

ಬೆಂಗಳೂರು, ಸೆ.29: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವಿತರಿಸುವ ಪ್ರಕ್ರಿಯೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವೇಗ ನೀಡಿದ್ದು, ಈಗಾಗಲೇ ಅನುಮೋದನೆಗೊಂಡಿರುವ ಬಸ್ ಪಾಸ್ಗಳನ್ನು ಈ ವಾರದಲ್ಲೇ ಜಿಲ್ಲಾ ಮಟ್ಟದಲ್ಲಿ ವಿತರಿಸಲು ಸಿದ್ಧತೆ ನಡೆಸಿದೆ.
ಈ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಅನುಮೋದನೆಗೊಂಡಿರುವ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ಗಳು ಇಲಾಖೆಗೆ ಬಂದಿದ್ದು, ಅವುಗಳನ್ನು ಈ ವಾರದಲ್ಲೇ ಜಿಲ್ಲಾಮಟ್ಟದಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತ ಎಂ.ಎನ್. ಅನುಚೇತ್ ಅವರು ತಿಳಿಸಿದರು. ಈ ಸಂಬಂಧ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಅಗತ್ಯ ಸೂಚನೆಗಳನ್ನು ನೀಡಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಕೆಯಾಗಿದ್ದ ಸುಮಾರು 400 ಅರ್ಜಿಗಳಿಗೆ ಆಗಸ್ಟ್ 7ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅನುಮೋದನೆ ನೀಡಿತ್ತು. ಆಯುಕ್ತ ಎಂ.ಎನ್. ಅನುಚೇತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.
ಗ್ರಾಮೀಣ ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿದ್ದ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿರಂತರವಾಗಿ ಒತ್ತಾಯಿಸುತ್ತಾ ಬಂದಿತ್ತು. ಇದೀಗ ಅನುಮೋದನೆಗೊಂಡಿರುವ ಬಸ್ ಪಾಸ್ಗಳ ವಿತರಣೆಗೆ ಇಲಾಖೆ ಮುಂದಾಗಿರುವುದನ್ನು ಕೆಯುಡಬ್ಲ್ಯೂಜೆ ಸ್ವಾಗತಿಸಿದೆ.
ಅರ್ಹ ಗ್ರಾಮೀಣ ಪತ್ರಕರ್ತರ ದಾಖಲೆಗಳನ್ನು ಪರಿಶೀಲಿಸಿ ಬಸ್ ಪಾಸ್ಗಳಿಗೆ ಅನುಮೋದನೆ ನೀಡಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕೆಯುಡಬ್ಲ್ಯೂಜೆ ಕೃತಜ್ಞತೆ ಸಲ್ಲಿಸಿದೆ. ಇನ್ನೂ ಅರ್ಜಿ ಸಲ್ಲಿಸದಿರುವ ಅರ್ಹ ಗ್ರಾಮೀಣ ಪತ್ರಕರ್ತರು ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಸಂಘ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಅವರಿಗೆ ಧನ್ಯವಾದ ಸಲ್ಲಿಸಿದರು.

