

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಅಕ್ಟೋಬರ್ 10, 2026 ರಂದು ʼಕಾವ್ಯಾಂ ವ್ಹಾಳೊ-19ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, “ಕಾವ್ಯಾಂ ವ್ಹಾಳೊ ಎಂಬುವುದು ಕೇವಲ ಒಂದು ಕೊಂಕಣಿ ಕವಿಗೋಷ್ಟಿ ಕಾರ್ಯಕ್ರಮವಲ್ಲ, ಬದಲಾಗಿ ಕೊಂಕಣಿಯ ಪ್ರತಿಯೊಂದು ಸಮುದಾಯದ ಜನರನ್ನು ಅಕಾಡೆಮಿಯ ಕಾರ್ಯಕ್ಷೇತ್ರದೊಳಗೆ ತರುವ ರಹದಾರಿಯಾಗಿದ್ದು, ಅಕಾಡೆಮಿ ಹಾಗೂ ಕೊಂಕಣಿ ಜನರ ಸಂಬಂಧವನ್ನು ಮತ್ತೊಂದು ಹಂತಕ್ಕೆ ತಲುಪಿಸಲು ಈ ಕವಿಗೋಷ್ಟಿಯು ಸಹಕಾರಿಯಾಗಿದೆ. ಸರಿಸುಮಾರು 150 ಕ್ಕಿಂತಲೂ ಹೆಚ್ಚು ಕೊಂಕಣಿ ಕವಿ-ಕವಯಿತ್ರಿಯರನ್ನು ಒಟ್ಟುಗೂಡಿಸಿ, ಸಾಹಿತ್ಯಕ್ಷೇತ್ರಕ್ಕೆ ಅರ್ಪಿಸಿದ ಹೆಮ್ಮೆ ಅಕಾಡೆಮಿಗೆ ಇದೆ” ಎಂದು ಹೇಳಿ ಕವಿಗೋಷ್ಟಿಗೆ ನೆರೆದಿರುವ ಸರ್ವರನ್ನು ಸ್ವಾಗತಿಸಿದರು.
ಮುಖ್ಯ ಅಥಿತಿಗಳಾದ ಕೊಂಕಣಿ ಲೇಖಕ ಸಂಘ ಕರ್ನಾಟಕ ಇದರ ಸಂಚಾಲಕರಾದ ರಿಚ್ಚರ್ಡ್ ಮೊರಾಸ್ರವರು ಅಕಾಡೆಮಿಯು ಪ್ರಸ್ತುತಪಡಿಸಿದ ಕಾವ್ಯಾಂ ವ್ಹಾಳೊ-3 ಕವಿತೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತಾನಾಡಿ, “ಕನ್ನಡದ ಪ್ರಸಿದ್ಧ ಕವಿಗಳಾದ ದ.ರಾ. ಬೇಂದ್ರೆಯವರು ಹೇಳಿದಂತೆ ʼಕವಿತೆ ಕರುಳಿನಲ್ಲಿ ಹುಟ್ಟಬೇಕು, ಗಂಟಲಿನಲ್ಲಿ ನೆಲೆಯಾಗಬೇಕುʼ. ಸಾಹಿತ್ಯವು ಯಾವತ್ತೂ ನಿಂತ ನೀರಲ್ಲ, ಅದು ಹರಿಯುವ ನದಿಯಂತೆ ಚಲನಶೀಲವಾಗಬೇಕು. ಕವಿತೆ ಕೇವಲ ಕೆಲವು ಶಬ್ದಗಳ ಜೋಡಣೆಯಲ್ಲ, ಅದು ಮನಸ್ಸಿನ ಅನುಭವಗಳ ಸುಂದರ ಅಭಿವ್ಯಕ್ತ” ಎಂದು ಹೇಳಿದರು.
ಕೊಂಕಣಿ ಅಕಾಡೆಮಿಯ ಸನ್ಮಾನವನ್ನು ಸ್ವೀಕರಿಸಿ ಮಾತಾನಾಡಿದ ಕೊಂಕಣಿಯ ಜಾನಪದ ಕಲಾವಿದ ಹಾಗೂ ಸಂಗೀತಗಾರರಾಗಿರುವಂತಹ ಮುಕುಂದ್ ಖಾರ್ವಿ ಇವರು, “ಮಹಾನ್ ಕಲಾವಿದನಲ್ಲದಿದ್ದರೂ ನನ್ನ ಅಲ್ಪ ಮಟ್ಟದ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದಕ್ಕಾಗಿ ಅಕಾಡೆಮಿಗೆ ಹೃದಯಸ್ಪರ್ಶಿ ಅಭಿನಂದನೆ ತಿಳಿಸುತ್ತೇನೆ. ನಾನೊಬ್ಬ ಅದ್ಭುತ ಮಾತುಗಾರನಲ್ಲ, ಆದರೂ ನನ್ನ ಭಾವನೆಗಳನ್ನು ಹಾಡಿನ ಮೂಲಕ ವ್ಯಕ್ತಪಡಿಸಲು ಇಚ್ಛಿಸುತ್ತೇನೆಂದು ಹೇಳಿ ಕೊಂಕಣಿ ಜಾನಪದ ಹಾಡನ್ನು ಈ ಸಂದರ್ಭದಲ್ಲಿ ಸಾದರಪಡಿಸಿದರು.
ಖ್ಯಾತ ಕವಯಿತ್ರಿಯಾದ ಐರಿನ್ ರೆಬೆಲ್ಲೊರವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು. ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಪ್ರಭಾ ರೇಗೊ, ವಿನ್ಸೆಂಟ್ ಪಿಂಟೊ ಆಂಜೆಲೊರ್, ಶ್ಯಾಮಲಾ ವಸಂತ್ ಕೊಂಪದವು, ಸ್ಟ್ಯಾನಿಸ್ಲವ್ಸ್ ಡಿಸೋಜ ಕಿರೆಂ, ಸಲೊಮಿ ಮೊಗರ್ನಾಡ್, ಮ್ಯಾಕ್ಸಿಂ ಲುದ್ರಿಗ್ ಬೊಂದೆಲ್, ಸತ್ಯವತಿ ಕಾಮತ್, ಆಲ್ವಿನ್ ದಾಂತಿ ಮತ್ತು ರೊಬರ್ಟ್ ಡಿಸೋಜ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.


