

ದಿನಾಂಕ 20-11-2026ನೇ ಶುಕ್ರವಾರದಂದು ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ 73ನೇ ಸಹಕಾರ ಸಪ್ತಾಹ ಆಚರಣೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಪ್ರತಿಷ್ಟಿತ “ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ”ಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಜಿ.ಟಿ. ದೇವೇಗೌಡ ರವರಿಂದ ಸಂಘದ ಅಧ್ಯಕ್ಷರಾದ ಶ್ರೀ ಲೂವಿಸ್ ಲೋಬೊ ರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ. ಖಾದರ್ ಫರೀದ್, ಸಹಕಾರ ಸಚಿವರಾದ ಶ್ರೀ ಲಕ್ಷ್ಮಣ ಎಸ್. ಸವದಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಶ್ರೀ ಐವನ್ ಡಿ’ಸೋಜ, ಶ್ರೀ ಯಶ್ಪಾಲ್ ಎ. ಸುವರ್ಣ, ಶ್ರೀ ಡಿ. ವೇದವ್ಯಾಸ ಕಾಮತ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರೀಮತಿ ಲಾವಣ್ಯ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಸಹಕಾರ ಮಹಾಮಂಡಳದ ನಿರ್ದೇಶಕರುಗಳು ಉಪಸ್ಥಿತರಿದ್ದರು.
1997ರ ಡಿಸೆಂಬರ್ 16ರಂದು ಕಥೋಲಿಕ್ ಸಭಾ ಕಲ್ಯಾಣಪುರ ಮತ್ತು ಉಡುಪಿ ವಲಯದ ಜಂಟಿ ಆಶ್ರಯದಲ್ಲಿ ಸ್ಥಾಪನೆಗೊಂಡ ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2027ರಲ್ಲಿ ತನ್ನ ಯಶಸ್ವಿ 30 ವರ್ಷಗಳನ್ನು ಪೂರ್ಣಗೊಳಿಸುವ ಹೊಸ್ತಿಲಿನಲ್ಲಿದ್ದು ಪ್ರಗತಿ ಪಥದೆಡೆಗೆ ಸಾಗುತ್ತಿದೆ. ಉಡುಪಿ ಕೆ.ಎಂ. ಮಾರ್ಗದಲ್ಲಿರುವ ಕ್ರಿಸ್ತಜ್ಯೋತಿ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿ ಆಡಳಿತ ಕಚೇರಿಯೊಂದಿಗೆ ಉಡುಪಿ ಶಾಖೆ ಮತ್ತು ಮಲ್ಪೆ, ಉದ್ಯಾವರ, ಶಿರ್ವ ಹಾಗೂ ಹೂಡೆ-ಕೆಮ್ಮಣ್ಣುವಿನಲ್ಲಿ ಒಟ್ಟು ಐದು ಶಾಖೆಗಳನ್ನು ಹೊಂದಿದ್ದು ಉತ್ತಮ ರೀತಿಯ ಸೇವೆಯನ್ನು ಒದಗಿಸುತ್ತಿದೆ. ಸಂಸ್ಥೆಯ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಉಡುಪಿ ಅಂಬಾಗಿಲಿನಲ್ಲಿ ನೂತನ ಶಾಖೆ ತೆರೆಯುವಲ್ಲಿ ಮತ್ತು ಸಂಸ್ಥೆಯ ಆಡಳಿತ ಕಛೇರಿಗಾಗಿ ಸ್ವಂತ ಕಟ್ಟಡ ನಿರ್ಮಾಣದ ಕಾರ್ಯವೂ ಪ್ರಗತಿಯಲ್ಲಿದೆ. ಪ್ರಸ್ತುತ ಶ್ರೀ ಲೂವಿಸ್ ಲೋಬೊ ಅಧ್ಯಕ್ಷರಾಗಿ, ಶ್ರೀ ಜೇಮ್ಸ್ ಡಿ’ಸೋಜ ಉಪಾಧ್ಯಕ್ಷರಾಗಿ, ಶ್ರೀ ಸಂದೀಪ್ ಎ. ಫೆನಾರ್ಂಡಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮತ್ತು 12 ಮಂದಿ ನಿರ್ದೇಶಕರು ಮತ್ತು ಎಲ್ಲಾ ಸಿಬ್ಬಂದಿಗಳು ಸಂಘದ ಸರ್ವತೋಮುಖ ಏಳಿಗೆಗಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 30 ವರ್ಷಗಳಿಂದಲೂ ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ಪ್ರತಿ ವರ್ಷವೂ ತನ್ನ ಸದಸ್ಯರಿಗೆ ಪಾಲು ಮುನಾಫೆ ವಿತರಿಸುತ್ತಾ ಬಂದಿದೆ. 2025-26ನೇ ಸಾಲಿನಲ್ಲಿ ಸಂಘವು 1.25 ಕೋಟಿ ಲಾಭಂಶ ಗಳಿಸಿ, ಸದಸ್ಯರುಗಳಿಗೆ 17% ಪಾಲು ಮುನಾಫೆಯನ್ನು ವಿತರಿಸಿರುತ್ತದೆ. ಸಾಲ ವಸೂಲಾತಿಯಲ್ಲಿ ಶೇಕಡಾ 97% ಪ್ರಮಾಣವನ್ನು ಹೊಂದಿದ್ದು, ಲೆಕ್ಕಪರಿಶೋಧನೆಯಲ್ಲಿ “ಎ” ಶ್ರೇಣಿ ಪಡೆದುಕೊಂಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಂಸ್ಥೆಯಲ್ಲಿ 8,000ಕ್ಕೂ ಮಿಕ್ಕಿ ಸದಸ್ಯರುಗಳು, ರೂ. 1.25 ಕೋಟಿ ಪಾಲು ಬಂಡವಾಳ, ರೂ. 67ಕೋಟಿ ಠೇವಣಿಗಳು, ರೂ. 57 ಕೋಟಿ ಹೊರಬಾಕಿ ಸಾಲ, ರೂ. 15 ಕೋಟಿ ಹೂಡಿಕೆಗಳು ಮತ್ತು ರೂ. 4.62 ಕೋಟಿ ನಿಧಿಗಳನ್ನು ಹೊಂದಿದೆ. ಸಂಸ್ಥೆಯ ಸದಸ್ಯರು/ಗ್ರಾಹಕರಿಗಾಗಿ ಉತ್ತಮ ರೀತಿಯ ಸಹಕಾರಿ ಸೇವೆಯನ್ನು ನೀಡುತ್ತಿದೆ. ಕೇವಲ ಬ್ಯಾಂಕಿಂಗ್ ಉದ್ದೇಶದಿಂದ ಮಾತ್ರವಲ್ಲದೇ ಅನೇಕ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಸಂಸ್ಥೆಯು ಮಾಡುತ್ತಾ ಬಂದಿರುತ್ತದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಧನಸಹಾಯ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ಸಂಸ್ಥೆಯು ನೀಡುತ್ತಾ ಬಂದಿರುತ್ತದೆ.


