ಅಂಗನವಾಡಿ ಕೇಂದ್ರ, ಹಿಮಾಲಯ ಐಸ್ ಫ್ಯಾಕ್ಟರಿ ಸಮೀಪ ಅವ್ಯವಸ್ಥೆ; ಮಕ್ಕಳು, ಮಹಿಳೆಯರು, ವೃದ್ಧರು ಹಾಗೂ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆ



ಶ್ರೀನಿವಾಸಪುರ, ನ.18 : ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯ ಅಕ್ಬರ್ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರ ಹಾಗೂ ಹಿಮಾಲಯ ಐಸ್ ಫ್ಯಾಕ್ಟರಿ ಸಮೀಪ ಕಾಂಕ್ರೀಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತೆರೆದ ಚರಂಡಿಯಿಂದಾಗಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯ ಕಾಂಕ್ರೀಟ್ ಕಿತ್ತುಹೋಗಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಮೇಲೆ ಕಲ್ಲುಗಳು ಹಾಗೂ ಕಾಂಕ್ರೀಟ್ ತುಂಡುಗಳು ಹರಡಿಕೊಂಡಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿವೆ. ರಸ್ತೆ ಮಧ್ಯಭಾಗ ಕುಸಿದು ದೊಡ್ಡ ಹೊಂಡ ನಿರ್ಮಾಣವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಜೀವದ ಹಂಗು ತೊರೆದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಶೇಷವಾಗಿ ಆಟೋ ಚಾಲಕರು ಹಾಗೂ ಇತರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಸ್ವಲ್ಪ ಅಜಾಗರೂಕತೆ ವಹಿಸಿದರೂ ವಾಹನಗಳ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಅಂಗನವಾಡಿ ಕೇಂದ್ರದ ಸಮೀಪವೇ ಈ ಅವ್ಯವಸ್ಥೆ ಇರುವುದರಿಂದ ಅಲ್ಲಿಗೆ ಬರುವ ಪುಟ್ಟ ಮಕ್ಕಳು ಹಾಗೂ ಪೋಷಕರಿಗೂ ತೀವ್ರ ತೊಂದರೆಯಾಗುತ್ತಿದೆ.
ಇನ್ನು ರಸ್ತೆಯ ಮಧ್ಯಭಾಗದಲ್ಲಿರುವ ಚರಂಡಿ ತೆರೆದಿದ್ದು, ಅದಕ್ಕೆ ಯಾವುದೇ ಮುಚ್ಚಳ ಅಥವಾ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಮಹಿಳೆಯರು, ವೃದ್ಧರು ಹಾಗೂ ಪಾದಚಾರಿಗಳು ಈ ಮಾರ್ಗದಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಕತ್ತಲೆಯಲ್ಲಿ ಹಾಳಾದ ರಸ್ತೆ ಮತ್ತು ತೆರೆದ ಚರಂಡಿ ಸರಿಯಾಗಿ ಕಾಣಿಸದೆ ಅಪಘಾತದ ಭೀತಿ ಎದುರಾಗಿದೆ.
ಮಳೆಗಾಲದಲ್ಲಿ ಚರಂಡಿ ನೀರಿನಿಂದ ತುಂಬಿಕೊಳ್ಳುವುದರಿಂದ ಅದರ ಆಳ ಹಾಗೂ ತೆರೆದ ಭಾಗಗಳು ಕಾಣಿಸದೆ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ಸಂಗ್ರಹವಾಗುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಅವ್ಯವಸ್ಥೆ ಯಾವುದೇ ಕ್ಷಣದಲ್ಲಿ ಅನಾಹುತಕ್ಕೆ ಕಾರಣವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಮೇಲೆ ಬಿದ್ದಿರುವ ಕಾಂಕ್ರೀಟ್ ಅವಶೇಷಗಳು ಹಾಗೂ ಕಲ್ಲುಗಳನ್ನು ತೆರವುಗೊಳಿಸದಿರುವುದರಿಂದ ಸಂಚಾರಕ್ಕೆ ಮತ್ತಷ್ಟು ಅಡಚಣೆಯಾಗಿದೆ. ಈ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ಸೆಳೆದರೂ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಹದಗೆಟ್ಟ ಕಾಂಕ್ರೀಟ್ ರಸ್ತೆಯನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ಪುನರ್ ನಿರ್ಮಿಸಬೇಕು. ತೆರೆದ ಚರಂಡಿಗೆ ಸೂಕ್ತ ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಅಳವಡಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ಅಪಘಾತ ಸಂಭವಿಸಿದ ನಂತರ ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ಅಕ್ಬರ್ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



