

ಛತ್ರಪತಿ ಸಂಭಾಜಿನಗರ : ಐಷಾರಾಮಿ ಜೀವನ ನಡೆಸಲು ಮತ್ತು ತಮ್ಮ ಶೋಕಿಗಾಗಿ ಸ್ವಂತ ಒಂದು ತಿಂಗಳ ಗಂಡು ಮಗುವನ್ನೇ ಮಾರಾಟ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಮುಕುಂದವಾಡಿ ಪ್ರದೇಶದಲ್ಲಿ ಲಿವ್-ಇನ್ ರಿಲೇಶನ್ಷಿಪ್ನಲ್ಲಿದ್ದ ದಂಪತಿ, ತಮ್ಮ ಐಷಾರಾಮಿ ಆಸೆಗಳನ್ನು ಪೂರೈಸಿಕೊಳ್ಳಲು, ದುಬಾರಿ ಮೊಬೈಲ್ ಫೋನ್ಗಳು ಮತ್ತು ಚಿನ್ನದ ಸರವನ್ನು ಖರೀದಿಸಲು ಮಗುವನ್ನು ₹1.2 ಲಕ್ಷಕ್ಕೆ ದಲಾಲಿ ಸೀಮಾ ರೇಷ್ವಾಲ್ ಎಂಬಾಕೆಗೆ ಮಾರಾಟ ಮಾಡಿದ್ದರು.
4 ಬಾರಿ ಕೈಬದಲಾದ ಮಗು – 550 ಕಿ.ಮೀ ಸುದೀರ್ಘ ಪ್ರಯಾಣ: ಮಾರಾಟವಾದ ನಂತರ ಈ ಮಗು ಒಂದೇ ಸ್ಥಳದಲ್ಲಿರಲಿಲ್ಲ. ಬರೋಬ್ಬರಿ 4 ಬಾರಿ ಬೇರೆ ಬೇರೆ ದಲ್ಲಾಳಿಗಳ ಕೈಸೇರಿ ತಂಗಿತ್ತು: ಮೊದಲ ಡೀಲ್: ಹೆತ್ತ ಪೋಷಕರು ದಲಾಲಿ ಸೀಮಾ ರೇಷ್ವಾಲ್ಗೆ ₹1.2 ಲಕ್ಷಕ್ಕೆ ಮಗುವನ್ನು ಮಾರಿದರು. ಎರಡನೇ ಡೀಲ್ : ಸೀಮಾ ರೇಷ್ವಾಲ್ ಈ ಮಗುವನ್ನು ಪಡೆಗಾಂವ್ನ ಸಂಗೀತಾ ಆವ್ಹಾಡ್ಗೆ ₹2.7 ಲಕ್ಷಕ್ಕೆ ಮಾರಾಟ ಮಾಡಿದಳು. ಮೂರನೇ ಡೀಲ್: ಸಂಗೀತಾ ಆವ್ಹಾಡ್ ನಕಲಿ ವೈದ್ಯನೆನ್ನಲಾದ ಸುರೇಶ್ ಗುಂಟುಲಾಗೆ ₹3.5 ಲಕ್ಷಕ್ಕೆ ಮಾರಿದಳು. ನಾಲ್ಕನೇ ಡೀಲ್: ಸುರೇಶ್ ಗುಂಟುಲಾ ಹೈದರಾಬಾದ್ನಲ್ಲಿದ್ದ ತನ್ನ ಸಂಬಂಧಿ ಉಮಾ ಖಟ್ಕಮ್ ಎಂಬಾಕೆಗೆ ₹3.5 ಲಕ್ಷಕ್ಕೆ ಮಗುವನ್ನು ಹಸ್ತಾಂತರಿಸಿದನು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಸೆಪ್ಟೆಂಬರ್ 20 ರಂದು ತಾಯಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಗ ತನಿಖೆಯ ವೇಳೆ ಮಗುವನ್ನು ಮಾರಾಟ ಮಾಡಿರುವ ಕೃತ್ಯ ಬಯಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪುಂಡ್ಲಿಕ್ ನಗರ ಪೊಲೀಸ್ ಇನ್ಸ್ಪೆಕ್ಟರ್ ವಿವೇಕ್ ಸೋನವಣೆ ನೇತೃತ್ವದ ತಂಡ, 550 ಕಿ.ಮೀ ದೂರದ ಹೈದರಾಬಾದ್ಗೆ ತೆರಳಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಹೆತ್ತವರು, ದಲ್ಲಾಳಿಗಳು ಹಾಗೂ ನಕಲಿ ವೈದ್ಯ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಮಗುವನ್ನು ಮಾರಿ ಖರೀದಿಸಿದ್ದ ದುಬಾರಿ ಮೊಬೈಲ್ಗಳು ಮತ್ತು ಚಿನ್ನದ ಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

