

ಕುಂದಾಪುರ : ಅಕ್ಟೋಬರ್ 22ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ, ಕುಂದಾಪುರ ತಾಲೂಕಿನ ಸರ್ಕಾರಿ ಇಲಾಖೆಗಳು, ಹಾಗೂ ಇತರ ಸಂಘ ಸಂಸ್ಥೆಗಳ ಮಾರ್ಗದರ್ಶನದಲ್ಲಿ 31-01-2027 ರಂದು ಕುಂದಾಪುರದಲ್ಲಿ ನಡೆಯಲಿರುವ ಮ್ಯಾರಥಾನ್ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಣಿಪಾಲದ ಮಾಹೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಉಪೇಂದ್ರ ನಾಯಕ್ ಅವರು ಮ್ಯಾರಥಾನ್ ನಡೆಸುವುದಕ್ಕೆ ಸಾಕಷ್ಟು ಪೂರ್ವ ತಯಾರಿ ಬೇಕಾಗುತ್ತದೆ. ಮುಖ್ಯವಾಗಿ ಸಂಘ ಸಂಸ್ಥೆಗಳ ಸಹಭಾಗಿತ್ವ ಮತ್ತು ಸಂಬಂಧಪಟ್ಟ ಇಲಾಖೆಗಳ ಅನುಮತಿ ಮುಖ್ಯವಾಗಿರುತ್ತದೆ. ಅಲ್ಲದೇ ಮ್ಯಾರಥಾನ್ ನಡೆಸುವುದಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಸಹ ಸರಿಯಾಗಿ ಗಮನಿಸಿ ಕ್ಲಪ್ತ ಸಮಯದಲ್ಲಿ ಸೇವೆಗೆ ಸಿದ್ಧರಾಗಿರಬೇಕು. ಅಂದರೆ ಅಲ್ಲಲ್ಲಿ ಅಂಬ್ಯುಲೆನ್ಸ್, ಮ್ಯಾರಥಾನ್ ಗೆ ಆಯ್ಕೆಯಾದ ರಸ್ತೆಯನ್ನು ಸರಿಯಾಗಿ ಗಮನಿಸುವುದು ಸಹ ಅವಶ್ಯಕವಾಗಿರುತ್ತದೆ. ವಿಶೇಷ ಸಮಿತಿಗಳ ರಚನೆ ಮತ್ತು ಅದರ ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಇನ್ನೋರ್ವ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರೊನ್ ಟ್ರೆವೊರಾ ಡಯಾಸ್ ಮಾತನಾಡಿ ಮ್ಯಾರಥಾನ್ ನಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ. ವಿಶೇಷ ವಿಭಾಗಗಳಲ್ಲಿ ಮ್ಯಾರಥಾನ್ ಅನ್ನು ಉತ್ತಮ ರೀತಿಯಲ್ಲಿ ಹೇಗೆ ಆಯೋಜಿಸಬಹುದಾಗಿದೆ ಎಂಬುದರ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ ಶಾಂತಾರಾಮ್ ಪ್ರಭು ಮಾತನಾಡಿ ಭಂಡಾರ್ಕಾರ್ಸ್ ಕಾಲೇಜಿನೊಂದಿಗೆ ಇತರ ಸಂಘ ಸಂಸ್ಥೆಗಳ ಸಹಕಾರವನ್ನು ನಿರಿಕ್ಷಿಸುವುದರೊಂದಿಗೆ ಕಾಲೇಜಿನ ಅಧ್ಯಾಪಕ ವೃಂದದವರ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಯು ಎಸ್ ಶೆಣೈ, ಸದಸ್ಯರಾದ ಪ್ರಜ್ನೇಶ್ ಪ್ರಭು, ರೆಡ್ ಕ್ರಾಸ್ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಸೌಮ್ಯವಾಗಿ, ವೈದ್ಯರಾದ ಡಾ. ಸೋನಿ ಡಿಕೊಸ್ತಾ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್. ಕುಂದಾಪುರ ತಾಲೂಕು ಆರೋಗ್ಯ ಇಲಾಖೆಯ ಡಾ.ಅಮ್ರತರಾಜ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರಾಕ್ತನ ವಿದ್ಯಾರ್ಥಿಗಳು ಕಾಲೇಜಿನ ಅಧ್ಯಾಪಕರು ಹಾಗೂ ಅಧ್ಯಾಪಕೇತರರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.


