
15ಕ್ಕೂ ಅಧಿಕ ತಜ್ಞ ವೈದ್ಯರ ಭಾಗವಹಿಸುವಿಕೆ; 2 ಸಾವಿರಕ್ಕೂ ಅಧಿಕ ಜನರ ಆಗಮನ ನಿರೀಕ್ಷೆ

ಕುಂದಾಪುರ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ – ಜಿಲ್ಲೆ 317C ಇದರ ಆಶ್ರಯದಲ್ಲಿ, ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ಝಿಯಾ ಎಜುಕೇಷನಲ್ ಟ್ರಸ್ಟ್ (R) ಇವರ ಸಹಯೋಗದೊಂದಿಗೆ, ಆಗಸ್ಟ್ 30ರಂದು ಕುಂದಾಪುರ ತಾಲೂಕಿನ ಕಂಡ್ಲೂರಿನ ಕಾವ್ರಾಡಿ ಗ್ರಾಮದ ಝಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದ ಪ್ರಮುಖ ಆಕರ್ಷಣೆಯಾಗಿ ಉಡುಪಿಯ ಪ್ರತಿಷ್ಠಿತ ಆದರ್ಶ ಆಸ್ಪತ್ರೆಯ 15ಕ್ಕೂ ಅಧಿಕ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಲಿದ್ದು, ಸಾರ್ವಜನಿಕರಿಗೆ ನೇರವಾಗಿ ಆರೋಗ್ಯ ತಪಾಸಣೆ, ತಜ್ಞ ವೈದ್ಯಕೀಯ ಸಲಹೆ ಹಾಗೂ ಅಗತ್ಯ ಆರೋಗ್ಯ ಮಾರ್ಗದರ್ಶನವನ್ನು ನೀಡಲಿದ್ದಾರೆ. ಒಂದೇ ವೇದಿಕೆಯಲ್ಲಿ ವಿವಿಧ ವಿಭಾಗಗಳ ತಜ್ಞರಿಂದ ತಪಾಸಣೆ ಹಾಗೂ ಸಲಹೆ ಪಡೆಯುವ ಅಪೂರ್ವ ಅವಕಾಶವನ್ನು ಈ ಶಿಬಿರ ಒದಗಿಸಲಿದೆ.
ಶಿಬಿರದಲ್ಲಿ ಹೃದಯ ಸಂಬಂಧಿತ ತಪಾಸಣೆ, ಇಸಿಜಿ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ, ಕಣ್ಣಿನ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ಉಚಿತವಾಗಿ ನಡೆಸಲಾಗುವುದು. ವೈದ್ಯರ ಸಲಹೆಯ ಆಧಾರದ ಮೇಲೆ ಅಗತ್ಯವಿರುವವರಿಗೆ ಉಚಿತ ಔಷಧ ವಿತರಣೆ ಹಾಗೂ ಸೂಕ್ತ ವೈದ್ಯಕೀಯ ಮಾರ್ಗದರ್ಶನವೂ ನೀಡಲಾಗುವುದು.
ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದ ಹೆಚ್ಚುತ್ತಿರುವ ಹೃದಯರೋಗ, ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ತನ್ನ ಸಮಾಜಮುಖಿ ಸೇವಾ ಧ್ಯೇಯದಡಿ ಈ ಮಹತ್ವದ ಆರೋಗ್ಯ ಸೇವಾ ಕಾರ್ಯಕ್ರಮವನ್ನು ಆಯೋಜಿಸಿದೆ.
ಶಿಬಿರಕ್ಕೆ ಎರಡು ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಕುಂದಾಪುರ ತಾಲೂಕಿನ ವಿವಿಧ ಭಾಗಗಳ ಸಾರ್ವಜನಿಕರು, ಸ್ಥಳೀಯರು, ಹಿರಿಯ ನಾಗರಿಕರು ಹಾಗೂ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಉಚಿತ ಆರೋಗ್ಯ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್, ಝಿಯಾ ಎಜುಕೇಷನಲ್ ಟ್ರಸ್ಟ್ (R) ಹಾಗೂ ಆದರ್ಶ ಆಸ್ಪತ್ರೆ, ಉಡುಪಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜನರ ಆರೋಗ್ಯಕ್ಕೆ ಆದ್ಯತೆ, ಸಮಾಜದ ಒಳಿತಿಗೆ ಬದ್ಧತೆ ಎಂಬ ಆಶಯದೊಂದಿಗೆ ನಡೆಯಲಿರುವ ಈ ಬೃಹತ್ ವೈದ್ಯಕೀಯ ಶಿಬಿರವು ಕುಂದಾಪುರ ತಾಲೂಕಿನ ಜನತೆಗೆ ಮಹತ್ವದ ಆರೋಗ್ಯ ಸೇವಾ ಕಾರ್ಯಕ್ರಮವಾಗಿ ಪರಿಣಮಿಸಲಿದೆ.

