ಶಿಕ್ಷಣ ಇಲಾಖೆಯಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ: ಗಣ್ಯರ ಮೆಚ್ಚುಗೆ



ಶ್ರೀನಿವಾಸಪುರ: ವಯೋನಿವೃತ್ತಿ ಹೊಂದುತ್ತಿರುವ ಶ್ರೀನಿವಾಸಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಬಿ.ಸಿ. ಮುನಿಲಕ್ಷ್ಮಯ್ಯ ಅವರಿಗೆ ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವತಿಯಿಂದ ಅದ್ದೂರಿ ಮತ್ತು ಆತ್ಮೀಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಸಿಆರ್ಪಿಗಳು), ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು (ಬಿಆರ್ಪಿಗಳು), ಇಸಿಒಗಳು, ಶಿಕ್ಷಣ ಇಲಾಖೆಯ ಸಿಬ್ಬಂದಿ, ಸ್ನೇಹಿತರು ಹಾಗೂ ಆತ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಿವೃತ್ತಿಯಾಗುತ್ತಿರುವ ಬಿ.ಸಿ. ಮುನಿಲಕ್ಷ್ಮಯ್ಯ ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುನಿಲಕ್ಷ್ಮಯ್ಯ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ತಮ್ಮ ಸುದೀರ್ಘ ಸೇವಾವಧಿಯಲ್ಲಿ ಶಿಕ್ಷಣ ಇಲಾಖೆಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರ ಕಾರ್ಯದಕ್ಷತೆ, ಸಹಕಾರ ಮನೋಭಾವ ಹಾಗೂ ಶಿಕ್ಷಕರೊಂದಿಗೆ ಹೊಂದಿದ್ದ ಆತ್ಮೀಯ ಸಂಬಂಧವನ್ನು ಗಣ್ಯರು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಿಕ್ಷಕರು ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ ಪ್ರಕ್ರಿಯೆಯಾದರೂ, ಸಹೋದ್ಯೋಗಿಗಳು ಮತ್ತು ಶಿಕ್ಷಕರೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯತೆ, ಉತ್ತಮ ಒಡನಾಟ ಹಾಗೂ ಪರಸ್ಪರ ಸಹಕಾರದ ಸಂಬಂಧಗಳು ಎಂದಿಗೂ ಮರೆಯಲಾಗದು ಎಂದು ಅಭಿಪ್ರಾಯಪಟ್ಟರು.
ಸುದೀರ್ಘ ಸೇವೆಯ ನಂತರ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಬಿ.ಸಿ. ಮುನಿಲಕ್ಷ್ಮಯ್ಯ ಅವರಿಗೆ ಮುಂದಿನ ಜೀವನ ಆರೋಗ್ಯ, ನೆಮ್ಮದಿ, ಸಂತೋಷ ಹಾಗೂ ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಅಧಿಕಾರಿಗಳು, ಶಿಕ್ಷಕರು, ಸ್ನೇಹಿತರು ಮತ್ತು ಆತ್ಮೀಯರು ಹಾರೈಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್, ಜಿಲ್ಲಾ ಶಿಕ್ಷಣಾಧಿಕಾರಿ ವೀಣಾ, ಜಿಲ್ಲಾ ತಾಂತ್ರಿಕ ಸಹಾಯಕ ಶರಣಪ್ಪ ಜಮಾದಾರ್, ಪ್ರಭಾರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಲ್. ವೆಂಕಟಾಚಲಪತಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ್, ವ್ಯವಸ್ಥಾಪಕ ಶ್ರೀನಿವಾಸ್, ಬಿಐಆರ್ಟಿ ಅಧಿಕಾರಿ ಜಿ.ವಿ. ಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಬೈರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ವಿ. ಶಿವಣ್ಣ, ತಾಲ್ಲೂಕು ಸಿಆರ್ಪಿ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಡಿ.ಪಿ. ಶಿವರಾಘವರೆಡ್ಡಿ, ಉರ್ದು ಸಿಆರ್ಪಿ ನಾಜಿಮಾ ಬೇಗಂ, ಸಿಆರ್ಪಿಗಳಾದ ಚೆನ್ನಪ್ಪ, ಸೈಯದ್, ಪೆದ್ದಪ್ಪಯ್ಯ, ಆರ್. ಮಂಜುನಾಥ ರೆಡ್ಡಿ, ಕನಕದುರ್ಗಾ ರೆಡ್ಡಿ, ಅಮರನಾಥ್, ಜಯರಾಮ ರೆಡ್ಡಿ, ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಕೆಜಿಸಿವಿ ಸುಜಾತ, ಇಸಿಒಗಳಾದ ಸುಬ್ರಮಣಿ, ಕೆ.ಸಿ. ಶ್ರೀನಿವಾಸ್, ಮಧುಕುಮಾರ್, ಜಿ.ಎನ್. ಕೂಂದಡಪ್ಪ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಯ ಅಪಾರ ಪ್ರೀತಿ, ಗೌರವ ಹಾಗೂ ಅಭಿಮಾನಕ್ಕೆ ಸಾಕ್ಷಿಯಾದ ಈ ಬೀಳ್ಕೊಡುಗೆ ಸಮಾರಂಭ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.


