

ದಾಖಲೆಗಳ ಪರಿಶೀಲನೆ ನಡೆಸದೆ ಏಕಾಏಕಿ ತೆರವು ಕಾರ್ಯಾಚರಣೆಗೆ ಮುಂದಾಗಿರುವುದಕ್ಕೆ ಆಕ್ಷೇಪ ನ್ಯಾಯಾಲಯದ ಆದೇಶ ಪಾಲಿಸುವಂತೆ ಆಗ್ರಹ
ಶ್ರೀನಿವಾಸಪುರ: ತಾಲೂಕಿನ ಶೇಷಾಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಂದಾಯ ಅಧಿಕಾರಿಗಳು ಪಾಲಿಸದೆ, ಸೂಕ್ತ ದಾಖಲೆಗಳ ಪರಿಶೀಲನೆ ನಡೆಸದೇ ಜೆಸಿಬಿ ಸಮೇತ ಜಮೀನಿನ ಸ್ಥಳಕ್ಕೆ ಆಗಮಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಶೇಷಾಪುರ ಗ್ರಾಮದ ಗೋಪಾಲ್ ಆರೋಪಿಸಿದ್ದಾರೆ.
ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಲ್ದೂರು ಕಂದಾಯ ವೃತ್ತಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಕೇವಲ ಒಂದು ದಿನದ ಮೆಮೊ ಪಡೆದು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಬೇರೆ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು ಕರೆಸಿಕೊಂಡು ಜೆಸಿಬಿ ಸಮೇತ ಜಮೀನಿನ ಬಳಿ ಬಂದಿದ್ದಾರೆ ಎಂದು ದೂರಿದರು.
ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಜಮೀನಿನ ಮೇಲೆ ಹಲವು ವರ್ಷಗಳಿಂದ ಹಕ್ಕು ಮತ್ತು ಅನುಭವವಿದೆ. ಸರ್ವೆ ನಂಬರ್ 62 ನಮ್ಮ ಕುಟುಂಬದ ಹೆಸರಿನಲ್ಲಿದ್ದು, ಸರ್ವೆ ನಂಬರ್ 74 ನಮ್ಮ ತಾತನವರ ಹೆಸರಿನಲ್ಲಿದೆ. ಇವು ಪಿತ್ರಾರ್ಜಿತ ಆಸ್ತಿಗಳಾಗಿವೆ. ಸರ್ವೆ ನಂಬರ್ 73ಕ್ಕೆ ಸಂಬಂಧಿಸಿದಂತೆ ಸರ್ಕಾರಿ ತೋಪು ಎಂಬ ದಾಖಲೆ ಇದ್ದರೂ, ಹಳೆಯ ಟಿಪ್ಪಣಿ ದಾಖಲೆಗಳಲ್ಲಿ ತಮ್ಮ ತಾತನವರ ಹೆಸರು ನಮೂದಾಗಿದೆ ಎಂದು ತಿಳಿಸಿದರು.
ಅಲ್ಲದೆ, 1994ರ ಸೆಪ್ಟೆಂಬರ್ 13ರಂದು ಅಂದಿನ ಶಾಸಕ ವೆಂಕಟಶಿವಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸಭೆಯಲ್ಲಿ ಸರ್ವೆ ನಂಬರ್ 73 ಸೇರಿದಂತೆ ಸಂಬಂಧಪಟ್ಟ ಜಮೀನುಗಳನ್ನು ಸಕ್ರಮಗೊಳಿಸುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಂಡಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದರು.
ಮುಳಬಾಗಿಲು ತಾಲೂಕಿನ ಮೂಡಿನೂರು ಗ್ರಾಮದ ಸರ್ವೆ ನಂಬರ್ಗೆ ಸಂಬಂಧಿಸಿದಂತೆ ಮಂಜುನಾಥ್ ಎಂಬುವವರ ಕುಟುಂಬದೊಂದಿಗೆ 1991ರಿಂದಲೂ ನ್ಯಾಯಾಲಯದಲ್ಲಿ ಜಮೀನು ವಿವಾದ ನಡೆಯುತ್ತಿದೆ. ಈ ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದ್ವೇಷ ಸಾಧಿಸುವ ಉದ್ದೇಶದಿಂದ ಪ್ರಸ್ತುತ ಬೆಳವಣಿಗೆಗಳು ನಡೆಯುತ್ತಿವೆಯೇ ಎಂಬ ಅನುಮಾನವಿದೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ದೂರುದಾರರಿಗೆ ಕಾನೂನುಬದ್ಧ ನೋಟಿಸ್ ಜಾರಿಗೊಳಿಸಿ, ಎರಡೂ ಕಡೆಯ ದಾಖಲೆಗಳನ್ನು ಪರಿಶೀಲಿಸಿ, ವರದಿ ಬಂದ ನಂತರ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಈ ಆದೇಶದ ಪ್ರತಿಗಳನ್ನು ಕಳೆದ ತಿಂಗಳ 16ರಂದು ತಹಶೀಲ್ದಾರ್, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ (ಎಸಿ) ಹಾಗೂ ಭೂ ದಾಖಲೆಗಳ ಉಪನಿರ್ದೇಶಕರು (ಡಿಡಿಎಲ್ಆರ್) ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆದರೂ ಇದುವರೆಗೂ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನಿನ ಪ್ರಕಾರ ಮೊದಲು ತಮ್ಮ ದಾಖಲೆಗಳನ್ನು ಪರಿಶೀಲಿಸಿ, ನಂತರ ಸರ್ವೆ ನಡೆಸಬೇಕು. ಅಕ್ರಮವಾಗಿ ಜಮೀನು ಒತ್ತುವರಿ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಿ. ಅದಕ್ಕೆ ತಮ್ಮ ವಿರೋಧವಿಲ್ಲ. ಆದರೆ ಯಾವುದೇ ದಾಖಲೆ ಪರಿಶೀಲನೆ ನಡೆಸದೆ ಏಕಾಏಕಿ ಜೆಸಿಬಿ ತಂದು ಕ್ರಮಕ್ಕೆ ಮುಂದಾಗುವುದು ಸರಿಯಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ, ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಸುಮಾರು 60 ಎಕರೆಗೂ ಅಧಿಕ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ತೆರವು ಆದೇಶವಾಗಿರುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಹಾಗೂ ತಡೆಯಾಜ್ಞೆ ಪ್ರಕ್ರಿಯೆ ನಡೆಯುತ್ತಿರುವಾಗಲೂ ಮರುಸರ್ವೆ ಹೆಸರಿನಲ್ಲಿ ಅಧಿಕಾರಿಗಳು ಮತ್ತೆ ಮತ್ತೆ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ಜಮೀನಿನ ಪಕ್ಕದಲ್ಲಿರುವ ಸುಮಾರು 1 ಎಕರೆ 25 ಗುಂಟೆ ಸರ್ಕಾರಿ ತೋಪಿನ ಜಮೀನನ್ನು ತಾವು ಖಾಲಿಯಾಗಿಯೇ ಬಿಟ್ಟಿದ್ದೇವೆ. ಆ ಜಮೀನಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಗಿಡಗಳನ್ನು ನೆಡಿಸುವುದಾಗಲಿ ಅಥವಾ ಬೇರೆಯವರಿಗೆ ಜಮೀನು ನೀಡುವುದಾಗಲಿ ಮಾಡಲು ಅಧಿಕಾರಿಗಳಿಗೆ ಯಾವ ಅಧಿಕಾರವಿದೆ? ಅದಕ್ಕೂ ಕಾನೂನುಬದ್ಧ ಪ್ರಕ್ರಿಯೆ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.
ಜೆಸಿಬಿಯನ್ನು ಯಾರ ಸೂಚನೆಯ ಮೇರೆಗೆ ಸ್ಥಳಕ್ಕೆ ತರಲಾಗಿದೆ ಎಂಬ ಪ್ರಶ್ನೆಗೆ, ಯಲ್ದೂರು ಗ್ರಾಮ ಲೆಕ್ಕಾಧಿಕಾರಿ ಚಲಪತಿ ಅವರು ಜೆಸಿಬಿ ಕರೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ ಎಂದು ತಿಳಿಸಿದರು. ಸಂಜೆ ಸುಮಾರು 6 ಗಂಟೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿರುವುದರ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಒಂದು ಕಾನೂನು, ರಾಜಕೀಯ ಪ್ರಭಾವ ಹೊಂದಿರುವವರಿಗೆ ಮತ್ತೊಂದು ಕಾನೂನು ಎಂಬ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಅಧಿಕಾರಿಗಳು ಮೊದಲು ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸಿ, ಎರಡೂ ಕಡೆಯ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು. ರೈತರ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸಬಾರದು ಎಂದು ಶೇಷಾಪುರ ಗೋಪಾಲ್ ಒತ್ತಾಯಿಸಿದರು.

