾಗಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಜನಪರ ಯೋಜನೆಗಳಾದ ಅಯಷ್‍ಮಾನ್ ಭಾರತ್, ಬಾಲ ಸಂಜೀವಿನಿ, ಜನಧನ ಯೋಜನೆ, ಉಜ್ವಲಯೋಜನೆ, ಕಿಸಾನ್ ಯೋಜನೆ, ಇನ್ನೀತರೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಿರುವುದು ನಮಗೆ ಶ್ರೀರಕ್ಷೆಯಾಗಿದೆ ಎಂದರು.
ವಿಧಾನ ಪರಿಷತ್ ವೈ.ಎ. ನಾರಾಯಣಸ್ವಾಮಿ ಮಾತನಾಡಿ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಕೇವಲ ಹಣ ಖರ್ಚುಮಾಡಿದರೆ ಸಾಲದು ಸ್ವಂತ ವ್ಯಕ್ತಿತ್ವ, ಸಜ್ಜನಿಕೆ, ನಡೆ ನುಡಿ ಬಹಳ ಮುಖ್ಯ ಇವುಗಳನ್ನು ಅಭ್ಯರ್ಥಿಗಳು ಮೈಗೂಡಿಸಕೊಳ್ಳಬೇಕು ಗ್ರಾಮ ಪಂಚಾಯಿತಿಯ ಚುನಾವಣಾ ಕಣದಲ್ಲಿ ಸುಮಾರು 150 ಮಂದಿ ನಿಂತಿರುವುದು ಸಾಮಾನ್ಯ ವಿಷಯವಲ್ಲ ಮುಂಬರುವ ಚುನಾವಣೆಗಳಿಗೆ ಈ ಚುನಾವಣೆಯ ಫಲಿತಾಂಶ ಸ್ಪೂರ್ತಿಯಾಗಿದೆ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟಿಕೊಂಡು ಧೈೈರ್ಯವಾಗಿ ಚುನಾವಣೆಯನ್ನು ಎದುರಿಸಿ ಯಾವುದೇ ಪಕ್ಷ, ವ್ಯಕ್ತಿಗಳಿಗೆ ನೀವು ಬಯಪಡುವ ಅಗತ್ಯವಿಲ್ಲ ಈ ದೇಶದ ವ್ಯವಸ್ಥೆ ನಮ್ಮ ಕೈಯಲ್ಲಿದೆ, ಎರಡು ಸರ್ಕಾರಗಳು ನಮ್ಮದೇ ಇವೆ. ನಾವು ಸದಾ ನಿಮ್ಮ ನಿಮ್ಮಯೊಂದಿಗೆ ಕೈಜೋಡಿಸುವ ಕೆಲಸ ಮಾಡುತ್ತೇವೆ ಎಂದರು.
ಈ ದೇಶದಲ್ಲಿ ಪ್ರಪಥಮ ಬಾರಿಗೆ ಸುವರ್ಣಗ್ರಾಮ ಯೋಜನೆ ಕಾರ್ಯರೂಪಕ್ಕೆ ತಂದಿರುವುದು ನಮ್ಮ ಬಿಜೆಪಿ ಸರ್ಕಾರ ಮಾತ್ರ. ಪಿ ಎಂ ಜೆ ಎಸ್ ವೈ ಯೋಜನೆ ಸಫಲವಾದಂತೆ ಸುವರ್ಣಗ್ರಾಮ ಯೋಜನೆಯು ಸಹ ಯಶಸ್ವಿಯಾಗಿದೆ. ಯುವಕರು ಮೋದಿಜಿ ಯವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷತೀತಾವಾಗಿ ಸರ್ಕಾರದ ಸೌಲಭ್ಯಗಳು ಮನೆ ಬಾಗಿಲುಗಳಿಗೆ ತಲುಪುವ ಕೆಲಸವನ್ನು ನಮ್ಮ ಸರ್ಕಾರಗಳು ಮಾಡುತ್ತಿವೆ. ಈ ತಾಲ್ಲೂಕಿನಲ್ಲಿ ಬಿಜೆಪಿ ಕಮಲವನ್ನು ಅರಳಿಸಲು ನಾವು ನೀವು ಎಲ್ಲರು ಶ್ರಮಪಟ್ಟೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಾ|| ವೇಣುಗೋಪಾಲ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಅವಲಕುಪ್ಪ ಜಯರಾಮರೆಡ್ಡಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಆಶೋಕರೆಡ್ಡಿ, ಅವಲಕುಪ್ಪ ಬೈರೆಡ್ಡಿ, ಪಾಪಿರೆಡ್ಡಿ, ನಾಮನಿ ಪುರಸಭೆ ಸದಸ್ಯ ಶೇಕ್‍ಷಪೀವುಲ್ಲಾ, ರಾಜು, ರಾಮಾಂಜಿ, ಇನ್ನೀತರರು ಹಾಜರಿದ್ದರು
.

ಇ-ಶಕ್ತಿ ಯೋಜನೆ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ-ಎಚ್ಚರಿಕೆ ಯೋಜನೆಯಿಂದ ಮಹಿಳಾ ಸಂಘಗಳ ಬಲವರ್ಧನೆ-ಬ್ಯಾಲಹಳ್ಳಿಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸ್ತ್ರೀಶಕ್ತಿ ಸಂಘಗಳ ಸಬಲೀಕರಣದ ಜತೆ ಬ್ಯಾಂಕಿನ ಬಗ್ಗೆ ಮಹಿಳೆಯರಲ್ಲಿ ನಂಬಿಕೆ ಬಲಗೊಳಿಸುವ ಇ-ಶಕ್ತಿ ಯೋಜನೆ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇ-ಶಕ್ತಿಯೋಜನೆಯಡಿ ನೇಮಕಗೊಂಡಿರುವ ಪ್ರೇರಕರಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ಶುಕ್ರವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಗಂಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಇ-ಶಕ್ತಿ ಯೋಜನೆಯ ಪ್ರೇರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರೇರಕರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು, ಇ ಶಕ್ತಿ ಯೋಜನೆ ಅನುಷ್ಟಾನದಲ್ಲಿ ಲೋಪವಾಗದಂತೆ ಎಚ್ಚರವಹಿಸಿ ಎಂದ ಅವರು, ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಯನ್ನು ಡಿಸಿಸಿ ಬ್ಯಾಂಕ್ ಹೊಂದಿದೆ, ಈ ಹಿನ್ನಲೆಯಲ್ಲಿ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆಗಳನ್ನು ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ನಬಾರ್ಡ್ ಆಯ್ಕೆ ಮಾಡಿಕೊಂಡಿದೆ ಎಂದರು.
ಬ್ಯಾಂಕಿನ ಸಾಧನೆಯ
ಸಹಿಸದವರಿಂದ ಟೀಕೆ
ಡಿಸಿಸಿ ಬ್ಯಾಂಕಿನ ಸಾಧನೆಯನ್ನು ಸಹಿಸಲಾರದವರು ನಾನ ರೀತಿ ಟೀಕೆ ಮಾಡುತ್ತಿದ್ದಾರೆ, ಬ್ಯಾಂಕ್ ದಿವಾಳಿಯಾಗಿದ್ದಾಗ ಇವರೆಲ್ಲಾ ಎಲ್ಲಿಗೋ ಹೋಗಿದ್ದರೋ ಎಂದ ಅವರು, ಇಂತಹ ಟೀಕೆಗಳಿಗೆ ತಕ್ಕ ಪಾಠ ಕಲಿಸಲು ಪ್ರೇರಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ 4.40 ಲಕ್ಷಕ್ಕೂ ಎಚ್ಚು ಮಹಿಳೆಯರಿಗೆ ಸಾಲ ನೀಡಿದ್ದು, ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ, ಬಡ ಮಹಿಳೆಯರನ್ನು ಖಾಸಗಿ ಬಡ್ಡಿ ಮಾಫಿಯಗಳಿಂದ ಮುಕ್ತವನ್ನಾಗಿಸುವುದೇ ನಮ್ಮ ಗುರಿ ಎಂದರು.
ಸಾಲ ನೀಡುವಾಗ ಪಕ್ಷ, ಜಾತಿ ಬೇಧ ಬಿಟ್ಟು ಕೆಲಸ ಮಾಡುತ್ತಿದ್ದೆವೆ, ಆದರೂ ಸಹ ರಾಜಕೀಯವಾಗಿ, ನಾನಾ ರೀತಿಯ ಟೀಕೆ ಮಾಡುತ್ತಿದ್ದಾರೆ, ಬ್ಯಾಂಕಿನ ಪ್ರಗತಿಯನ್ನು ಅವರಿಂದ ಸಹಿಸಲಾಗುತ್ತಿಲ್ಲ ಆದ್ದರಿಂದಲೇ ಮನಬಂದಂತೆ ಮಾತನಾಡುತ್ತಾರೆ, ಇಂತಹ ವ್ಯಕ್ತಿಗಳಿಗೆ ತಾಯಂದಿರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
7300 ಸಂಘಗಳು
ಇ-ಶಕ್ತಿ ವ್ಯಾಪ್ತಿಗೆ
ಮೊದಲ ಹಂತದಲ್ಲಿ 7300 ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಿದ್ದು, 73 ಸಾವಿರ ಮಂದಿ ತಾಯಂದಿರು ಈ ಸಂಘಗಳ ಸದಸ್ಯರಾಗಿದ್ದಾರೆ, ಮಹಿಳಾ ಸ್ವಸಹಾಯ ಸಂಘಗಳ ಮಾಸಿಕ ಸಭೆ, ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆನ್‍ಲೈನ್‍ಗೆ ದಾಖಲಾಗಬೇಕು ಎಂದರು.
ಎಲ್ಲಾ ಮಹಿಳಾ ಸಂಘಗಳಿಗೂ ಯೂಸರ್‍ಐಡಿ ಹಾಗೂ ಪಾಸ್‍ವರ್ಡ್ ನೀಡುತ್ತಿದ್ದು, 30 ಸಂಘಗಳಿಗೆ ಒಬ್ಬರಂತೆ ನೇಮಕಗೊಂಡ ಪ್ರೇರಕರು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಬೇಕು, ಈ ಕೆಲಸ ಡಿ.31ರೊಳಗೆ ಮುಗಿಯಬೇಕು ಎಂದು ಸೂಚಿಸಿದರು.
ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದ ಬುದ್ದಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಲಾಗಿದೆ, 30 ಸಂಘಗಳಿಗೆ ಒಬ್ಬರಂತೆ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ 4200 ರೂ ಸಂಭಾವನೆ ಸಿಗಲಿದೆ ಜತೆಗೆ 250 ರೂ ಮೊಬೈಲ್ ಬಳಕೆಗೆ ಹಣ ಸಿಗುತ್ತದೆ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಮಹಿಳೆಯರು ಪಡೆದುಕೊಂಡಿರುವ ಸಾಲವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಮರು ಪಾವತಿ, ಸಭೆ ನಡೆಸುವುದು, ಚಟುವಟಿಕೆ ಮಾಡುವುದನ್ನು ಗಮನಿಸಲಾಗುತ್ತಿರುತ್ತದೆ, ಇದು ಯಾವುದು ನಡೆಯದಿದ್ದರೆ ಸಂಘದಲ್ಲಿ ಲೋಪ ಇದೆ ಎಂಬುದು ಗಮನಕ್ಕೆ ಬರುತ್ತದೆ, ಅದನ್ನು ತಕ್ಷಣ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರವಿ ಮಾತನಾಡಿ, ಪ್ರೇರಕರು ತಮ್ಮ ವ್ಯಾಪ್ತಿಯ ಸಂಘಗಳ ಸದಸ್ಯರನ್ನು ಭೇಟಿ ಮಾಡಿ, ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಬೇಕು, ಸಕಾಲಕ್ಕೆ ವೆಬ್ ಸೈಟ್‍ನಲ್ಲಿ ದಾಖಲು ಮಾಡಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ಎಜಿಎಂಗಳಾದ ಖಲೀಂವುಲ್ಲಾ, ಹುಸೇನ್ ದೊಡ್ಡಮುನಿ, ಬೇಬಿಶಾಮಿಲಿ ಮತ್ತಿತರರರು ಹಾಜರಿದ್ದರು.

ಉಡುಪಿ ಜಿಲ್ಲಾ ಜಾನಪದ ಪರಿಷತ್ ಪದಗ್ರಹಣ ಸಮಾರಂಭ

JANANUDI.COM NETWORK


ಕೋಟ: ಜಾನಪದವು ಪಠ್ಯ ಪುಸ್ತಕವಾಗಿ ವಿದ್ಯಾರ್ಥಿಗಳು ಜಾನಪದವನ್ನು ಓದುವಂತಾಗಬೇಕು. ಆಗ ಜಾನಪದ ಕಲೆಯನ್ನು ಉಳಿಸಿ ಬೆಳೆಸಬಹುದು. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ದೊಡ್ಡ ದೊಡ್ಡ ಪದವಿ ಪಡೆದವರನ್ನು ಕುಲಸಚಿವ, ಪ್ರಾಧ್ಯಾಪಕರಾಗಿ ನೇಮಿಸದೇ ಜಾನಪದದಲ್ಲಿ ಅನುಭವವಿರುವಂತಹ ಗ್ರಾಮೀಣ ಪ್ರದೇಶದ ಜಾನಪದ ತಜ್ಞರನ್ನು ನೇಮಿಸಿ ಅವರ ಮೂಲಕ ಬೋಧಿಸುವ ವ್ಯವಸ್ಥೆಯಾಗಬೇಕು ಎಂದು ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಹೇಳಿದರು.
ಅವರು ಶನಿವಾರ ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರಸಿದ್ಧ ರಂಗೋಲಿ ಕಲಾವಿದ ಸೂರ್ಯ ಪುರೋಹಿತ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ವಿದ್ವಾಂಸ ಡಾ.ಕನರಾಡಿ ವಾದಿರಾಜ ಭಟ್, ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಯೋಜನಾಧಿಕಾರಿ ಡಾ.ಗಣನಾಥ ಎಕ್ಕಾರು, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಕನ್ನಡ ಜಾನಪದ ಪರಿಷತ್‍ನ ರಾಮನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕೆ.ಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು.ಕನ್ನಡ ಜಾನಪದ ಪರಿಷತ್‍ನ ವಿಭಾಗೀಯ ಸಂಚಾಲಕಿ ಡಾ.ಭಾರತಿ ಮರವಂತೆ ಶುಭಸಂಶನೆಗೈದರು.
ಸಾಹಿತಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಗಣೇಶ ಗಂಗೊಳ್ಳಿ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಖಾರಾಮ್ ಮಾಸ್ಟರ್ ಹಾವಂಜೆ ವಂದಿಸಿದರು.
ಚಿತ್ರ//19ಸಿಬಿ2//ರಾಜ್ಯ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಬಾಲಾಜಿ ಅವರು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರದ ಜನಪ್ರಿಯ ಜನನುಡಿ.ಕಾಮ್ ಸುದ್ದಿ ಸಂಸ್ಥೆಯಿಂದ ‘ಮುದ್ದು ಏಸು’ ಸ್ಫರ್ಧೆ

ಕುಂದಾಪುರ, ಡಿ.೨೦: ನಮ್ಮ ಈ ಸಂಸ್ಥೆ ಆರಂಭವಾಗಿ ಕೆಲವೇ ವರ್ಷಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. ಇಷ್ಟು ವರ್ಷ ನಾವು ಸಂಸ್ಥೆಯ ಬೆಳವಣಿಗೆಗಾಗಿ ಬೇರೆ ಥರಹದ ಸ್ಫರ್ಧೆಗಳನ್ನು ಹಮ್ಮಿ ಕೊಳ್ಳುತಿದ್ದೇವು.
ಆದರೆ ಈ ವರ್ಷ ವಿಭಿನ್ನವಾದ ‘ಮುದ್ದು ಯೇಸು’ ಅಂದರೆ ಪುಟಾಣಿಗಳು ‘ಬಾಲ ಯೇಸು’ ವಿನಂತೆ ವೇಷ ಭೂಶಣ ದರಿಸಿಕೊಂಡ ಆಕರ್ಷಕ ಫೋಟೊಗಳ ಸ್ಫರ್ಧೆಯನ್ನು ಆಯೋಜಿಸಿದ್ದೇವೆ. ಸ್ಫರ್ಧೆಗಳು ಎರಡು ವಿಭಾಗಗಳಲ್ಲಿ ನಡೆಯಲಿದೆ

ಸ್ಫರ್ಧೆ ವಿಭಾಗ 1 – ಒಂದು ವರ್ಷದ ಒಳಗಿನ ಕಂದಮ್ಮಗಳಿಗಾಗಿ. ಸ್ಫರ್ಧೆ ವಿಭಾಗ 2 – ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗಾಗಿ. ಹಾಗೇ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತ್ರತೀಯ ನಗದು ಬಹುಮಾನ ಮತ್ತು ಅಲ್ಲದೆ ಮೆಚ್ಚುಗೆ ಪಡೆದ 10 ಮಕ್ಕಳ ಫೋಟೊಗಳನ್ನು ಜನನುಡಿಯಲ್ಲಿ ಪ್ರಕಟಿಸಲು ಇಚ್ಚಿಸಿದ್ದೇವೆ. ಈ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲು ನಮಗೆ ವಿಶಾಲ ಹ್ರದಯದ ಪೋಷಕರ ಅಗತ್ಯವಿದೆ. ನೀವು ಹ್ರದಯವಂತರು, ನಮ್ಮ ಸಂಸ್ಥೆಯ ಮೇಲೆ ಗೌರವ ಉಳ್ಳವರು ಆಗಿದ್ದೀರಿ. ನೀವು ಹಲವು ಹತ್ತು ಸಂಸ್ಥೆಗಳ, ಕಾರ್ಯಗಳಿಗಾಗಿ ಸಹಾಯ ನೀಡಿ ಸಮಾಜದಲ್ಲಿ ಗುರುತಿಸಿಕೊಂಡಿರುವಿರಿ ಎಂದು ನಮಗೆ ಹೆಮ್ಮೆ ಇದ್ದುದರಿಂದ, ನಮ್ಮ ಸ್ಫರ್ಧೆಯ ಪೋಷಕರಾಗಿ ಧನ ಸಹಾಯ ಮಾಡಿರಿ ಎಂದು ನಿಮ್ಮಲ್ಲಿ ಬಿನ್ನವಿಸಿಕೊಳ್ಳುತಿದ್ದೇವೆ.


“ಮುದ್ದು ಏಸು” ಸ್ಫರ್ಧೆ ಸರ್ವ ಧರ್ಮ ಸೌರ್ಹಾದತೆಗಾಗಿ ಏರ್ಪಡಿಸಿದ್ದು, ಈ ಸ್ಫರ್ಧೆಯಲ್ಲಿ ಜಾತಿ ಮತ ಭೇದವಿಲ್ಲದಂತೆ ಸರ್ವ ಧರ್ಮಿಯರಿಗೂ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’”


“ಇಂತಹ ಒಂದು ಆದರ್ಶ ಸ್ಫರ್ಧೆಗೆ ನೀವು ಪೋಷಕರಾಗಿ ನಮ್ಮ ಈ ಸ್ಫರ್ಧೆಯನ್ನು ಯಶಸ್ವಿಗೊಳಿಸಲು ನಮಗೆ ಸಹಾಯ ಧನವನ್ನು ನೀಡಿ ಸಹಕರಿಸಿಬೇಕೆಂದು ವಿನಮ್ರವಾಗಿ ಕೇಳಿ ಕೊಳ್ಳುತ್ತೆವೆ. ರೂ. 10,000 ನೀಡಿದಲ್ಲಿ ವೀಶೆಷ ಪ್ರಾಯೋಜಕರಾಗಿ ಗುರುತಿಸುತ್ತೇವೆ. ರೂಪಾಯಿ 5,000 ಕ್ಕೂ ಹೆಚ್ಚು ನೀಡಿದವರಿಗೆ ಮುಖ್ಯ ಪ್ರಾಯೋಜಕರಾಗಿ ಗುರುತಿಸಿ ಸುದ್ದಿ ವಾಹಿನಿಯಲ್ಲಿ ನಿಮ್ಮ ಹೆಸರು ಅಥವ ನಿಮ್ಮ ಸಂಸ್ಥೆಯ ಹೆಸರನ್ನು ಪ್ರಕಟಿಸುವ ಜೊತೆಗೆ ನಿಮ್ಮ ಸಂಸ್ಥೆಯ ಜಾಹಿರಾತು ಅಥವ ಶುಭ ಕೋರುವರೆಂದು ಪ್ರಕಟಿಸುತ್ತೆವೆ.”

ನಮ್ಮ ಸಂಸ್ಥೆಯ ಬೆಳವಣಿಗೆಗಾಗಿ ಅಲ್ಪ ಮೊತ್ತವನ್ನು ಕೂಡ ಸ್ವೀಕರಿಸುತ್ತೇವೆ

ಧನ್ಯವಾದಗಳೊಂದಿಗೆ ನಿಮ್ಮ ಸಹಾಯ ಧನವನ್ನು ಆಶಿಸುತ್ತಿರುವ
ಬರ್ನಾಡ್ ಡಿಕೋಸ್ತಾ, ಜನನುಡಿ ಸಂಪಾದಕರು,. – ಸಂಪರ್ಕಿಸಿಸಿರಿ, ಮೊ: 9964620998

Continue reading “ಕುಂದಾಪುರದ ಜನಪ್ರಿಯ ಜನನುಡಿ.ಕಾಮ್ ಸುದ್ದಿ ಸಂಸ್ಥೆಯಿಂದ ‘ಮುದ್ದು ಏಸು’ ಸ್ಫರ್ಧೆ” →