

ಕುಂದಾಪುರ: ಆಯುರ್ವೇದವೆಂದರೆ ಕೇವಲ ರೋಗ ಬಂದಾಗ ಕುಡಿಯುವ ಕಹಿ ಕಷಾಯ ಅಥವಾ ಕಟ್ಟುನಿಟ್ಟಿನ ಪಥ್ಯವಲ್ಲ; ಅದು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಮಗ್ರ ಜೀವನಶೈಲಿ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಆಯುರ್ವೇದ ಹಬ್ಬದ ಅಂಗವಾಗಿ ನಡೆದ ‘ಚಿತ್ರಕೂಟ ಜೆನ್ ಜೀ ಆಯುರ್ವೇದ ಸಂವಾದ’ ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪ್ರಮುಖ ಕಂಟೆಂಟ್ ಕ್ರಿಯೇಟರ್ಗಳು ಭಾಗವಹಿಸಿ ಯುವಪೀಳಿಗೆ ಮತ್ತು ಆರೋಗ್ಯದ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರಕೂಟ ಆಯುರ್ವೇದದ ಸಂಸ್ಥಾಪಕ ಡಾ. ರಾಜೇಶ್ ಬಾಯರಿ ಅವರು, “ಆಯುರ್ವೇದ ಶಾಸ್ತ್ರವು ಮೊದಲು ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’ ಎಂದು ಹೇಳುತ್ತದೆ. ಅಂದರೆ ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸುವುದೇ ಇದರ ಮೂಲ ಉದ್ದೇಶವಾಗಿದ್ದು, ಕಾಯಿಲೆ ಬಂದ ಮೇಲೆ ಗುಣಪಡಿಸುವ ‘ಆತುರಸ್ಯ ವಿಕಾರ ಪ್ರಶಮನಂ’ ನಂತರದ ಹಂತವಾಗಿದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು, ನಾಲಿಗೆ ಸ್ವಚ್ಛಗೊಳಿಸುವುದು, ಋತುಮಾನಕ್ಕೆ ತಕ್ಕಂತೆ ಆಹಾರ ಸೇವನೆ ಮಾಡುವಂತಹ ಪ್ರಾಚೀನ ದಿನಚರಿಯನ್ನು ಪಾಲಿಸುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲಿ 30–40ರ ಹರೆಯದಲ್ಲೇ ಮಂಡಿನೋವು, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಕಳಪೆ ಎಣ್ಣೆಯ ಬಳಕೆ, ಸಂಸ್ಕರಿಸಿದ ಸಕ್ಕರೆ ಹಾಗೂ ವ್ಯಾಯಾಮದ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ರಾತ್ರಿ ಮಲಗುವ ಕನಿಷ್ಠ 45 ನಿಮಿಷಗಳ ಮೊದಲು ಮೊಬೈಲ್ ಪರದೆಯಿಂದ ದೂರವಿರುವ ‘ಡಿಜಿಟಲ್ ಡಿಟಾಕ್ಸ್’ ರೂಢಿಸಿಕೊಂಡರೆ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ” ಎಂದು ಸಲಹೆ ನೀಡಿದರು.
ಹೆಗ್ಗದ್ದೆ ಸ್ಟುಡಿಯೋಸ್ನ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರು ಮಾತನಾಡಿ, “ಇಂದಿನ ಧಾವಂತದ ಬದುಕಿನಲ್ಲಿ ಜನರಿಗೆ ಎಲ್ಲವೂ ತಕ್ಷಣವೇ ಪರಿಹಾರವಾಗಬೇಕು ಎಂಬ ಭ್ರಮೆಯಿದೆ. ಆದರೆ ದೇಹದ ಯಾವುದೇ ಸಮಸ್ಯೆಯನ್ನು ಸರಿಪಡಿಸಿ ಸಮಸ್ಥಿತಿಗೆ ತರಲು ಕನಿಷ್ಠ 90 ರಿಂದ 120 ದಿನಗಳ ಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ದಿನಗಳಲ್ಲಿ ರೋಗ ವಾಸಿ ಮಾಡುತ್ತೇವೆ ಎಂದು ಹರಿದಾಡುವ ಸುಳ್ಳು ಭರವಸೆಗಳನ್ನು ಸಾರ್ವಜನಿಕರು ನಂಬಬಾರದು. ಇಂದಿನ ಪೋಷಕರು ಪ್ರೀತಿಯ ಹೆಸರಿನಲ್ಲಿ ಮಕ್ಕಳಿಗೆ ಪ್ಯಾಕೆಟ್ ತಿನಿಸುಗಳು ಹಾಗೂ ಜಂಕ್ ಫುಡ್ ನೀಡುತ್ತಿದ್ದು, ಈ ಅಧಿಕ ಕ್ಯಾಲೋರಿಯ ಆಹಾರಗಳು ಮಕ್ಕಳಲ್ಲಿ ಬೊಜ್ಜು ಮತ್ತು ಬಾಲ ಮಧುಮೇಹಕ್ಕೆ ನಾಂದಿ ಹಾಡುತ್ತಿವೆ. ಆದ್ದರಿಂದ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರಗಳನ್ನು ನೀಡಿ, ದೈಹಿಕ ಆಟೋಟಗಳಿಗೆ ಪ್ರೋತ್ಸಾಹಿಸುವ ಮೂಲಕ ಅವರ ಆರೋಗ್ಯದ ಜವಾಬ್ದಾರಿಯನ್ನು ಪೋಷಕರೇ ಹೊರಬೇಕು” ಎಂದು ಎಚ್ಚರಿಸಿದರು.
ಖ್ಯಾತ ಕಂಟೆಂಟ್ ಕ್ರಿಯೇಟರ್ ಮಂಜುನಾಥ್ ಕಾಮತ್ (ಉಡುಪಿಯ ಕಂಡೀರಾ) ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡು, ಸಾಮಾಜಿಕ ಜಾಲತಾಣಗಳ ಕೆಲಸದ ಒತ್ತಡ, ತಡರಾತ್ರಿಯ ನಿದ್ರೆ ಹಾಗೂ ಹೊರಗಿನ ಆಹಾರ ಸೇವನೆಯಿಂದ ತಾವು ಎದುರಿಸಿದ ಆರೋಗ್ಯ ಸಮಸ್ಯೆಗಳನ್ನು ವಿವರಿಸಿದರು. ಬಳಿಕ ಆಯುರ್ವೇದದ ಮಾರ್ಗದರ್ಶನದಂತೆ ಬೆಳಿಗ್ಗೆ ಬೇಗ ಏಳುವುದು ಮತ್ತು ನೈಸರ್ಗಿಕ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಂತರ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಂಪೂರ್ಣ ಸ್ವಸ್ಥರಾದದ್ದನ್ನು ಸ್ಮರಿಸಿದರು. ಕಂಟೆಂಟ್ ಕ್ರಿಯೇಟರ್ಗಳು ಕೇವಲ ಲೈಕ್ಸ್ ಮತ್ತು ವ್ಯೂಸ್ಗಳಿಗಾಗಿ ಕೆಲಸ ಮಾಡದೆ, ಸಮಾಜಕ್ಕೆ ನೈಜ ಹಾಗೂ ಜವಾಬ್ದಾರಿಯುತ ಆರೋಗ್ಯ ಸಂದೇಶಗಳನ್ನು ತಲುಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಪೋಷಕರು ಮಕ್ಕಳ ಗೌರವ ಗಳಿಸಬೇಕಾದರೆ ಈ ಕಾಲದ ಹೊಸ ವಿಷಯಗಳನ್ನು ಕಲಿಯಬೇಕು ಎಂದು ಹೇಳಿದರು.
ಸಂವಾದದ ಕೊನೆಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ತಜ್ಞರು, ದಿನನಿತ್ಯದ ನಡಿಗೆ, ಎಣ್ಣೆಯ ಮಿತ ಬಳಕೆ, ಸಕ್ಕರೆ ತ್ಯಾಗ ಮತ್ತು ಭಾರತೀಯ ಪರಂಪರೆಯ ದಿನಚರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಕರೆ ನೀಡಿದರು.
ಖ್ಯಾತ ಕಂಟೆಂಟ್ ಕ್ರಿಯೇಟರ್ ಸಂಧ್ಯಾ ವಿನೋದ್ ಪೈ ಅವರು ಸೊಗಸಾಗಿ ಸಂವಾದ ನಡೆಸಿಕೊಟ್ಟರು.

