

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಆಶ್ರಯದಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಮಾರ್ಗದರ್ಶನದಲ್ಲಿ 31-01-2027ರಂದು ಆದಿತ್ಯವಾರ ಕುಂದಾಪುರದಲ್ಲಿ ಪ್ರಪ್ರಥಮವಾಗಿ ನಡೆಯಲಿರುವ ಮ್ಯಾರಥಾನ್ ಓಟದ ಸ್ಪರ್ಧೆಗೆ “ಕುಂದಥಾನ್” (Kundathon) ಎಂಬ ಹೆಸರು ಆಯ್ಕೆಯಾಗಿದೆ. ‘ಆರೋಗ್ಯಕ್ಕಾಗಿ ಓಟ ಸಂತೋಷಕ್ಕಾಗಿ ಹೆಜ್ಜೆ’ ಎಂಬ ಘೋಷವಾಕ್ಯ ಸಹಿತ ಸುಂದರ ಅರ್ಥಪೂರ್ಣ ಲಾಂಛನ (Logo) ಆಯ್ಕೆ ಮಾಡಲಾಯಿತು.
ರಾಜ್ಯಮಟ್ಟದ ಹಲವರು ಭಾಗವಹಿಸಿದ್ದ ಈ ಲೋಗೋ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದವರು ಕಳುಹಿಸಿದ ಸ್ಪೂರ್ತಿದಾಯಕ ಹೆಸರು, ಘೋಷವಾಕ್ಯ ಹಾಗೂ ಚಿತ್ರಗಳಲ್ಲಿ ಅಂತಿಮ ಆಯ್ಕೆ ಪ್ರಕ್ರಿಯೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯಿತು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್, ಆಡಳಿತಾಧಿಕಾರಿ ಡಾ.ಶ್ರೀಧರ ರಂಗನಾಥ ಪೈ , ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ ಶಾಂತಾರಾಮ್ ಪ್ರಭು, ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಟಿ. ಸೋನ್ಸ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ ಕಾಮತ್, ನೇರಂಬಳ್ಳಿ ರಾಘವೇಂದ್ರ ರಾವ್, ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಕಾರ್ಯದರ್ಶಿ ಯು. ಎಸ್. ಶೆಣೈ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್ ಭಾಗವಹಿಸಿ ಆಯ್ಕೆಯನ್ನು ಅನುಮೋದಿಸಿದರು.
ಆಡಳಿತ ಮಂಡಳಿಯ ಸದಸ್ಯ ಕುಂದಥಾನ್ ಸಂಯೋಜಕರಾದ ಪ್ರಜ್ಞೇಶ್ ಪ್ರಭು ಲಾಂಛನ ಆಯ್ಕೆ ಬಗ್ಗೆ ವಿವರ ನೀಡಿದರು.
ಕುಂದಥಾನ್ ಸಮಿತಿಯ ಅರುಣ್ ಎ.ಎಸ್, ಶರಣ್ ಎಸ್.ಜೆ. ಲಾಂಛನ ಸ್ಪರ್ಧೆಯಲ್ಲಿ ಪಾಲ್ಗೊಂಡವರ ಮಾಹಿತಿ ನೀಡಿದರು.

