

ಚನ್ನರಾಯಪಟ್ಟಣ (ಹಾಸನ): ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ-ಬೈಂದೂರು ತಾಲೂಕಿನ ನಾಡ-ಪಡುಕೋಣೆ ಸಮೀಪದ ಚುಂಗಿಗುಡ್ಡೆ ನಿವಾಸಿ, ಯುವ ಇಂಜಿನಿಯರ್ ಅಕ್ಷಯ್ ಎನ್. ಹೆಬ್ಬಾರ್ (26) ಮೃತಪಟ್ಟಿದ್ದಾರೆ.
ಘಟನೆಯ ವಿವರ:
ಚುಂಗಿಗುಡ್ಡೆಯ ಕೃಷಿಕ ಹಾಗೂ ಎಲ್ಐಸಿ ಏಜೆಂಟ್ ಆಗಿರುವ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್, ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಸದ್ಯ ‘ವರ್ಕ್ ಫ್ರಮ್ ಹೋಮ್’ (ಮನೆಯಿಂದಲೇ ಕೆಲಸ) ಮಾಡುತ್ತಿದ್ದ ಅವರು, ತಿಂಗಳಿಗೊಮ್ಮೆ ಕಚೇರಿಗೆ ಭೇಟಿ ನೀಡುವ ನಿಯಮದಂತೆ ಭಾನುವಾರ (ನವೆಂಬರ್ 15) ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ತಮ್ಮ ಮನೆಯಿಂದ ಬೈಕ್ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
ಚನ್ನರಾಯಪಟ್ಟಣ ಸಮೀಪ ಬೈಕ್ ಚಲಾಯಿಸುತ್ತಿದ್ದ ವೇಳೆ, ಬೈಕ್ನ ಹ್ಯಾಂಡಲ್ ಪಕ್ಕದಲ್ಲಿ ಸಾಗುತ್ತಿದ್ದ ಟ್ರಕ್ಗೆ ತಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಅಕ್ಷಯ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಾವಂತ ಹಾಗೂ ಸ್ನೇಹಜೀವಿಯಾಗಿದ್ದ ಯುವ ಇಂಜಿನಿಯರ್ನ ಅಕಾಲಿಕ ನಿಧನಕ್ಕೆ ನಾಡ, ಪಡುಕೋಣೆ ಹಾಗೂ ಚುಂಗಿಗುಡ್ಡೆ ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

