ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕ್ರತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು:ಸಿ.ಸೋಮಶೇಖರ

ಶ್ರೀನಿವಾಸಪುರ: ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕøತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಗಡಿನಾಡ ಉತ್ಸವ ಹಾಗೂ ಗಡಿಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕøತಿಕ ಅಸ್ಮಿತತೆ ಉಂಟುಮಾಡುವುದು ಹಾಗೂ ಕನ್ನಡ ಜಾಗೃತಿ ಮೂಡಿಸುವುದು ಗಡಿ ಉತ್ಸವದ ಆಶಯವಾಗಿದೆ. ಈಗಾಗಲೆ ರಾಜ್ಯದಲ್ಲಿ 500 ಸಂಸ್ಥೆಗಳಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು ಅನುದಾನ ಬಿಡುಗಡೆ ಮಾಡಲಾಗಿದೆ. ನಾಡಿನ ಗಡಿಯಲ್ಲಿ ಕನ್ನಡ ಕಹಳೆ ಮೊಳಗಿಸಲು ಹಾಗೂ ಸಾಂಸ್ಕøತಿಕ ಉತ್ಸವ ನಡೆಸಲು ಇನ್ನೂ 400 ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೆ ಕನಿಷ್ಠ ರೂ.1 ಲಕ್ಷ ನೀಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಗಡಿನಾಡಲ್ಲೂ ಕನ್ನಡ ಭಾಷೆ ಗಟ್ಟಿಯಾಗಿದೆ. ಗಡಿಯಲ್ಲಿನ ಅನ್ಯ ಭಾಷೆಗಳಿಂದ ಕನ್ನಡ ಭಾಷೆಗೆ ಹಾನಿ ಉಂಟಾಗುವುದಿಲ್ಲ. ಗಡಿನಾಡಿನ ಜನರ ಹೃದಯದ ಭಾಷೆ ಕನ್ನಡವಾಗಿದೆ. ನಾಡಿನ ಯಾವುದೇ ಭಾಗವನ್ನು ಇನ್ನೊಂದು ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಭಾಷಾ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿವೃದ್ಧಿಗಾಗಿ ಶ್ರಮಿಸಿರುವ ನಿವೃತ್ತ ಪ್ರಾಂಶುಪಾಲ ಸಿ.ಬೈರಪ್ಪ, ನಿವೃತ್ತ ವಲಯ ಅರಣ್ಯಾಧಿಕಾರಿ ಗೋವಿಂದಯ್ಯ ಅವರಿಗೆ ಗಡಿನಾಡ ಕನ್ನಡ ಸೇನಾನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಲಾ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ವೈ.ವಿ.ವೆಂಕಟಾಚಲ ನಿರ್ಮಾಣ ಹಾಗೂ ಡಾ. ಗುಣವಂತ ಮಂಜು ನಿರ್ದೇಶನದ ಅಂಗಾಂಗ ದಾನದ ಮಹತ್ವ ಸಾರುವ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಪುಣ್ಯವತಿ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಗೊವಿಂದಹಳ್ಳಿ ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ಸಾಹಿತಿ ಆರ್.ಚೌಡರೆಡ್ಡಿ, ಉಪನ್ಯಾಸಕ ಎನ್.ಶಂಕರೇಗೌಡ ಅವರಿಂದ ವಿಚಾರ ಗೋಷ್ಠಿ ಏರ್ಪಡಿಸಲಾಗಿತ್ತು. ಸಾಹಿತಿ ಸ.ರಘುನಾಥ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಲಕ್ಷ್ಮೀಗೌಡ, ವಿ.ರಾಧಾಕೃಷ್ಣ, ಎಂ.ಪ್ರಸನ್ನಕುಮಾರ್, ಎಸ್.ಅನೀಫ್ ಸಾಬ್, ಕೆ.ವೇಣುಗೋಪಾಲ್ ಕಾವ್ಯ ವಾಚನ ಮಾಡಿದರು.
ಶಾಲಾ ಮಕ್ಕಳ ಬಳಕೆಗಾಗಿ ಡಾ. ವೈ.ವಿ.ವೆಂಕಟಾಚಲ ನಿರ್ಮಿಸಿಕೊಟ್ಟ ಕೈ ತೊಳೆಯುವ ನೀರಿನ ಘಟಕ ಲೋಕಾರ್ಪಣೆ ಮಾಡಲಾಯಿತು. ಎಂ.ಅರುಣ್ ಕುಮಾರ್ ನಿರ್ದೇಶನದಲ್ಲಿ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಮೆರವಣಿಗೆಳ: ಗ್ರಾಮದಲ್ಲಿ ಭುವನೇಶ್ವರಿ ಭಾವಚಿತ್ರ ಮರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೀಲು ಕುದುರೆ ಮತ್ತಿತರ ಜಾನಪದ ನೃತ್ಯಗಳು ಜನರ ಗಮನ ಸೆಳೆದವು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಅವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಡಾ. ವೈ.ಸಿ.ಬೀರೇಗೌಡ, ಮುಖ್ಯ ಶಿಕ್ಷಕ ಕೆ.ಆರ್.ಶ್ರೀನಿವಾಸಲು, ಸಾಹಿತಿ ಅಕ್ಬರ್ ಪಾಷ, ಲಲಿತಾ ರಾಮಲಿಂಗಾರೆಡ್ಡಿ, ಗೌತಮಿ ಮುನಿರಾಜು, ಪದ್ಮ, ಶಾರದಾ, ಶಿವಾನಂದ, ನೂರುಲ್ಲಾ, ಜಯರಾಂ, ಶ್ರೀನಿವಾಸರೆಡ್ಡಿ, ಡಾ. ಗುರುಮಹೇಶ್, ಚಿತ್ರ ನಟಿ ಪ್ರೇಮಲತಾ ಇದ್ದರು.

ಕೆಜಿಎಫ್ ಜನರ ಸಂಕಷ್ಟಗಳತ್ತ ಸರ್ಕಾರದ ಗಮನ ಸೆಳೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿ
ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಅಗತ್ಯ ಕ್ರಮ-ಸದನದಲ್ಲಿ ಮುಖ್ಯಮಂತ್ರಿಗಳಿಂದಲೇ ಭರವಸೆ

ಕೋಲಾರ:- ಕೆ.ಜಿ.ಎಫ್ ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಸರ್ಕಾರ ವಾಪಸ್ಸು ಪಡೆದಿರುವ 973.24 ಎಕರೆ ಬಳಕೆಯಾಗದ ಭೂಮಿಯನ್ನು ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ಮುಗಿಸಿ ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಶುಕ್ರವಾರ ಒಟ್ಟು 1870 ಎಕರೆ ಜಮೀನಿನ ಪೈಕಿ ಬಿಎಎಂಎಲ್ ಬಳಸಿಕೊಳ್ಳದ 973.24 ಎಕರೆ ಜಮೀನನ್ನು ಕಂದಾಯ ಇಲಾಖೆ ವಶದಿಂದ ಕೈಗಾರಿಕಾ ಇಲಾಖೆ, ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ಶಾಸಕಿ ರೂಪಕಲಾ ಸರ್ಕಾರದ ಗಮನ ಸೆಳೆದ ಹಿನ್ನಲೆಯಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.
ಸದನದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದ ಶಾಸಕಿ ರೂಪಕಲಾ, ಬೃಹತ್,ಮಧ್ಯಮ ಕೈಗಾರಿಕಾ ಸಚಿವ ನಿರಾಣಿ ಅವರು ಅನುಭವಿಯಾಗಿದ್ದಾರೆ, ಸ್ವತಃ ಉದ್ಯಮಿಯಾಗಿದ್ದಾರೆ, ಕೆಜಿಎಫ್ ನಗರಕ್ಕೆ ಪ್ರವಾಸ ಬಂದಿದ್ದಾಗ ಜಮೀನು ಪರಿಶೀಲಿಸಿದ ಸಂದರ್ಭದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸೂಕ್ತ ಜಾಗ ಎಂದು ತಿಳಿಸಿ ಭರವಸೆಯನ್ನೂ ನೀಡಿದ್ದಾರೆ, ಕಳೆದ 2021ರ ಫೆ.18 ಹಾಗೂ ನ.30 ರಂದು ಸಭೆ ನಡೆಸಿ ಸದರಿ ಜಮೀನನ್ನು ಕೆಐಡಿಬಿಗೆ ಪಡೆದುಕೊಳ್ಳುವ ಕುರಿತ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದರು.

3 ವರ್ಷಗಳಿಂದ ನೆನೆಗುದಿಗೆ-ಬೇಸರ


ಕೈಗಾರಿಕಾ ವಲಯ ಸ್ಥಾಪನೆ ಸಂಬಂಧ ಬೆಮೆಲ್‍ನ ಈ ಜಾಗವನ್ನು ಕಂದಾಯ ಇಲಾಖೆಯಿಂದ ಕೆಐಡಿಬಿಗೆ ಪಡೆದುಕೊಳ್ಳುವ ಕಾರ್ಯಕ್ಕೆ ಸತತ ಒತ್ತಡ ಹಾಕುತ್ತಿದ್ದರೂ 3 ವರ್ಷಗಳಿಂದ ಸಾಧ್ಯವಾಗಿಲ್ಲ, ನನ್ನ ಕ್ಷೇತ್ರದ ಬಗ್ಗೆ ಈ ನಿರ್ಲಕ್ಷ್ಯ ಏಕೆ? ಅಲ್ಲಿ ಬಡವರಿದ್ದಾರೆ, ಗಣಿ ಮುಚ್ಚಿದ ನಂತರ ಜೀವನ ನಡೆಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೋವಿಡ್ ಸಂದರ್ಭದಲ್ಲಿ ಕೆಲಸಕ್ಕಾಗಿ ಅಲೆದಾಟ ನಡೆಸಿ ನೋವುಂಡಿದ್ದಾರೆ ಎಂದರು.
ನನ್ನ ಕ್ಷೇತ್ರದ ಜನ ಕಷ್ಟದ ಬದುಕು ನಡೆಸುತ್ತಿದ್ದಾರೆ, ಅವರ ನೋವಿನ ಪರಿಚಯವನ್ನು ಸಚಿವರು, ಸಿಎಂ ಅವರಿಗೂ ಅರ್ಥ ಮಾಡಿಸುವ ಕೆಲಸ ಮಾಡಿದ್ದೇನೆ ಆದರೂ ಇನ್ನೂ ಸ್ಪಂದನೆ ಸಿಗಲಿಲ್ಲ, ಕೂಡಲೇ ಕೈಗಾರಿಕಾ ವಲಯ ಘೋಷಿಸಿ ಎಂದು ರೂಪಕಲಾ ಮನವಿ ಮಾಡಿದರು.
ರಾಜ್ಯ ಸರ್ಕಾರ ಹಾಗೂ ಕೈಗಾರಿಕಾ ಸಚಿವರು ಮಾತೆತ್ತಿದರೆ 80 ಸಾವಿರ ಎಕರೆ ಕೈಗಾರಿಕಾ ಪ್ರದೇಶಕ್ಕೆ ಜಮೀನು ಹಸ್ತಂತರ ಹಾಗೂ ಬೃಹತ್ ಕೈಗಾರಿಕೆಗಳ ಸ್ಥಾಪನೆಯ ಮಾತನಾಡುತ್ತಾರೆ, ನನ್ನ ಕ್ಷೇತ್ರ ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿದೆ, ಕೋಟ್ಯಾಂತರ ರೂ ಬೆಲೆ ಬಾಳುವ 873 ಎಕರೆ ಜಮೀನಿದೆ, ಅಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿದರೆ 50 ಸಾವಿರದಿಂದ 1 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಇಷ್ಟಾದರೂ ಈ ವಿಳಂಬ ಧೋರಣೆ ಏಕೆ ಎಂದು ಪ್ರಶ್ನಿಸಿದರು.

ಸಚಿವ ನಿರಾಣಿ ಹೇಳಿಕೆಗೆ ಪ್ರತಿರೋಧ


ಕೈಗಾರಿಕಾ ಸಚಿವ ನಿರಾಣಿ ಇದಕ್ಕೂ ಮುನ್ನಾ ಮಾತನಾಡಿ,ಕಳೆದ 18 ತಿಂಗಳಿಂದ ಪತ್ರ ವ್ಯವಹಾರ ನಡೆಸಿದ್ದರೂ, ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆಗೆ ಜಮೀನು ಹಸ್ತಂತರವಾಗಿಲ್ಲ, ಈ ಕಾರ್ಯ ಮುಗಿದ ಕೂಡಲೇ ಕೈಗಾರಿಕಾ ವಲಯ ಮಾಡುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಿದ್ದಂತೆ ಶಾಸಕಿ ರೂಪಕಲಾ ಶಶಿಧರ್ ಪ್ರತಿರೋಧ ಒಡ್ಡಿದರು ಅವರಿಗೆ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಸಚಿವ ದೇಶಪಾಂಡೆ ಬೆಂಬಲ ವ್ಯಕ್ತಪಡಿಸಿದರು.
ಮಾಜಿ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ನಾನು ಕೈಗಾರಿಕಾ ಸಚಿವನಾಗಿದ್ದಾಗ ಸಾವಿರಾರು ಎಕರೆ ಸರ್ಕಾರಿ ಜಾಗ ಕೆಐಡಿಬಿಗೆ ಹಸ್ತಂತರಿಸಿದ್ದೇನೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಸ್ಥಾಪಿಸಲು ಜಮೀನು ಒದಗಿಸುವುದು ಕಷ್ಟ, ಅಷ್ಟೊಂದು ಹಣ ನೀಡಿ ಉದ್ಯಮಿಗಳು ಜಾಗ ಖರೀದಿ ಮಾಡಲು ಮುಂದೆ ಬರಲ್ಲ, ಕೆಜಿಎಫ್ ದೂರವಿಲ್ಲ, ಅಲ್ಲಿ ಸರ್ಕಾರಿ ಜಾಗವಿದೆ, ಕಂದಾಯ ಇಲಾಖೆಯೂ ಕೈಗಾರಿಕಾ ಇಲಾಖೆಯ ಸಹೋದರನಿದ್ದಂತೆ ಸಿಎಂ ಮಧ್ಯೆ ಪ್ರವೇಶಿಸಿ ಕೈಗಾರಿಕೆ ವಲಯ ಮಂಜೂರು ಮಾಡಿ ಎಂದರು. ಶಾಸಕ ಕೆ.ಶ್ರೀನಿವಾಸಗೌಡರು, ಜಮೀನು ಹಸ್ತಂತರಕ್ಕೆ ಎಷ್ಟುದಿನ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ ಉತ್ತರ ನೀಡಿ ಎಂದು ನಿರಾಣಿಯವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಕಾಗೇರಿ ಅವರು, ಸಿಎಂ ಉತ್ತರ ನೀಡುವಂತೆ ಸೂಚಿಸಿದಾಗ ಸಿಎಂ. ಶಾಸಕರ ಮನವಿಗೆ ಸ್ಪಂದಿಸಿ ಕೈಗಾರಿಕಾ ವಲಯ ಸ್ಥಾಪನೆ, ಜಮೀನು ಹಸ್ಥಂತರ ಪ್ರಕ್ರಿಯೆಗೆ ಕೂಡಲೇ ಅಗತ್ಯಕ್ರಮ ವಹಿಸುವ ಭರವಸೆ ನೀಡಿದರು.
ಒಟ್ಟಾರೆ ಸರ್ಕಾರದ ಮೇಲೆ ಒತ್ತಡ ತಂದು ಮುಖ್ಯಮಂತ್ರಿಗಳಿಂದಲೇ ಕೈಗಾರಿಕಾ ವಲಯ ಮಂಜೂರಿಗೆ ಸದನದಲ್ಲಿ ಒಪ್ಪಿಗೆ ಪಡೆಯುವಲ್ಲಿ ಶಾಸಕಿ ರೂಪಕಲಾ ಯಶಸ್ವಿಯಾದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ಇಂಜಿನಿಯರ್ಸ್ ದಿನಾಚರಣೆ-ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯರವರ ಜನ್ಮದಿನಾಚರಣೆ

ನೆಹರು ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.) ಅಬ್ಬನಡ್ಕ ನಂದಳಿಕೆ ವತಿಯಿಂದ ಸಂಘದ ರಂಗಮಂದಿರದಲ್ಲಿ ಇಂಜಿನಿಯರ್ಸ್ ದಿನಾಚರಣೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ ರವರು ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದವರು ಸರ್ ಎಂ. ವಿಶ್ವೇಶ್ವರಯ್ಯ ಅವರು ಪರಿಶ್ರಮದಿಂದ ರಾಜ್ಯದಲ್ಲಿ ಜಲಾಶಯ ನಿರ್ಮಾಣ ಮಾಡಲು ಸಾಧ್ಯವಾಯಿತು. ವಿಶ್ವೇಶ್ವರಯ್ಯ ಅವರು ಬುದ್ಧಿ ಶಕ್ತಿಯಿಂದ ರಾಜ್ಯದಲ್ಲಿ ಹಲವು ಯೋಜನೆಗಳು ಜಾರಿಯಾಗಿ ಬಡಜನರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ಅನುಕೂಲವಾಗಿದೆ. ಅಂತಹ ಮಹನೀಯರ ಆದರ್ಶ ಗುಣಗಳನ್ನು ಇಂದಿನ ಯುವ ಎಂಜಿನಿಯರ್ಗಳು ಅಳವಡಿಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು. 
ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ, ಉಪಾಧ್ಯಕ್ಷರಾದ ಸುರೇಶ್ ಅಬ್ಬನಡ್ಕ, ಕೋಶಾಧಿಕಾರಿ ವೀಣಾ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ ಲಲಿತಾ ಆಚಾರ್ಯ, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ಕೋಟ್ಯಾನ್, ಸದಸ್ಯರಾದ ಪದ್ಮಶ್ರೀ ಪೂಜಾರಿ, ಕೀರ್ತನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.




ಶ್ರೀನಿವಾಸಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ. ಎಲ್ಲೇ ಮೂಲ ಸೌಕರ್ಯದ ಕೊರತೆ ಕಂಡುಬಂದರೂ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಮುದಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಟಪಲ್ಲಿ ಗ್ರಾಮಕ್ಕೆ ಗುರುವಾರ ಶಾಸಕ ಕೆ.ಆರ್.ರಮೇಶ್ ಕುಮಾರ್ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸರ್ಕಾರಿ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಿಲ್ಲ. ಯಾವುದೇ ಸೌಲಭ್ಯವಿರಲಿ ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗಿದೆ. ಅಗತ್ಯ ಇರುವ ಕಡೆ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗಿದೆ. ಗ್ರಾಮೀಣ ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿಗೆ ಗಮನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಸುಬ್ಬನಾಯಕ್, ಚಲಪತಿ, ಕಿಟ್ಟಣ್ಣ ಕುಟುಂಬದ ಸದಸ್ಯರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

ಕುಂದಾಪುರ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಕ-ಶಿಕ್ಷಕ ಸಭೆ

ಮಕ್ಕಳು ಮನೆಯ ಸಂಪತ್ತು. ಆ ಮಕ್ಕಳ ಆಗು ಹೋಗುಗಳನ್ನು ಪೋಷಕರು ಅರಿತುಕೊಳ್ಳಬೇಕು.ಪರಸ್ಪರ ಪ್ರೀತಿ ,ವಿಶ್ವಾಸ ಅವರಲ್ಲಿ ಬೆಳೆಸಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರು ಹಾಗೂ ಆಪ್ತ ಸಮಾಲೋಚರಾದ ಲೆಸ್ಲಿ ಆರೋಜಾರವರು ಹೇಳಿದರು.

ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ರಕ್ಷಕ-ಶಿಕ್ಷಕ ಸಭೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶರು ಹಾಗೂ ಆಪ್ತ ಸಮಾಲೋಚಕರಾದ ಶ್ರೀ ಲೆಸ್ಲಿ ಆರೋಜಾರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಕರ್ತವ್ಯವಿದೆ. ಯವ್ವನ ಕಾಲಿಡುತ್ತಿರುವಾಗ ಮಕ್ಕಳ ಕಡೆ ತಮ್ಮ ಗಮನ ಅವಶ್ಯ. ಮಾದಕ ವಸ್ತುಗಳ ಚಟಕ್ಕೆ ಬಲಿಯಾಗದಂತೆ ನೋಡಿ ಕೊಳ್ಳಬೇಕು ಎಂದು ಅನೇಕ ಅಗತ್ಯ ಮಾಹಿತಿಗಳನ್ನು ಪೋಷಕರಿಗೆ ತಿಳಿಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು,ಸ್ಥಳೀಯ ಚರ್ಚಿನ ಧರ್ಮ ಗುರುಗಳು ಆಗಿರುವ ಅತೀ ವಂದನೀಯ ಫಾದರ್ ಸ್ಟ್ಯಾನಿ ತಾವರೋ ರವರು ವಹಿಸಿದ್ದು, ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ,ಅವರ ಊಟೋಪಚಾರ ಕಡೆ ತಮ್ಮ ಗಮನವಿರಲಿ ಎನ್ನುತ್ತ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ತಯಾರಿ ಅಗತ್ಯ. ನಮ್ಮ ವಿದ್ಯಾ ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆ ಗೆ ಎಲ್ಲಾ ರೀತಿಯ ತರಬೇತಿ ನೀಡುತ್ತದೆ. ತಮ್ಮ ಮಕ್ಕಳನ್ನು ಕಳಿಸಿ ಪ್ರೋತ್ಸಾಹಿಸಿ ಎಂದು ಹೇಳಿದರು. ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿರುವ ರೇಷ್ಮಾ ಫೆರ್ನಾಂಡಿಸ್ ರವರು ಉಪಸ್ಥಿತರಿದ್ದು, ಪೋಷಕರಿಗೆ ಕಾಲೇಜಿನ ನಿಯಮಗಳನ್ನು ಹಾಗೂ ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಪಾಲಿಸುವ ಕುರಿತು ಮಾಹಿತಿ ನೀಡಿ, ಪೋಷಕರಿಗೆ ಧನ್ಯವಾದಗಳನ್ನು ಹೇಳಿದರು.

ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ ,ಕಾರ್ಯಕ್ರಮದ ಸಂಯೋಜಕರು, ಅರ್ಥ ಶಾಸ್ತ್ರ ಉಪನ್ಯಾಸಕಿಯರ ಪ್ರಾರ್ಥನೆಯೊಂದಿಗೆ, ಕನ್ನಡ ಉಪನ್ಯಾಸಕ ನಾಗರಾಜ್ ಶೆಟ್ಟಿ ಸ್ವಾಗತಿಸಿದರು. ಸಂಯೋಜಕರಾದ ಪ್ರೀತಿ ಕ್ರಾಸ್ತಾರವರು ವಂದಿಸಿ, ರಸಾಯನ ಶಾಸ್ತ್ರದ ಉಪನ್ಯಾಕಿ ಉಷಾ ಕಾರ್ಯಕ್ರಮ ನಿರೂಪಿಸಿದರು.

ಉಪ್ಪುಂದ ಚಂದ್ರಶೇಖರ ಹೊಳ್ಳ ದಂಪತಿಗೆ ಸನ್ಮಾನ

ಗ್ರಾಮೀಣಾಭಿವೃದ್ಧಿ ಹಾಗೂ ಕುಂದ ಕನ್ನಡ ಸಾಹಿತ್ಯ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಕುಂದ ಅಧ್ಯಯನ ಕೇಂದ್ರ ಉಪ್ಪುಂದ ಸಂಸ್ಥೆಯ ಮುಖ್ಯಸ್ಥ ಉಪ್ಪುಂದ ಚಂದ್ರಶೇಖರ ಹೊಳ್ಳ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ವರಮಹಾಲಕ್ಷ್ಮಿ ಹೊಳ್ಳ ದಂಪತಿಯನ್ನು ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಅವರ ಉಪ್ಪುಂದದ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್, ಸುರೇಖಾ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ, ಮಾಜಿ ಅಧ್ಯಕ್ಷ ಯು.ಎಸ್ ಶೆಣೈ ಹಾಗೂ ಲೇಖಕ ಕೋ. ರಮಾನಂದ ಕಾರಂತ ಹೊಳ್ಳ ದಂಪತಿಯನ್ನು ಗೌರವಿಸಿದರು.

ಶ್ರೀಮತಿ ಲಕ್ಷ್ಮೀದೇವಿ ಶ್ಯಾನುಭಾಗ ನಿಧನ

ಕುಂದಾಪುರದ ಬೇಳೂರಿನವರಾಗಿದ್ದು ಹೊಸಪೇಟೆಯ ಶ್ಯಾನುಭಾಗ ಇಂಟರ್‍ನ್ಯಾಶನಲ್ ಹೋಟೆಲ್ ಉದ್ಯಮ ಸಹಿತ ವಿವಿಧ ಉದ್ಯಮ ನಡೆಸುತ್ತಿರುವ ಬೇಳೂರು ಕಮಲಾಕ್ಷ ಶ್ಯಾನುಭಾಗರ ಧರ್ಮಪತ್ನಿ, ಶ್ಯಾನುಭಾಗ ಉದ್ಯಮ ಸಂಸ್ಥೆಗಳ ಪಾಲುದಾರರೂ ಆಗಿರುವ ಶ್ರೀಮತಿ ಲಕ್ಷ್ಮೀದೇವಿ ಶ್ಯಾನುಭಾಗ (70) ಸೆಪ್ಟೆಂಬರ್ 14 ರಂದು ನಿಧನರಾದರು.
ದೈವಭಕ್ತರೂ, ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಪತಿಗೆ ಬೆನ್ನೆಲುಬಾಗಿ ಸ್ಪೂರ್ತಿ ತುಂಬುತ್ತಿದ್ದ ಇವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ದೇಶಕ್ಕಾಗಿ ಜೀವವನ್ನು ಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ರೈತ ಸಂಘ ಆಗ್ರಹ

ಕೋಲಾರ,ಸೆ-15, ದೇಶಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕಾಯುವ ಯೋಧ, ಅನ್ನ ಹಾಕುವ ರೈತರನ್ನು ಸರ್ಕಾರಗಳು ನಿರ್ಲಕ್ಷೆ ಮಾಡುತ್ತಾ ಬರುತ್ತಿವೆ. ಅತಿವೃಷ್ಟಿ ಅನಾವೃಷ್ಟಿಯಾದಾಗ ರೈತರು ಕಛೇರಿಗಳಿಗೆ ಪರಿಹಾರಕ್ಕೆ ಅಲೆದಾಡಿದರೆ ದೇಶದ ಗಡಿಭಾಗ ಕಾಯುವ ನಿವೃತ್ತ ಯೋಧÀರು ಸರ್ಕಾರ ಆದೇಶದಂತೆ ಭೂ ಮಂಜೂರಾತಿಗೆ ಕಛೇರಿಗೆ ಅಲೆದಾಡಿ ಸುಸ್ತಾಗಿ ಭೂಮಿಯು ಬೇಡ ಈ ಕಷ್ಟವು ಬೇಡ ಎಂದು ಕಣ್ಣೀರು ಸುರಿಸುತ್ತಿರುವ ಲಕ್ಷಾಂತರ ಯೋಧರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ಹಾಗೂ ಜಿಲ್ಲೆಯ ಕಂದಾಯ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯಸ್ಥೆ ವಿರುದ್ದ ಆರೋಪ ಮಾಡಿದರು.
ಸರ್ಕಾರಗಳ ನಿರ್ಲಕ್ಷ ದೇಶಕ್ಕಾಗಿ ಸೇವೆ ಸಲ್ಲಿಸಿ ವೀರ ಮರಣ ಹೊಂದಿದ ಹಾಗೂ ನಿವೃತ್ತ ಯೋಧರಿಗೆ ಸರ್ಕಾರವು ಜೀವನೋಪಾಯಕ್ಕಾಗಿ ನೀಡಬೇಕಾದ ಭೂಮಿ ಇನ್ನು ಶೇಕಡ 90 ರಷ್ಟು ಸೈನಿಕರ ಕೈ ಸೇರಿಲ್ಲ, 2 ದಶಕಗಳಿಂದಲೂ ಸರ್ಕಾರ ಹುಸಿ ಭರವಸೆ ನೀಡುತ್ತಲೇ ಬರುತ್ತಿವೆ. ಸೇವೆಯಲ್ಲಿದ್ದಾಗ ಹುತಾತ್ಮರಾದರೆ ಅಥವಾ ನಿವೃತ್ತರಾದರೆ ಸರ್ಕಾರದಿಂದ 4 ಎಕರೆ 18 ಗುಂಟೆ ಕೃಷಿ ಭೂಮಿ ನೀಡಬೇಕೆಂದು ಸರ್ಕಾರ ಅಧಿಸೂಚನೆ ಹೊರಡಿಸಿ ಆದೇಶ ತುರ್ತು ಪರಿಸ್ತಿತಿಗೆ ಮಾತ್ರ ಸೀಮಿತವಾಗಿದೆಂದು ಆಕ್ರೊಷ ವ್ಯಕ್ತಪಡಿಸಿದರು.
ನಿವೃತ್ತರಾದ ಯೋಧರು ಜಿಲ್ಲಾಧಿಕಾರಿ ಕಚೇರಿಯಿಂದ ತಾಲ್ಲೂಕು ಕಛೇರಿಗೆ, ತಾಲ್ಲೂಕು ಕಛೇರಿಯಿಂದ ನಾಡ ಕಚೇರಿಗೆ ಅಲೆದಾಡಿ ಸುಸ್ತಾಗಿ ಭೂಮಿ ಆಸೆಯನ್ನು ಬಿಟ್ಟಿರುವ ಜೊತೆಗೆ ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟ ಸೈನಿಕರ ಹಗಲು ರಾತ್ರಿಯ ಕಷ್ಟಕ್ಕೆ ಸ್ಪಂಧಿಸದ ಅಧಿಕಾರಿಗಳು ಭೂ ಮಂಜೂರಾತಿಯಗಬೇಕಾದರೆ ದಲ್ಲಾಳಿಗಳ ಮುಖಾಂತರ ಹಣ ನೀಡಿದರೆ ಮಾತ್ರ ನಿಮ್ಮ ಕಡತವನ್ನು ಮುಂದೆ ಟೇಬಲ್‍ಗೆ ಕಳುಹಿಸುತ್ತೇವೆಂದು ಬೇಜವಾಬ್ದಾರಿಯಿಂದ ಯೋಧರನ್ನು ನಡೆಸಿಕೊಳ್ಳುತ್ತಿದ್ದಾರೆಂದು ತಾಲ್ಲೂಕು ದಂಡಾಧಿಕಾರಿಗಳ ವಿರುದ್ದ ಆರೋಪ ಮಾಡಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ದೇಶದ ಹೊರಗಿನ ಸೈನಿಕರೊಂದಿಗೆ ಹೋರಾಡಿ ಗೆಲ್ಲಬಹುದು ಆದರೆ ನಮ್ಮ ಹಕ್ಕಿಗಾಗಿ ಹದಗೆಟ್ಟಿರುವ ವ್ಯವಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರದ ಮದ್ಯೆ ಸಿಲುಕಿರುವ ವ್ಯವಸ್ಥೆಯಲ್ಲಿ ನಮ್ಮವರ ವಿರುದ್ದ ಹೊರಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಪತ್ನಿಯರನ್ನು ಸರ್ಕಾರ ವೀರನಾರಿ. ಯಾರೆಂದು ಗೌರವಿಸುತ್ತಿದ್ದು ಅಂತಹವರಿಗೂ ಸಹ ಭೂ ಮಂಜೂರಾತಿಯಾಗಿಲ್ಲವೆಂದು ಅವ್ಯವಸ್ಥೆ ವಿರುದ್ದ ಅಸಮದಾನ ವ್ಯಕ್ತ ಪಡಿಸಿದರು.
ಜಿಲ್ಲಾಧ್ಯಂತ ಸಾವಿರಾರು ಎಕರೆ ಗೋಮಾಳ ಅಕ್ರಮ ದಾಖಲೆ ಸೃಷ್ಟಿ ಮಾಡಿಕೊಂಡು ಜನ ಪ್ರತಿನಿಧಿಗಳು, ರಿಯಲ್ ಎಸ್ಟೇಟ್ ದಂದೆಕೋರರು ಕೋಟಿ ಕೋಟಿಗೆ ಮಾರಾಟ ಮಾಡುತ್ತಿರುವ ಇಂತಹವರಿಗೆ ಭೂಮಿ ಸಿಗುತ್ತದೆ. ಆದರೆ ನಿಜವಾದ ಹೀರೋಗಳಾದ ದೇಶ ಕಾಯುವ ರೈತರಿಗೆ ಭೂ ರಹಿತ ಕೃಷಿಕನಿಗೆ ಭೂಮಿ ಮಂಜೂರಾತಿ ಎಂಬುದು ಆಕಾಶದ ಎತ್ತರದಲ್ಲಿರುವ ನಕ್ಷತ್ರದಂತಾಗಿದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾಡಿದರು.
ಒಂದು ವಾರದೊಳಗೆ ಮಾನ್ಯರು 6 ತಾಲ್ಲೂಕಿನ ಕಂದಾಯ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯಲ್ಲಿರುವ ನಿವೃತ್ತ ಯೋಧರ ಪಟ್ಟಿ ತರಿಸಿಕೊಂಡು ಸರ್ಕಾರದ ನಿಯಮದಂತೆ ಭೂ ಮಂಜೂರಾತಿ ಮಾಡಿ ನಿವೃತ್ತ ಯೋಧರಿಗೆ ಗೌರವ ಕೊಡುವಂತೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರು ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ನಿವೃತ್ತ ಯೋಧರ ಸಮಸ್ಯೆಯನ್ನು ಬಗೆ ಹರಿಸುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ವೆಂಕಟೇಶಪ್ಪ, ಮಾಲೂರು ತಾಲ್ಲೂಕು ಅಧ್ಯಕ್ಷ, ಯಲ್ಲಣ್ಣ, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಚಂದ್ರಪ್ಪ, ಪುತ್ತೇರಿ ರಾಜು, ಹರೀಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಚಾಂದ್‍ಪಾಷ, ಪಾರುಕ್‍ಪಾಷ, ಜಿಲ್ಲಾ ಉಪಾಧ್ಯಕ್ಷ ಸುನಿಲ್ ಕುಮಾರ್, ಬಂಗಾರಿ ಮಂಜು, ರಾಜೇಶ್, ಭಾಸ್ಕರ್, ಮುಂತಾದವರು ಇದ್ದರು.

ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಸ್ಥಳೀಯ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸಿ, ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸಲಾಯಿತು ಎಂದು ಹೇಳಿದೆ.
ಈಗ ರೂ.50 ಬಡ್ಡಿರಹಿತ ಹಾಗೂ ಶೇ.4 ರಷ್ಟು ಬಡ್ಡಿ ದರದಲ್ಲಿ ರೂ.50 ಸಾವಿರ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೂ.1 ಲಕ್ಷ ಬಡ್ಡಿರಹಿತ ಸಾಲ ನೀಡಲಾಗುವುದು. ಮಹಿಳೆಯರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರ ಪರ ಒಲವುಳ್ಳ ಅವರು, ಶ್ರೀಮಂತ ಉದ್ಯಮಿಗಳಿಗೆ ದೊಡ್ಡ ಮೊತ್ತದ ಸಾಲ ನೀಡುತ್ತಿದ್ದಾರೆ. ಅವರು ದೇಶ ತೊರೆದು ಹೋಗುತ್ತಿದ್ದಾರೆ. ಬಡವರಿಗೆ ಸಾಲ ನೀಡುತಿಲ್ಲ. ನೀಡಿದರೂ ಇರುವ ಅಲ್ಪಸ್ವಲ್ಪ ಜಮೀನು ಆಧಾರ ಪಡೆಯುತ್ತಾರೆ. ಸಾಲ ನೀಡುವುದು ತಡವಾದರೆ ಡಂಗುರ ಬಾರಿಸಿ ಮರ್ಯಾದೆ ಕಳೆಯುತ್ತಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಮಾತನಾಡಿ, ಬಡವರು ಮೋಸಗಾರರಲ್ಲ. ಅವರು ಪಡೆದುಕೊಂಡ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಅವರಳಿ ಜಿಲ್ಲೆಗಳಲ್ಲಿ ಸ್ತ್ರಿ ಶಕ್ತಿ ಸಂಘಗಳಿಗೆ ನೀಡಲಾಗಿರುವ ಕೋಟ್ಯಂತರ ರೂಪಾಯಿ ಸಾಲ ಸದುಪಯೋಗವಾಗುತ್ತಿದೆ. ಮಹಿಳೆಯರು ಉದ್ದೇಶಿತ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಗತಿಪರ ಚಿಂತಕರಾದ ಮಾವಳ್ಳಿ ಶಂಕರ್, ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಳ್ಳಿ ಶ್ರೀನಿವಾಸ್, ವೀರಸಂಗಯ್ಯ, ವೆಂಕಟೇಶ್, ಸಿ.ಎಂ.ಮುನಿಯಪ್ಪ ಮಹಿಳಾ ಜಾಗೃತಿ ಅಗತ್ಯ ಕುರಿತು ಮಾತನಾಡಿದರು.
ಮುಖಂಡರಾದ ದಿಂಬಾಲ ಅಶೋಕ್, ಸಂಜಯರೆಡ್ಡಿ, ಸುಬ್ಬಿರೆಡ್ಡಿ, ಶಂಕರ್ ಪ್ರಸಾದ್, ಸುಧಾಕರ್, ವೆಂಕಟರೆಡ್ಡಿ, ಮುನಿಶಾಮಿ, ಎಂ.ಶ್ರೀನಿವಾಸನ್, ವಿಶ್ವನಾಥ್, ಶ್ರೀಕೃಷ್ಣ, ಆಜಾಮ್ ಇದ್ದರು.