


ಶ್ರೀನಿವಾಸಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಯೋಗ ಮತ್ತು ಆತ್ಮರಕ್ಷಣೆ ದಿನ’ ಕಾರ್ಯಕ್ರಮ
ಶ್ರೀನಿವಾಸಪುರ : ಕೇಂದ್ರ ಸರ್ಕಾರದ ಪ್ರಾಯೋಜಿತ ‘ನಶಾಮುಕ್ತ ಭಾರತ ಅಭಿಯಾನ’ದಡಿ ಯುವಜನರಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ‘ಯೋಗ ಮತ್ತು ಆತ್ಮರಕ್ಷಣೆ ದಿನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀನಿವಾಸಪುರ ಪೊಲೀಸ್ ವೃತ್ತ ನಿರೀಕ್ಷಕ ಸಿ. ಶಂಕರಾಚಾರಿ, ಯುವಜನರು ವಿವಿಧ ಕಾರಣಗಳಿಂದ ಮಾದಕ ವಸ್ತುಗಳು ಹಾಗೂ ಡ್ರಗ್ಸ್ಗಳತ್ತ ಆಕರ್ಷಿತರಾಗುವ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದೆ ದೂರವಿರಲು ಜೀವನದಲ್ಲಿ ಯೋಗ, ಕ್ರೀಡೆ, ಪುಸ್ತಕ ಓದುವಿಕೆ ಸೇರಿದಂತೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಆರೋಗ್ಯವಂತರಾಗಿ, ಕ್ರಿಯಾಶೀಲರಾಗಿ ಮತ್ತು ಶಿಸ್ತುಬದ್ಧ ಜೀವನ ನಡೆಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನರ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಎಚ್ಚರಿಕೆಯಿಂದ ಚಿಂತಿಸಿ, ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪ, ವಿದ್ಯಾರ್ಥಿಗಳು ಸಾಹಿತ್ಯ, ಕಥೆ, ಕಾದಂಬರಿ ಸೇರಿದಂತೆ ವಿವಿಧ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಉತ್ತಮ ಮೌಲ್ಯಗಳು ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾದ ಸುಬ್ರಮಣಿ ಅವರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹಾಗೂ ಕರಾಟೆ ಆತ್ಮರಕ್ಷಣಾ ತಂತ್ರಗಳ ಪ್ರಾತ್ಯಕ್ಷಿಕೆ ನೀಡಿ ಅಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಸಿಬ್ಬಂದಿ, ಕಾಲೇಜಿನ ಎನ್ಎಸ್ಎಸ್ ಸಂಚಾಲಕರಾದ ಮಂಜುನಾಥ ಕೆ.ಎಸ್., ಪ್ರಾಧ್ಯಾಪಕರಾದ ಮೃತ್ಯುಂಜಯ, ಮುನಿರಾಜು, ನರಸಿಂಹಮೂರ್ತಿ, ನರಸಿಂಹರಾಜು, ಡಾ. ಶಾರದಾ, ಪ್ರಾಧ್ಯಾಪಕಿ ರತ್ನಮ್ಮ, ಗ್ರಂಥಪಾಲಕಿ ಶಮಲ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

