ಅಧಿಕಾರಿಗಳ ವಿರುದ್ಧ ಎನ್ಡಿಎ ಪ್ರತಿಭಟನೆ; ಮಾಜಿ ಶಾಸಕರ ವಿರುದ್ಧವೂ ವಾಗ್ದಾಳಿ – ಗಣಿಬಂಡ ದೇವಸ್ಥಾನ ಟ್ರಸ್ಟ್ನಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಆರೋಪ


ಶ್ರೀನಿವಾಸಪುರ, ನ.25: ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಆದರೆ ಕೆಲವರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಪಕ್ಷಭೇದ ಮರೆತು ಕೈಜೋಡಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಬುಧವಾರ ಎನ್ಡಿಎ ವತಿಯಿಂದ ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ನಾನೇ ಸ್ವತಃ ತಹಶೀಲ್ದಾರ್ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆಗಳನ್ನು ಆಲಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಎಚ್ಚರಿಸಿದ ಅವರು, ತಾನು ಯಾವಾಗಲೂ ರೈತರ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದರು. ರಸ್ತೆ ಕಾಮಗಾರಿಗಳು, ಕೈಗಾರಿಕಾ ವಲಯದ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಂದು ಬಾರಿ ಸಚಿವರಾಗಿ, ಎರಡು ಬಾರಿ ವಿಧಾನಸಭಾಧ್ಯಕ್ಷರಾಗಿದ್ದರೂ ಜನಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವ ಮನೋಭಾವ ತೋರಿಸುತ್ತಿಲ್ಲ ಎಂದು ಟೀಕಿಸಿದರು. ಮಾಜಿ ಶಾಸಕರ ಆಪ್ತ ಸಹಾಯಕರನ್ನು ಸ್ಥಳೀಯ ತಹಶೀಲ್ದಾರ್ ವರ್ಗಾವಣೆಯಾದರೂ ಇಲ್ಲಿಯೇ ಉಳಿಸಿಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಿ, ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು: ಸಂಸದ ಮಲ್ಲೇಶ್ಬಾಬು
ಸಂಸದ ಮಲ್ಲೇಶ್ಬಾಬು ಮಾತನಾಡಿ, ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ನಾನು ಸದಾ ರೈತರ ಪರವಾಗಿ ಕೆಲಸ ಮಾಡುತ್ತೇನೆ. ಆದರೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕೆಲವು ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಆಡಳಿತ ವ್ಯವಸ್ಥೆ ಜನಪರವಾಗಿ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳು ಹಾಗೂ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ನಯನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಮನೀಷಾ ಅವರಿಗೆ ಸಲ್ಲಿಸಿದರು.
ಗಣಿಬಂಡ ದೇವಸ್ಥಾನ ಟ್ರಸ್ಟ್ ವಿರುದ್ಧ ಕೋಟ್ಯಂತರ ರೂ. ಅವ್ಯವಹಾರದ ಆರೋಪ
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಗಣಿಬಂಡ ದೇವಸ್ಥಾನ ಟ್ರಸ್ಟ್ ವಿರುದ್ಧ ಗಂಭೀರ ಆರ್ಥಿಕ ಅವ್ಯವಹಾರ ಹಾಗೂ ಹಣ ದುರುಪಯೋಗದ ಆರೋಪಗಳನ್ನು ಮಾಡಿದರು.
ಕಳೆದ 14 ವರ್ಷಗಳಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಟ್ರಸ್ಟ್ ನಿರ್ವಹಣೆಯಲ್ಲಿ ಲೋಪ ಎಸಗಲಾಗಿದೆ. ಸುಮಾರು ನಾಲ್ಕೂವರೆ ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂಬ ಆರೋಪವಿದ್ದು, ಇದಕ್ಕೆ ಸಂಬಂಧಿಸಿದಂತೆ ಸಮರ್ಪಕ ಲೆಕ್ಕಪತ್ರಗಳು, ಪುಸ್ತಕಗಳು ಹಾಗೂ ದಾಖಲೆಗಳು ಲಭ್ಯವಿಲ್ಲ ಎಂದು ದೂರಿದರು.
ಪವಿತ್ರ ದೇವಸ್ಥಾನದ ಅಭಿವೃದ್ಧಿಗೆ ಹಣ ವಿನಿಯೋಗಿಸದೆ, ಕನಿಷ್ಠ ನಿತ್ಯದ ದೀಪ ಬೆಳಗಿಸುವ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಆರೋಪಗಳ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಹಣ ದುರುಪಯೋಗದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಕ್ರಮ ಜರುಗಿಸಬೇಕು ಎಂದು ಸವಾಲು ಹಾಕಿದರು. ಈವರೆಗೆ ತಮ್ಮ ಗಮನಕ್ಕೆ ಸಂಪೂರ್ಣವಾಗಿ ಬಾರದಿದ್ದರೂ, ಇನ್ನು ಮುಂದೆ ಈ ವಿಚಾರವನ್ನು ನಿರ್ಲಕ್ಷಿಸುವುದಿಲ್ಲ. ಅಕ್ರಮಗಳ ಕುರಿತು ಎಲ್ಲಾ ಸಂಗತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಎಚ್ಚರಿಸಿದರು. ದೇವಸ್ಥಾನದ ಟ್ರಸ್ಟ್ನ ಹಣಕಾಸು ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರು ಭಾಗಿ
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಂಡಲ ಅಧ್ಯಕ್ಷ ರೋಣೂರು ಚಂದ್ರಶೇಖರ್, ಕಿರುವಾರ ರತ್ನಾಕರರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್, ಇಂದಿರಾ ಭವನ ಜಿ.ರಾಜಣ್ಣ, ಶಿವಪುರ ಗಣೇಶ್, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ವೀಣಾ, ಮಾಜಿ ಪುರಸಭಾ ಸದಸ್ಯ ಶಬ್ಬೀರ್ ಖಾನ್, ಜೆಡಿಎಸ್ ಮುಖಂಡ ಅತ್ತಾವುಲ್ಲಾ ಶರೀಫ್, ಕೆ.ಪಾತ್ತೂರು ಮಂಜುನಾಥ್ ರೆಡ್ಡಿ, ಬಣಕನಹಳ್ಳಿ ನಟರಾಜ್, ಲಕ್ಷ್ಮಣಗೌಡ, ನಾಗಭೂಷಣ್, ಮನು, ಜಗದೀಶ್, ಪ್ರಸನ್ನ, ಕೃಷ್ಣಾರೆಡ್ಡಿ, ಸಿಮೆಂಟ್ ನಾರಾಯಣಸ್ವಾಮಿ, ಪೂಲ್ ಶಿವಾರೆಡ್ಡಿ, ಚಿನ್ನಪ್ಪರೆಡ್ಡಿ, ಸಿ.ರವಿ, ರಘುನಾಥಪುರ ಸುಬ್ರಮಣ, ತೂಪಲ್ಲಿ ಮಧು, ಬಸನಪಲ್ಲಿ ರಾಮಕೃಷ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


