
ಗ್ರಾಮೀಣ ಪ್ರದೇಶದಲ್ಲಿ ವಿದೇಶಿಗರೂ ಕೊಂಡಾಡುವ ಆಯುರ್ವೇದ ಚಿಕಿತ್ಸಾ ಕೇಂದ್ರ ರೂಪಿಸಿದ ಸಾಧಕನಿಗೆ ಕನ್ನಡ ಪ್ರಭ – ಏಷ್ಯಾನೆಟ್ ಸುವರ್ಣ ನ್ಯೂಸ್ ಗೌರವ

ಕುಂದಾಪುರ: ಭಾರತೀಯ ಪಾರಂಪರಿಕ ಆಯುರ್ವೇದ ವೈದ್ಯಕೀಯ ಪದ್ಧತಿಯ ಸಂರಕ್ಷಣೆ, ಔಷಧ ಸಂಶೋಧನೆ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರದ ಜನಪ್ರಿಯ ಆಯುರ್ವೇದ ವೈದ್ಯ ಡಾ. ರಾಜೇಶ್ ಬಾಯರಿ ಅವರು ಮಾಧ್ಯಮ ರಂಗದ ಅಗ್ರಗಣ್ಯ ಸಂಸ್ಥೆಗಳಾದ ಕನ್ನಡ ಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ನೀಡುವ ಪ್ರತಿಷ್ಠಿತ ಆಯುರ್ಭೂಷಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನಲ್ಲಿ ಸೆ.26ರಂದು ನಡೆಯಲಿರುವ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಡಾ. ರಾಜೇಶ್ ಬಾಯರಿ ಅವರಿಗೆ ಈ ಪ್ರತಿಷ್ಠಿತ ಗೌರವ ಪ್ರದಾನ ಮಾಡಲಾಗುತ್ತದೆ.
ಅವರು ಕುಂದಾಪುರದ ಆಲೂರಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಕಳಿಯಲ್ಲಿ ಆಯುರ್ವೇದ ಚಿಕಿತ್ಸಾಲಯ ಆರಂಭಿಸುತ್ತೇನೆ ಎಂದಾಗ ಆರಂಭದಲ್ಲಿ ಹಲವರು ಅಪಹಾಸ್ಯ ಮಾಡಿದ್ದರು. ಆದರೆ ಹಿರಿಯರು, ಪರಂಪರೆ ಮತ್ತು ಪ್ರಕೃತಿಗೆ ಗೌರವ ನೀಡುವ ಮನೋಭಾವದ ಡಾ. ರಾಜೇಶ್ ಬಾಯರಿಯವರ ಇಚ್ಛಾಶಕ್ತಿ ಅಚಲವಾಗಿತ್ತು. 2008ರ ಜೂನ್ 5ರಂದು ಗಿಡ ನೆಟ್ಟು ಸಂಕಲ್ಪ ಮಾಡಿ, ತಂದೆ ಮಹಾಬಲ ಬಾಯರಿ ಹಾಗೂ ತಾಯಿ ಕಲಾವತಿ ಅವರ ಆಶೀರ್ವಾದದೊಂದಿಗೆ 2010ರಲ್ಲಿ ತಮ್ಮ ಜಮೀನಿನಲ್ಲೇ ಕೆಲವೇ ಸಾವಿರ ರೂಪಾಯಿ ಬಂಡವಾಳದಲ್ಲಿ ಒಂದು ಕೋಣೆಯ ಚಿಕಿತ್ಸಾಲಯಕ್ಕೆ ನಾಂದಿ ಹಾಡಿದರು. ಆರಂಭದಲ್ಲಿ ರೋಗಿಗಳನ್ನು ಪರೀಕ್ಷಿಸುವುದರಿಂದ ಹಿಡಿದು ಔಷಧಿ-ಕಷಾಯ ತಯಾರಿಯವರೆಗಿನ ಎಲ್ಲಾ ಕಾಯಕಗಳನ್ನು ಅವರೊಬ್ಬರೇ ನಿಭಾಯಿಸುತ್ತಿದ್ದರು.
ಜಾಗತಿಕ ಮಟ್ಟದಲ್ಲಿ ಚಿತ್ರಕೂಟದ ಹೆಗ್ಗುರುತು:
2011ರಲ್ಲಿ ಪತ್ನಿ ಡಾ. ಅನುಲೇಖಾ ಬಾಯರಿ ಅವರ ಸಾಥ್ ದೊರೆತ ಬಳಿಕ ಈ ಪ್ರಯತ್ನ ಮತ್ತಷ್ಟು ವಿಸ್ತಾರಗೊಂಡಿತು. ನೈಸರ್ಗಿಕ ಚಿಕಿತ್ಸೆ ಮತ್ತು ಪರಿಣಾಮಕಾರಿ ಕೈಗುಣದ ಫಲವಾಗಿ ಚಿತ್ರಕೂಟದ ಕೀರ್ತಿ ದೇಶ-ವಿದೇಶಗಳಿಗೆ ಹಬ್ಬಿತು. ಪ್ರಸ್ತುತ ಈ ಪುಟ್ಟ ಹಳ್ಳಿಯ ಚಿಕಿತ್ಸಾಲಯವನ್ನು ಹುಡುಕಿಕೊಂಡು ಅಮೆರಿಕ, ಯುರೋಪ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿರುವುದು ಇವರ ನಿಸ್ವಾರ್ಥ ಸೇವೆಗೆ ಸಾಕ್ಷಿ.
18 ಎಕರೆಯಲ್ಲಿ ಪರಿಸರಸ್ನೇಹಿ ಆರೋಗ್ಯಧಾಮ:
ಚಿತ್ರಕೂಟವು ಇಂದು 18 ಎಕರೆ ವಿಸ್ತಾರವಾದ ಹಸಿರಿನ ಮಡಿಲಲ್ಲಿ ಪಾರಂಪರಿಕ ಚಿಕಿತ್ಸಾ ತಾಣವಾಗಿ ಕಂಗೊಳಿಸುತ್ತಿದೆ. ಇಲ್ಲಿ 30ಕ್ಕೂ ಹೆಚ್ಚು ತಳಿಗಳ ದೇಸಿ ಹಸುಗಳಿರುವ ಗೋಶಾಲೆಯಿದ್ದು, ಚಿಕಿತ್ಸೆಗೆ ಅಗತ್ಯವಿರುವ ತುಪ್ಪವನ್ನು ಸ್ಥಳದಲ್ಲೇ ಸಿದ್ಧಪಡಿಸಲಾಗುತ್ತದೆ. ಜೊತೆಗೆ 250ಕ್ಕೂ ಹೆಚ್ಚು ಪ್ರಭೇದದ ಅಪರೂಪದ ಗಿಡಮೂಲಿಕೆಗಳಿರುವ ಔಷಧ ವನವಿದ್ದು, ರಾಸಾಯನಿಕ ಮುಕ್ತವಾಗಿ ಪಾರಂಪರಿಕ ರೀತಿಯಲ್ಲಿ ಔಷಧಿ ತಯಾರಿಸಲಾಗುತ್ತದೆ.
ರೋಗಿಯ ನಾಡಿ ಪರೀಕ್ಷೆ, ದೈಹಿಕ ಪ್ರಕೃತಿ ಹಾಗೂ ಜೀವನಶೈಲಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ವೈಯಕ್ತಿಕ ಚಿಕಿತ್ಸಾ ಕ್ರಮ ಹಾಗೂ ಪಂಚಕರ್ಮ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಸಮೀಪದಲ್ಲೇ ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯಗಳಿರುವುದರಿಂದ ಆಧ್ಯಾತ್ಮಿಕ ನೆಮ್ಮದಿಯೂ ಲಭ್ಯ. ಚಿಕಿತ್ಸಾಲಯದ ಮೂಲಕ ಆಲೂರು ಸುತ್ತಮುತ್ತಲಿನ ಗ್ರಾಮದ ಹತ್ತಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿ, ಗ್ರಾಮೀಣ ಭಾಗದ ಆರ್ಥಿಕ ಚಿತ್ರಣವನ್ನೇ ಬದಲಿಸಿದ್ದಾರೆ.
ಗ್ರಾಮೀಣ ಭಾಗದಲ್ಲೇ ನೆಲೆನಿಂತು ಪ್ರಾಚೀನ ಆಯುರ್ವೇದ ಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ಡಾ. ರಾಜೇಶ್ ಬಾಯರಿ ಅವರ ನಿಸ್ವಾರ್ಥ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಸ್ಥೆಗಳು ಈ ಬಾರಿಯ ಆಯುರ್ಭೂಷಣ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಕರಾವಳಿ ಭಾಗಕ್ಕೆ ಸಂದ ಮಹಾನ್ ಗೌರವವಾಗಿದೆ.

