

05.10.2026
“ಮಾತಿನ ಗುಣಮಟ್ಟವನ್ನು ಎತ್ತರಿಸು, ಧ್ವನಿಯನ್ನಲ್ಲ. ಮಳೆಯಿಂದ ಹೂವು ಅರಳುತ್ತದೆಯೇ ಹೊರತು ಗುಡುಗಿನಿಂದಲ್ಲ” -ರೂಮಿ
ಮಾನವರಾಗಿ ಹುಟ್ಟಿದ ಮೇಲೆ ಜೀವನ ನಿರ್ವಹಣೆಗೆ ಏನಾದರೂ ಉದ್ಯೋಗ ಮಾಡಲೇಬೇಕೆನ್ನುವುದು ಸಾಮಾಜಿಕ ನಿಯಮ. ಕೆಲವರಿಗೆ ಯಾವುದಾದರೂ ಉದ್ಯೋಗ ಮಾಡುವುದಕ್ಕಿಂತ ಹೃದಯಕ್ಕೆ ಹತ್ತಿರವಾದ ಕೆಲಸ ಮಾಡುವುದರಿಂದ ಜೀವನ ನಿರ್ವಹಣೆ ಜತೆ ಮನಸ್ಸಿಗೆ ಸಂತೋಷವೂ ಆಗುತ್ತದೆ. ಆ ರೀತಿಯಲ್ಲಿ ಖುಷಿ, ತೃಪ್ತಿ ಕೊಟ್ಟ ಪತ್ರಿಕಾ ವೃತ್ತಿಗೆ ನಾನು ಸೇರಿ 2026 ಅಕ್ಟೋಬರ್ 5ಕ್ಕೆ 40 ವರ್ಷ ಪೂರ್ಣ. 1986 ಅಕ್ಟೋಬರ್ 5ರಂದು ಮುಂಗಾರು' ದೈನಿಕದ ಮೂಲಕ ಆರಂಭವಾದ ಈ ಪಯಣ, ನಂತರ ಸಂಯುಕ್ತ ಕರ್ನಾಟಕ’ (1990-1993), ಕನ್ನಡಪ್ರಭ' (1993-2005), ಇಂಗ್ಲಿಷ್ ದೈನಿಕ ವಿಜಯ್ ಟೈಮ್ಸ್’ (2005-2007) ಹಾಗೂ ದಿ ಹಿಂದೂ' (2007-2018) ಇವುಗಳಲ್ಲಿ ಮುಂದುವರಿದು 2019ರಿಂದ ವಿಜಯವಾಣಿ’ ದೈನಿಕದಲ್ಲಿ ಸಾಗುತ್ತಿದೆ.
ಈ ನಡುವೆ, ಮಾತೃ ಭಾಷೆಯ ಮೇಲಿನ ವ್ಯಾಮೋಹದಿಂದ ಹವ್ಯಾಸವಾಗಿ ಕೆಲ ವರ್ಷ ಕೊಂಕಣಿ ಸೌರಭ್' ಎಂಬ ಪತ್ರಿಕೆಯನ್ನೂ ನಡೆಸಿದ್ದಿದೆ. ಪತ್ರಿಕೆಗಳು ಸಮಾಜದ ಕೈಗನ್ನಡಿ, ಅವುಗಳು ಸಾಮಾಜಿಕ ಬದಲಾವಣೆಯ ಸಾಧನವಾಗಬಲ್ಲದು ಎಂದು ಬಾಲ್ಯದಿಂದಲೇ ಬೆಳೆದುಬಂದ ಅಭಿಪ್ರಾಯವೇ ಮುಂದೆ ಬಿ.ಕಾಂ. ಪದವೀಧರನಾದರೂ ಮನೆಯವರ ಸಹಜ ನಿರೀಕ್ಷೆಯಾದ ಬ್ಯಾಂಕ್ ಉದ್ಯೋಗಕ್ಕೆ ಮನಸ್ಸು ಮಾಡದೆ ಪತ್ರಿಕಾ ವೃತ್ತಿಯನ್ನು ಆಯ್ದುಕೊಳ್ಳಲು ಕಾರಣವಾಯಿತು. ಯಾವ್ಯಾವುದೋ’ ಆದ್ಯತೆಗಳ ಕಾರಣಕ್ಕಾಗಿ ಅಲ್ಲ. ಪತ್ರಿಕೆಗಳಿಂದಲೇ ಸಮಾಜ ಬದಲಾವಣೆ ಸಾಧ್ಯವೆಂಬ ಭ್ರಮೆಯೂ ನನಗಿಲ್ಲ. ಅದೊಂದು ಪೂರಕ ಸಾಧನ ಅಷ್ಟೇ.
ಹಾಗೆ ನೋಡಿದರೆ ಬರೆವಣಿಗೆಯ ಆಸಕ್ತಿ ಬಾಲ್ಯದಿಂದಲೇ ಮೂಡಿತ್ತು. ತಂದೆ ಕೆ. ವಾಸುದೇವ ಸಾಮಾಜಿಕ ಕಾರ್ಯಗಳ ಪ್ರಯುಕ್ತ ವಿವಿಧ ಪತ್ರ, ಮನವಿ ಪತ್ರಗಳು ಮೊದಲಾದವುಗಳನ್ನು ಬರೆಯುತ್ತಿದ್ದುದನ್ನು ನಿಕಟವಾಗಿ ಗಮನಿಸುತ್ತಿದ್ದೆ. ಅಲ್ಲದೆ ಮನೆಗೆ ತರಿಸಿಕೊಳ್ಳುತ್ತಿದ್ದ ಕನ್ನಡಪ್ರಭ'ದಲ್ಲಿ ಪ್ರಕಟವಾಗುತ್ತಿದ್ದ ಸುಭಾಷಿತಗಳನ್ನು ಬರೆದುಕೊಳ್ಳಲು ರಫ್ ಹಾಳೆಯ ಒಂದು ಪುಸ್ತಕವನ್ನೂ ಅವರು ಮಾಡಿಕೊಟ್ಟಿದ್ದರು. ಪತ್ರಿಕೆಯ, ಸಾಹಿತ್ಯದ ಓದಿನ ಹವ್ಯಾಸ ಬಹುಶಃ ಅಲ್ಲಿಂದಲೇ ಬೆಳೆದು ಬಂತೆಂದರೆ ಅತಿಶಯೋಕ್ತಿ ಆಗಲಾರದು. ನಂತರ, ಹೈಸ್ಕೂಲ್ನಲ್ಲಿದ್ದಾಗ ಗೋಡೆ ಪತ್ರಿಕೆಗೆ ಬರೆಯುವ ಮೂಲಕ ಬರೆವಣಿಗೆಯ ಗೀಳು ಆರಂಭವಾಯಿತು. ತದನಂತರದಲ್ಲಿ ನವಭಾರತ, ಉದಯವಾಣಿ ಪತ್ರಿಕೆಗಳ ಓದುಗರ ಪತ್ರ ಅಂಕಣಗಳಲ್ಲಿ ಊರಿನ ಸಮಸ್ಯೆಗಳ ಬಗ್ಗೆ ಬರೆಯುವುದರೊಂದಿಗೆ ಪತ್ರಿಕಾ ಬರೆವಣಿಗೆಯ ನಾಂದಿಯಾಯಿತು. ಹಾಗೇ ಪಿಯುಸಿಯಲ್ಲಿದ್ದಾಗ, ಎಸ್ಎಫ್ಐ ಸಂಘಟನೆಯ ಓಡಾಟ ಆರಂಭವಾದಾಗ ಶಿವಮೊಗ್ಗದಿಂದ ಪ್ರಕಟವಾಗುತ್ತಿದ್ದ ವಿಚಾರಿ’ ವಾರಪತ್ರಿಕೆಗೆ ಹೋರಾಟದ ವರದಿಗಳು ಮತ್ತು ಲೇಖನಗಳನ್ನು ಬರೆಯುವ ಮೂಲಕ ಬರೆವಣಿಗೆ ಹವ್ಯಾಸಕ್ಕೆ ಒಂದು ಸ್ವರೂಪ ಬಂತು. ಜ್ವಾಲಾಮುಖಿ' ವಾರಪತ್ರಿಕೆಗೆ ಕೆಲವು ಚುಟುಕುಗಳನ್ನು ಬರೆದಿದ್ದು ಬಾಲ್ಯದ ಸಾಹಿತ್ಯಿಕ ಗುಟುಕು. ಕಾಲೇಜ್ ಶಿಕ್ಷಣ ಪೂರ್ಣಗೊಳ್ಳುತ್ತಲೇ ಹಾಕಿದ ಅರ್ಜಿಗೆ ಸ್ಪಂದಿಸಿ ಮುಂಗಾರು’ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿಯವರು ಸಂದರ್ಶನಕ್ಕೆ ಕರೆಕಳಿಸಿದ್ದ ಪತ್ರ ಅನಿವಾರ್ಯ ಕಾರಣಗಳಿಂದ ನನ್ನ ಗಮನಕ್ಕೆ ಬರುವುದು ಕೆಲ ತಿಂಗಳೇ ತಡವಾಗಿತ್ತು. ಅದು ಸಿಕ್ಕ ತಕ್ಷಣವೇ ಅಳುಕುತ್ತಾ ಹೋದಾಗ ಏನೋ ವಿಶ್ವ ಹೀಗೆ ಮಾಡುವುದಾ?' ಎಂಬ ಒಂದೇ ಪ್ರಶ್ನೆ ಕೇಳಿದ ವಡ್ಡರ್ಸೆಯವರು ನೇಮಕ ಮಾಡಿಕೊಂಡರು. ಊಟದ ಕಾರಣ ಆರೋಗ್ಯ ಸಮಸ್ಯೆಯಾಗಿ ನಾನು ಕೆಲಸ ಬಿಡುತ್ತೇನೆಂದು ಹೇಳಿದಾಗ ಶಾಲೆಯಲ್ಲಿ ಚಿಕ್ಕ ಮಕ್ಕಳಿಗೆ ಹೇಳುವಂತೆ ನಿನ್ನ ಅಪ್ಪಯ್ಯನನ್ನು ಕರೆದುಕೊಂಡು ಬಾ’ ಎಂದು ಹೇಳಿ ನನ್ನನ್ನು ಪ್ರೀತಿಯಿಂದ ಕಟ್ಟಿ ಹಾಕಿ ಮಾಧ್ಯಮ ಕ್ಷೇತ್ರದಲ್ಲಿ ಉಳಿಯುವಂತೆ ಮಾಡಿದ್ದನ್ನು ಮರೆಯಲಾಗದು. ಇದು ವೃತ್ತಿ ಜೀವನದ ಆರಂಭದ ಕಥೆಯಾದರೆ, ಮಾಧ್ಯಮ ಕ್ಷೇತ್ರದ ಅನಪೇಕ್ಷಿತ ಬೆಳವಣಿಗೆಯ ಕಾರಣದಿಂದ 2019ರಲ್ಲಿ ಉದ್ಯೋಗ ಹುಡುಕುವ ಪ್ರಸಂಗ ಎದುರಾದಾಗ 56ನೇ ವಯಸ್ಸಿನಲ್ಲಿ ನೇಮಕ ಮಾಡಿಕೊಂಡ ವಿಜಯವಾಣಿ' ಸಂಪಾದಕ ಕೆ.ಎನ್. ಚನ್ನೇಗೌಡರನ್ನು ನೆನೆಯುವುದು ಕೂಡ ಅಷ್ಟೇ ಅಗತ್ಯ. ಸಹೋದ್ಯೋಗಿಗಳನ್ನು ಆಪ್ತವಾಗಿ ನಡೆಸಿಕೊಳ್ಳುವಂಥ ಸಂಪಾದಕರುಗಳನ್ನೂ ನಾನು ನೋಡಿದ್ದೇನೆ, ಉದ್ಯೋಗಿಗಳ ಮಧ್ಯೆ ಕೇಡು ತಂದಿಡುವ, ಸಹೋದ್ಯೋಗಿಗಳ ಕಾರ್ಯವನ್ನು ಸರಿಯಾಗಿ ಮೌಲ್ಯಮಾಪನ ಮಾಡಲಾಗದ ಕುತ್ಸಿತರನ್ನೂ ನಾನು ಕಂಡಿದ್ದೇನೆ. ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋದಾಗ ಉತ್ತಮ ಸಹೋದ್ಯೋಗಿಗಳ ಜತೆ ಒಳ್ಳೆಯ ಕೌಟುಂಬಿಕ ವಾತಾವರಣ ಒದಗಿಸಿಕೊಟ್ಟವರನ್ನು ಸ್ಮರಿಸುವುದು ಕೂಡ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಬೆಳಗಾವಿಯ ಮೃತ್ಯುಂಜಯ್ ಹಾಗೂ ಮಹಾಂತೇಶ್ ಯಲ್ಲಾಪುರಮಠ ಮತ್ತವರ ತಾಯಿ ಮಹಾಲಿಂಗಮ್ಮ, ಕೋಲಾರದಲ್ಲಿ ಎಚ್.ಬಿ. ಕೃಷ್ಣಪ್ಪ, ಆಶಾ, ಪಿ.ವಿ. ರಮಣ್ ಮುಂತಾದವರನ್ನು ಮರೆಯಲಾಗದು. ವೃತ್ತಿಗೆ ಸಂಬಂಧಿಸಿದಂತೆ ಹೇಳುವಾಗ, ನನ್ನ ಈ ನಾಲ್ಕು ದಶಕದ ವೃತ್ತಿ ಜೀವನದ ಪಯಣದಲ್ಲಿ ನಾನು ಬಹುತೇಕವಾಗಿ ಕೆಲಸ ಮಾಡಿದ್ದು ಡೆಸ್ಕ್ನಲ್ಲೇ. ವಿಜಯ್ ಟೈಮ್ಸ್ ಮತ್ತು ದಿ ಹಿಂದೂನಲ್ಲಿ ಮಾತ್ರ ವರದಿಗಾರಿಕೆ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದೆ. 2007ರಲ್ಲಿ ದಿ ಹಿಂದೂ ಹಿರಿಯ ವರದಿಗಾರನಾಗಿ ಕೋಲಾರಕ್ಕೆ ಬಂದ ಸಂದರ್ಭ ಇಲ್ಲೇಕೆ ಬಂದಿರಿ ಅಲ್ಲೇಕೆ ಹೋದಿರಿ ಎಂಬ ವಿಚಿತ್ರ ಪ್ರಶ್ನೆಗಳು ನನಗೆ ಎದುರಾಗಿದ್ದವು. ದಿ ಹಿಂದೂಗೆ ವರದಿ ಮಾಡುವಂಥದ್ದು ಕೋಲಾರದಲ್ಲೇನಿದೆ ಎಂಬುದು ಪ್ರಶ್ನೆಯ ವಿಸ್ತರಿತ ಭಾಗವಾಗಿತ್ತು. ಆದರೆ ಸೂಕ್ತ-ಸೂಕ್ಷ್ಮ ದೃಷ್ಟಿಕೋನವುಳ್ಳ ಪತ್ರಕರ್ತರಿಗೆ ಯಾವ ಊರಾದರೂ ಸರಿಯೇ ಎನ್ನುವುದು ನನ್ನ ಭಾವನೆ. ಕೋಲಾರಕ್ಕೆ ಬಂದ ಸುಮಾರು ಒಂದು ತಿಂಗಳಲ್ಲಿ ಕಾರ್ಯನಿಮಿತ್ತ ಬ್ಯೂರೋ ಚೀಫ್ ಪಾರ್ವತಿ ಮೆನನ್ರಿಗೆ ಫೋನ್ ಮಾಡಿದ್ದಾಗ, ವಿಶ್ವ, ಯೂ ಪುಟ್ ಕೋಲಾರ ಆನ್ ದಿ ಹಿಂದೂ ಮ್ಯಾಪ್’ (ದಿ ಹಿಂದೂ ಭೂಪಟದಲ್ಲಿ ಕೋಲಾರ ಕಾಣಿಸುವಂತೆ ಮಾಡಿದ್ದೀರಾ) ಎಂದು ಹೇಳಿದ್ದು ಎಲ್ಲವನ್ನೂ ವಿವರಿಸುತ್ತದೆ.
ಬರಗಾಲದ ನಾಡು, ಹಿಂದುಳಿದ ಪ್ರದೇಶ ಎಂದು ಕರೆಯಲಾಗುವ ಕೋಲಾರಕ್ಕೆ ಬಂದ ಸಂದರ್ಭದಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ನರೇಗಾ ಅನುಷ್ಠಾನ ಆಗದಿದ್ದುದನ್ನು ಕಂಡು ನನಗೆ ಅಚ್ಚರಿಯೆನಿಸಿತ್ತು. ಈ ಬಗ್ಗೆ ಒಂದು ವಿಶೇಷ ವರದಿಯನ್ನು ಮಾಡಿದಾಗ (26.12.2008) ಅದು ವಿಧಾನಸೌಧದ ಮೊಗಸಾಲೆಯಲ್ಲಿ ಗಮನ ಸೆಳೆದಿತ್ತು. ಆಗ ಆರ್ಡಿಪಿಆರ್ ಇಲಾಖೆಯ ಕಾರ್ಯದರ್ಶಿ ಆಗಿದ್ದ ರವಿಕುಮಾರ್ ತಕ್ಷಣವೇ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿ ಯೋಜನೆಯ ಅನುಷ್ಠಾನಕ್ಕೆ ಕ್ರಮಕೈಗೊಂಡರು. ಇದು ನನ್ನ ವೃತ್ತಿಜೀವನದಲ್ಲಿ ತೃಪ್ತಿ ಕೊಟ್ಟ ಕೆಲ ಪ್ರಮುಖ ಅಂಶಗಳಲ್ಲಿ ಒಂದು. ವಿದ್ಯಾರ್ಥಿನಿಯೊಬ್ಬರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಗ್ಗೆ ಮಾಡಿದ್ದ ವಿಶೇಷ ವರದಿಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಥಿಕವಾಗಿ ದಯನೀಯ ಪರಿಸ್ಥಿತಿಯಲ್ಲಿದ್ದ ಆ ದಲಿತ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಮಂಜೂರು ಮಾಡಿದ್ದ ಕ್ಷಣ ನನಗೊಂದು ಬಗೆಯ ನೆಮ್ಮದಿಯ ಪ್ರಕರಣ. ಜಲ ಮೂಲಗಳನ್ನು ರಕ್ಷಿಸಬೇಕಾದ ಸರಕಾರದ ಸಂಸ್ಥೆಗಳೇ ಒತ್ತುವರಿ ಮಾಡಿ ಕೆರೆ ಅಂಗಳಗಳಲ್ಲಿ ಕಟ್ಟಡಗಳನ್ನು ಕಟ್ಟಿದ ಹಲವು ಪ್ರಕರಣಗಳನ್ನು ಮುಂದಿಟ್ಟು ಬರೆದ ಲೇಖನ ಗಮನ ಸೆಳೆದಿತ್ತು. ನಗರದ ಹೃದಯ ಭಾಗದಲ್ಲಿದ್ದ ಜಿಲ್ಲಾಧಿಕಾರಿ ಕಚೇರಿಯನ್ನು ಹೊರ ಭಾಗದಲ್ಲಿ ನಿರ್ಮಿಸಿ ಆಡಳಿತವನ್ನು ಅಕ್ಷರಶಃ ಜನರಿಂದ ದೂರ ಮಾಡುವ ಕ್ರಮದ ಮೇಲೆಯೂ ಬೆಳಕು ಚೆಲ್ಲಿದ್ದೆ. ಕಂಬಾಲಪಲ್ಲಿ ದುರಂತಕ್ಕೆ ಸಂಬಂಧಿಸಿದ ಹೋರಾಟಗಳು ಮತ್ತು ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ದಿ ಹಿಂದೂ'ನಲ್ಲಿ ಪ್ರಕಟವಾದ ನನ್ನ ವರದಿಗಳನ್ನು ಮುಖ್ಯವಾಹಿನಿ ಮಾಧ್ಯಮದಲ್ಲಿ ಉತ್ತಮ ಕವರೇಜ್ ಎಂದು ದಲಿತ ಸಂಘಟನೆಗಳ ಮುಖಂಡರು ಹೇಳುತ್ತಿದ್ದುದು ನನಗೆ ನೆನಪಿದೆ. ಅಸ್ಪøಶ್ಯತೆ ವಿರುದ್ಧ ಅರಿವು ಭಾರತ ಆಂದೋಲನದ ಕಾರ್ಯಗಳ ಕುರಿತ ವರದಿಗಳು ರಾಷ್ಟ್ರೀಯ ಗಮನ ಸೆಳೆದಿದ್ದವು. ಈ ರೀತಿಯಾಗಿ ಜಿಲ್ಲೆಯ ರೈತರು, ಕಾರ್ಮಿಕರು ಆದಿಯಾಗಿ ಈ ನೆಲದ ಬದುಕಿನ ಬವಣೆಗಳನ್ನು ಆಧರಿಸಿ ಹಲವಾರು ವರದಿಗಳನ್ನು ಮಾಡಿದ್ದು ಸಮಾಧಾನ ಕೊಟ್ಟ ವಿಷಯವಾಗಿದೆ. ಪತ್ರಕರ್ತ ಮಾಡಬೇಕಾಗಿದ್ದೂ ಅದೇ ಅಲ್ಲವೇ? ಬಾಗಲಕೋಟೆಯಲ್ಲಿ ವಿಜಯ್ ಟೈಮ್ಸ್’ ವರದಿಗಾರನಾಗಿದ್ದಾಗಲೂ ಈ ಕೆಲಸವನ್ನು ಮಾಡಿದ್ದೆ.
ಇಂಗ್ಲಿಷ್ ಪತ್ರಿಕೆಯೆಂದರೆ ಎರಡು ಲೈನ್ ಬರೆದರೆ ಸಾಕಲ್ಲವೇ ಎಂದು ಪ್ರಶ್ನಿಸುವವರು, ಏನ್ರೀ, ಪತ್ರಿಕಾಗೋಷ್ಠಿಯಲ್ಲಿ ಏನೂ ಮಾತನಾಡೋದೇ ಇಲ್ಲವಲ್ಲ' ಎಂದು ಹೇಳುವವರು ಇದನ್ನೆಲ್ಲ ಗಮನಿಸಿರ ಬಹುದೆಂದು ಆಶಿಸುವೆ. ಪತ್ರಕರ್ತ ಯಾಕಾಗಬೇಕೆಂದು ನಾನು ಚಿಕ್ಕಂದಿನಿಂದಲೇ ಕಂಡ ಕನಸನ್ನು ಸಾಕಾರಗೊಳಿಸಿಕೊಳ್ಳಲು ಡೆಸ್ಕ್ನಲ್ಲಿದ್ದಾಗಲೂ ವರದಿಗಾರಿಕೆಯಲ್ಲಿದ್ದಾಗಲೂ ಪ್ರಯತ್ನಿಸಿದ್ದೇನೆ. ಡಿಕ್ಟೇಶನ್ ಪತ್ರಕರ್ತರಾಗಬಾರದು, ಡಿಸೆಕ್ಷನ್ ಪತ್ರಕರ್ತರಾಗಬೇಕು’ ಎಂಬ ನಂಬಿಕೆಯಂತೆ ಕೆಲಸ ಮಾಡುವ ಯತ್ನ ನಡೆಸಿದ್ದೇನೆ.
ಹರಿಕಿಷನ್ ಸಿಂಗ್ ಸುರ್ಜಿತ್, ಇ.ಎಂ.ಎಸ್. ನಂಬೂದರಿಪಾಡ್, ವಿಮಲಾ ರಣದಿವೆ, ಎಂ.ಕೆ. ಪಂಧೆ, ಸೀತಾರಾಮ್ ಯೆಚುರಿ ಮೊದಲಾದ ಶ್ರಮಿಕ ವರ್ಗದ ನೇತಾರರ ಸಂದರ್ಶನ ನಡೆಸಲು, ಅವರೊಂದಿಗೆ ಸಂವಾದಿಸಲು ಮಾಧ್ಯಮ ವೃತ್ತಿ ನನಗೆ ನೆರವಾಗಿದೆ.
ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಸ್ಥಾನಿಕ ಸಂಪಾದಕನಾಗಿ ಹೋದ ಸಂದರ್ಭ ಮರು ದಿನವೇ ಫೋನ್ ಮಾಡಿದ್ದ ಸಂಪಾದಕ ವೆಂಕಟನಾರಾಯಣ್ ಅವರು ವಿಶ್ವ, ನಿನ್ನೆ ರಾತ್ರಿ ನಾನು ನೆಮ್ಮದಿಯಿಂದ ನಿದ್ರೆ ಮಾಡಿದೆ' ಎಂದು ಹೇಳಿದ್ದರು. ಅವರಿಟ್ಟ ವಿಶ್ವಾಸವನ್ನು ನಾನು ಹುಸಿಗೊಳಿಸಲಿಲ್ಲ. ಬೆಳಗಾವಿಯಲ್ಲಿದ್ದಾಗ ಉತ್ತರ ಕರ್ನಾಟಕದ ಹಲವು ವಿಚಾರಗಳ ಬಗ್ಗೆ ನಾನು ಬರೆದ ಇಂಗ್ಲಿಷ್ ಲೇಖನಗಳೆಲ್ಲವನ್ನೂ ಪ್ರಕಟಿಸಿ ಪ್ರೋತ್ಸಾಹಿಸಿದ ಇಂಡಿಯನ್ ಎಕ್ಸ್ಪ್ರೆಸ್’ ಮಿತ್ರ ಅವಿನಾಶ್ ಸದಾ ನೆನಪಾಗುತ್ತಾರೆ. ಕೆಲವರಿಗೆ ನನ್ನ ರಾಜಕೀಯ ಸಿದ್ಧಾಂತದ ಬಗ್ಗೆ ಏನೋ ಒಂಥರ ಕಸಿವಿಸಿಯಿದೆ. ಅದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ. ಬರೆವಣಿಗೆ ಸಾಮಥ್ರ್ಯದ ಜತೆಯಲ್ಲಿ ನನ್ನಲ್ಲಿರುವ ಸಾಮಾಜಿಕ, ರಾಜಕೀಯ ಕಾಳಜಿಯ ಕಾರಣಕ್ಕಾಗಿಯೇ ಜಿ. ಸದಾಶಿವ ಅವರಂಥ ಹಿರಿಯ ಪತ್ರಕರ್ತರು ನನ್ನಿಂದ ಲೇಖನ ಬರೆಸಿಕೊಳ್ಳುತ್ತಿದ್ದುದನ್ನು ಮರೆಯಲಾರೆ. ನುಡಿದಂತೆ ನಡೆಯಬೇಕೆಂಬ ಧೋರಣೆಯವನಾದ ನಾನು ಕನ್ನಡಪ್ರಭದಲ್ಲಿದ್ದಾಗ ಅದೂ ಭಾಗವಾಗಿದ್ದ ಇಂಡಿಯನ್ ಎಕ್ಸ್ಪ್ರೆಸ್ ಸಮೂಹವನ್ನು ಎದುರಿಸಿ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸುವಂತೆ ಒಂದು ರೀತಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದೆ. ಪತ್ರಕರ್ತರ ಸಂಘಟನೆ ಮಾಡಬೇಕಿದ್ದ ಕೆಲಸವನ್ನು ನಾನು ಮಾಡಿದ್ದೆ. ಚಿಕ್ಕ ಮಕ್ಕಳಿದ್ದಾರೆ, ಇದೆಲ್ಲ ಬೇಡ ವಿಶ್ವ' ಎಂದು ಕೆಲ ಸಹೋದ್ಯೋಗಿಗಳು ಕಾಳಜಿಯಿಂದ ಸಲಹೆ ಮಾಡಿದ್ದರು. ವೃತ್ತಿ ಜೀವನದ ಜತೆ ಈ ನೆಲ ನನಗೆ ಹಲವು ಜೀವಪರ ಶಕ್ತಿಗಳ ಆಪ್ತ ಸಾಂಗತ್ಯವನ್ನು ಒದಗಿಸಿದೆ. ಕೋಟಿಗಾನಹಳ್ಳಿ ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಎಚ್.ಎ. ಪುರುಷೋತ್ತಮ ರಾವ್, ಹ.ಮಾ. ರಾಮಚಂದ್ರ, ಟಿ.ಕೆ. ನಟರಾಜ್, ಸಿ.ಎಂ. ಮುನಿಯಪ್ಪ, ಅಚ್ಯುತ್, ಜಿ. ಶಿವಪ್ಪ ಅರಿವು, ವಿ.ಎಸ್.ಎಸ್. ಶಾಸ್ತ್ರಿ -ಹೀಗೆ ಈ ಪಟ್ಟಿ ದೊಡ್ಡದಿದೆ. ಜಿ.ವಿ. ಶ್ರೀರಾಮ ರೆಡ್ಡಿ, ಹೋಳೂರು ಶಂಕರ್, ಟಿ.ಎಂ. ವೆಂಕಟೇಶ್, ವಿ. ಅಂಬರೀಶ್, ಎನ್. ವೆಂಕಟೇಶ್, ಗಾಂಧಿ, ಜಿ. ಅರ್ಜುನನ್ ಮುಂತಾಗಿ ಹೋರಾಟಗಾರರ ಸಾಮಿಪ್ಯವನ್ನು ಅನುಭವಿಸಲು ಸಾಧ್ಯವಾಗಿದೆ. ಎಂ.ಎಸ್. ಪ್ರಭಾಕರ, ಎಸ್. ಚಂದ್ರಶೇಖರ್, ದಯಾನಂದ, ಎಂ.ಜಿ. ಪ್ರಭಾಕರ, ಪಾ.ಶ್ರೀ. ಅನಂತರಾಮ್, ಕೆ. ರಂಗನಾಥ್, ಬಿ. ಸುರೇಶ್, ಸಚ್ಚಿ, ಎ.ಜಿ. ಸುರೇಶ್ ಕುಮಾರ್, ಲಕ್ಷ್ಮಿ ಮೊದಲಾದವರು ಪತ್ರಕರ್ತರ ವಲಯದಲ್ಲಿ ಹೆಸರಿಸಬಹುದಾದ ಕೆಲವು ಆಪ್ತರು. ಹಾಗೆ ನೋಡಿದರೆ ಎಲ್ಲ ಪತ್ರಕರ್ತರೂ ನನಗೆ ಆಪ್ತರೇ. ತಮ್ಮನ್ನು ಹೆಸರಿಸಲಿಲ್ಲ ಎಂದು ಯಾರೂ ಅನ್ಯಥಾ ಭಾವಿಸಬಾರದು. ಕೋಲಾರಕ್ಕೆ ಬಂದ ಆರಂಭಿಕ ಹಂತದಲ್ಲಿ ಕೆ.ಎಸ್. ಗಣೇಶ್ ಉದಯವಾಣಿಯ ಮಿನಿ ಮಾತುಕತೆ’ ಅಂಕಣದಲ್ಲಿ ನನ್ನ ಸಂದರ್ಶನ ಪ್ರಕಟಿಸಿ ನನ್ನನ್ನೊಬ್ಬ ಪತ್ರಕರ್ತ-ಸಾಹಿತಿಯಾಗಿ ಗುರುತಿಸಿದ್ದು ಮುದ ನೀಡಿದ ಸಂಗತಿ. ಇದು ಗುಣಕ್ಕೆ ಮತ್ಸರವಿಲ್ಲ ಎನ್ನುವ ಮಾತಿಗೆ ದೃಷ್ಟಾಂತವಾಗಿದೆ. ಆದಾಗ್ಯೂ ಮತ್ಸರಿಗಳೂ ಇಲ್ಲವೆಂದಲ್ಲ. ಉದರ ನಿಮಿತ್ತಂ ಬಹು ದೂರ ಪಯಣಂ' ಮಾಡಿದ ನಾನು ಸಂಚಾರಿಯಾಗಿದ್ದಾಗ ಬೇರೆ ಬೇರೆ ಊರುಗಳಲ್ಲಿ ಇಂಥದ್ದನ್ನು ಗಮನಿಸಿದ್ದೇನೆ. ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿರುವ ಸ್ವಾಭಿಮಾನಿಗಳನ್ನು ಕಂಡರೆ ಕೆಲವು ಬಹುಪರಾಕುಪ್ರಿಯರಿಗೆ ಅಹಿತವೆನಿಸುತ್ತದೆ. ಆದರೆ, ಅಸೂಯೆಗೆ ಉದಾಸೀನವೇ ಮದ್ದು. ಗುರುತಿಸೊಳಿತಿರುವುದನು ಕೇಡುಗಳ ನಡುವೆ’ (ಕೆಡುಕಗಳ ನಡುವೆಯೂ ಒಳಿತು ಇರುವುದನ್ನು ಗಮನಿಸು) ಎಂಬ ಡಿವಿಜಿ ಕಗ್ಗದಲ್ಲಿನ ಒಂದು ಸಾಲಿನ ಮಾತಿನಂತೆ ಇಂಥವರನ್ನೆಲ್ಲ ಉಪೇಕ್ಷಿಸುವುದು ಒಳಿತು. ಅಂಥವರಿಗೂ ಶುಭವಾಗಲೆಂದು ನಾನು ಹಾರೈಸುವೆ. ಯಾರದೇ ಪ್ರಶಂಸೆಯಿಂದ ಹಿಗ್ಗಿಲ್ಲ, ಅಸೂಯೆಯಿಂದ ಕುಗ್ಗಿಲ್ಲ.
ನನ್ನ ವೃತ್ತಿ ಜೀವನದ ಅರ್ಧ ಭಾಗವನ್ನು ಕೋಲಾರದಲ್ಲಿ ಕಳೆದಿದ್ದು ಇವನ್ಯಾರವ ಇವನ್ಯಾರವ ಎಂದೆಣಿಸದೆ' ನನ್ನನ್ನು ಕೋಲಾರಿಗನಾಗಿ ಪರಿಗಣಿಸಿ ಅರಿವು ಭಾರತ’ 26.07.2026ರಂದು ಬಿಡುಗಡೆಯಾದ ಮುಂದೆ ನಡೆದವರು' ಕೃತಿಯಲ್ಲಿ ನನಗೂ ಸ್ಥಾನ ಕಲ್ಪಿಸಿರುವುದು, ಪತ್ರಕರ್ತೆ ಎಂ. ವರಲಕ್ಷ್ಮಿ ಅದರಲ್ಲಿ ನನ್ನ ಪರಿಚಯವನ್ನು ಬರೆದಿರುವುದು ಸಂತೋಷದ ಸಂಗತಿ. ಒಂದು ಮೊಟ್ಟೆಯನ್ನು ಭಾಗ ಮಾಡಿ ತಿನ್ನುವಂಥ ಕಷ್ಟದ ದಿನಗಳನ್ನೂ ಸೈರಿಸಿದ ಮಡದಿ ಮಮತಾ, ಸರಳ ಜೀವನವನ್ನು ಸಹಿಸಿಕೊಂಡ ಮಕ್ಕಳಾದ ದೀಪಕ್ ಮತ್ತು ದೀಪ್ತಿಯ ಸಹಕಾರವನ್ನು ಸ್ಮರಿಸದಿರುವುದು ಅಪಚಾರವಾಗುತ್ತದೆ. ಈಗೀಗ ಹಲವರು ನನ್ನನ್ನು ರಿಟಾಯರ್ ಆದಿರಾ?’ ಎಂದು ಕೇಳುವುದಿದೆ. ಏಜ್ಡ್ ಬಟ್ ನಾಟ್ ಟಯರ್ಡ್, ನಾಟ್ ರಿಟಾಯರ್ಡ್' ಎನ್ನುವುದು ನನ್ನ ಉತ್ತರ. ಕುಂದಾಪುರ ಟು ಕೋಲಾರ’ ಜೀವನಯಾನ, 23ನೇ ವಯಸ್ಸಿನಲ್ಲಿ ಆರಂಭವಾದ ವೃತ್ತಿ ಯಾನ 63ನೇ ವಯಸ್ಸಿನಲ್ಲೂ ಮುಂದುವರಿದಿದ್ದು ನಿವೃತ್ತಿಯಾದರೂ ಬರೆವಣಿಗೆಯ ಪ್ರವೃತ್ತಿಗೆ ನಿವೃತ್ತಿಯ ಚಾನ್ಸೇ ಇಲ್ಲ.
* ವಿಶ್ವ ಕುಂದಾಪುರ

